ಕೊರೋನಾ ಇನ್ನೂ ಹೋಗಿಲ್ಲ: ಮೈಮರೆತರೆ 3ನೇ ಅಲೆ ಬಂದೀತು ಜೋಕೆ..!

By Kannadaprabha News  |  First Published Jun 18, 2021, 3:41 PM IST

* ಅನ್‌ಲಾಕ್‌ ಆದಾಕ್ಷಣ ಬೇಕಾಬಿಟ್ಟಿ ಓಡಾಟ
* ಮಾರುಕಟ್ಟೆ ಪ್ರದೇಶದಲ್ಲಿ ಜನ ಜಾತ್ರೆ
* ವಿಜಯಪುರ ಜಿಲ್ಲೆಯಲ್ಲಿ ಭಾಗಶಃ ಅನ್‌ಲಾಕ್‌ 
 


ರುದ್ರಪ್ಪ ಆಸಂಗಿ

ವಿಜಯಪುರ(ಜೂ.18):  ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆಯೇ ಅನ್‌ಲಾಕ್‌ ಆಗಿದ್ದು, ಆದರೆ ಜನರು ಮೈ ಮರೆತು ಓಡಾಡುತ್ತಿರುವುದರಿಂದಾಗಿ ಅನ್‌ಲಾಕೇ ಮತ್ತೆ ಲಾಕ್‌ಡೌನ್‌ಗೆ ದಾರಿಯಾಗುತ್ತಾ? ಎಂದು ನಡುಕ ಹುಟ್ಟಿಸಿದೆ.
ಕೊರೋನಾ ಮೂರನೇ ಅಲೆ ಸೆಪ್ಟೆಂಬರ್‌, ಅಕ್ಟೋಬರ್‌ಕ್ಕಿಂತಲೂ ಮುಂಚಿತವಾಗಿಯೇ ವಕ್