ಕೊರೋನಾಗೆ ಬಗ್ಗೆ ಭಯ ಪಡದ ಜನ: ವಾಹನಗಳ ಓಡಾಟಕ್ಕಿಲ್ಲ ಬ್ರೇಕ್‌

By Kannadaprabha News  |  First Published Apr 22, 2020, 8:33 AM IST

ರಸ್ತೆಗಳಲ್ಲಿ ವಾಹನಗಳ ದಾಂಗುಡಿ| ಸೀಜ್‌, ದಂಡ ಹಾಕಲು ಮುಂದಾದರೆ ಪ್ರಭಾವಿಗಳ ಹೆಸರು ಹೇಳುವ ಸವಾರರು| ಯಾವ ವಾಹನ ತಡೆಯಬೇಡಿ ಎಂಬ ಆದೇಶ ಹೊರಡಿಸಿ ಎಂದ ಪೊಲೀಸರು| ಒಂದೊಂದು ಕಾರಣ ಹೇಳುತ್ತ ಪೊಲೀಸರಿಗೆ ತಲೆನೋವು ತರಿಸುತ್ತಿರುವ ವಾಹನ ಸವಾರರು|


ಹಾವೇರಿ(ಏ.22): ಲಾಕ್‌ಡೌನ್‌ ಅವಧಿ ವಿಸ್ತರಣೆಯಾದ ಬಳಿಕ ಜಿಲ್ಲೆಯಲ್ಲಿ ಜನ ಹಾಗೂ ವಾಹನ ಸಂಚಾರ ಪ್ರಮಾಣ ಹೆಚ್ಚಿದೆ. ಪ್ರಭಾವಿಗಳ ಹೆಸರು ಹೇಳಿ ಪೊಲೀಸರೊಂದಿಗೆ ವಾಹನ ಸವಾರರು ವಾಗ್ವಾದಕ್ಕೂ ಇಳಿಯುತ್ತಿದ್ದಾರೆ.

ಲಾಕ್‌ಡೌನ್‌ ಆದೇಶ ಪಾಲಿಸುವಂತೆ ಹಲವು ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದರೂ ಮನೆ ಬಿಟ್ಟು ಹೊರಬೀಳುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲರೂ ಒಂದೊಂದು ಕಾರಣ ಹೇಳುತ್ತ ಪೊಲೀಸರಿಗೆ ತಲೆನೋವು ತರಿಸುತ್ತಿದ್ದಾರೆ. ಒಂದು ಕಡೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂಬ ಸೂಚನೆ ನೀಡುತ್ತಿದ್ದರೆ, ಸ್ಥಳೀಯ ಜನಪ್ರತಿನಿಧಿಗಳು ಪೊಲೀಸರ ಕರ್ತವ್ಯದಲ್ಲಿ ಮಧ್ಯ ಪ್ರವೇಶಿಸುತ್ತಿದ್ದಾರೆ. ಯಾರ ಮಾತನ್ನು ಕೇಳಬೇಕು ಎಂಬುದು ಪೊಲೀಸರಿಗೆ ತಿಳಿಯದಂತಾಗಿದೆ. ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಆರಂಭದಲ್ಲಿ ಲಾಠಿ ಬೀಸಿದ್ದ ಪೊಲೀಸರು ಬಳಿಕ ದಂಡ, ವಾಹನ ಸೀಜ್‌ ಅಸ್ತ್ರ ಪ್ರಯೋಗಿಸಿದ್ದರು. ಈಗ ಅದೂ ಕೂಡ ನಿಂತಿದೆ. ಇದರಿಂದ ರಸ್ತೆ ಮೇಲೆ ಮಾಮೂಲಿ ದಿನಗಳಂತೆ ವಾಹನ ಓಡಾಟ ಶುರುವಾಗಿದೆ.

Tap to resize

Latest Videos

ಕೊರೋನಾ ವಿರುದ್ಧ ಹೋರಾಟ: ಮೇ. 3 ರವರೆಗೆ APMC ಬಂದ್‌

ಮಾಮೂಲಿ ದಿನಗಳಂತೆ ಓಡಾಟ:

ಜಿಲ್ಲಾ ಕೇಂದ್ರ ಹಾವೇರಿ ನಗರದ ಮುಖ್ಯ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಲಾಕ್‌ಡೌನ್‌ ಆರಂಭದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಅಂಜಿದ್ದ ಸವಾರರು, ಈಗ ವಿವಿಧ ಕಾರಣ ಹೇಳಿ ಪೊಲೀಸರಿಗೇ ದಾರಿತಪ್ಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹಣ್ಣು, ತರಕಾರಿ, ದಿನಸಿ, ಬಿತ್ತನೆ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣ ಹಾಗೂ ಸಲಕರಣೆಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಅದೇ ರೀತಿ ಕೃಷಿ ಕಾರ್ಯಕ್ಕೂ ಅಡ್ಡಿಯಿಲ್ಲ ಎಂಬ ಸೂಚನೆ ನೀಡಲಾಗಿದೆ. ಇನ್ನು ಔಷಧಿ, ಆಸ್ಪತ್ರೆ ಇತ್ಯಾದಿ ತುರ್ತು ಅಗತ್ಯಗಳಿಗೆ ಮೊದಲಿನಿಂದಲೂ ರಿಯಾಯಿತಿಯಿದೆ. ಇದೆಲ್ಲ ಕಾರಣಗಳನ್ನು ಕೆಲವು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ನಮಗೂ ಸಾಕಾಗಿದೆ:

ಒಂದು ಕಡೆ ಕೊರೋನಾ ಆತಂಕ ಪೊಲೀಸರಿಗೂ ಇದೆ. ಮತ್ತೊಂದು ಕಡೆ ಬಿರುಬಿಸಿಲಲ್ಲಿ ರಸ್ತೆ ಮೇಲೆ ವಾಹನ ಸಂಚಾರ ನಿಯಂತ್ರಣಕ್ಕೆ ನಿಲ್ಲುವುದೆಂದರೆ ಸುಲಭದ ಕೆಲಸವಲ್ಲ. ಆದರೂ ಸರ್ಕಾರದ ಆದೇಶದಂತೆ ಬೆಳಗ್ಗೆಯಿಂದಲೇ ಪ್ರಮುಖ ಸರ್ಕಲ್‌ಗಳಲ್ಲಿ ನಿಂತು ಅನಗತ್ಯವಾಗಿ ರಸ್ತೆಗಿಳಿಯುತ್ತಿರುವವರ ಮೇಲೆ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಆದರೆ, ಬಹುತೇಕರು ಪ್ರಭಾವಿಗಳ ಹೆಸರು ಹೇಳಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ಇನ್ನು ಕೆಲವರು ಹೊಲಕ್ಕೆ ಹೋಗುತ್ತಿದ್ದೇವೆ, ಆಸ್ಪತ್ರೆ, ಹಾಲು, ಔಷಧಿ ಇತ್ಯಾದಿ ಕಾರಣ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಜನರಿಗೆ ತಿಳಿಹೇಳಿ, ವಾಗ್ವಾದ ಮಾಡಿ ಪೊಲೀಸರಿಗೂ ಬೇಸರವಾಗಿದೆ.

ನಮಗೂ ಸಾಕಾಗಿ ಹೋಗಿದೆ. ಈ ಜನರು ಎಷ್ಟುಹೇಳಿದರೂ ಕೇಳುತ್ತಿಲ್ಲ. ಒಮ್ಮೆ ಕೊರೋನಾ ಕಾಲಿಟ್ಟರೆ ಏನಾಗಬಹುದು ಎಂಬ ಆತಂಕವಾದರೂ ಸಾರ್ವಜನಿಕರಲ್ಲಿ ಇರಬೇಕಿತ್ತು. ವಾಹನ ಸೀಜ್‌ ಮಾಡಿದರೆ ಪ್ರಭಾವಿಗಳಿಂದ ಕರೆ ಮಾಡಿಸುತ್ತಾರೆ. ಅಷ್ಟಿದ್ದರೆ ಯಾವ ವಾಹನವನ್ನೂ ತಡೆಯಬೇಡಿ ಎಂದು ಆದೇಶ ಮಾಡಿಸಿಬಿಡಿ ಎಂದು ಹೇಳುತ್ತೇವೆ. ಪ್ರಭಾವಕ್ಕೆ ಬಗ್ಗದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರತಿ ವಾಹನ ಸವಾರರೊಂದಿಗೂ ವಾಗ್ವಾದ ನಡೆಸುತ್ತ ನಮ್ಮ ತಲೆಯೇ ಹಾಳಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಸಿಬ್ಬಂದಿಯೊಬ್ಬರು ತಮ್ಮ ಅಸಹಾಕತೆ ವ್ಯಕ್ತಪಡಿಸಿದರು.

ಭಯವೇ ಇಲ್ಲ

ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ವೈರಸ್‌ ಪಾಸಿಟಿವ್‌ ಇರುವ ಪ್ರಕರಣ ಇನ್ನೂ ಪತ್ತೆಯಾಗಿಲ್ಲ. ಇದು ಕೆಲವರಿಗೆ ರಸ್ತೆಗಿಳಿಯಲು ಧೈರ್ಯ ತಂದುಕೊಟ್ಟಿದೆ. ನಮ್ಮ ಜಿಲ್ಲೆಯಲ್ಲಿ ಕೊರೋನಾ ಇಲ್ಲ, ಎಲ್ಲಿಗೋ ಹೋದರೂ ತೊಂದರೆಯಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜತೆಗೆ, ಮಾಸ್ಕ್‌ ಕೂಡ ಹಾಕಿಕೊಳ್ಳದೇ ಓಡಾಡುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ರಸ್ತೆ ಮೇಲೆ ಜನ ಹಾಗೂ ವಾಹನ ಸಂಚಾರ ಹೆಚ್ಚುತ್ತಿದೆ. ಮೇ 3ರ ತನಕ ಲಾಕ್‌ಡೌನ್‌ ಇದ್ದರೂ ಇಗಲೇ ಈ ರೀತಿ ವರ್ತಿಸುತ್ತಿರುವ ಜನರಿಂದ ಇತರರಿಗೆ ಆತಂಕ ಎದುರಾಗಿದೆ.
 

click me!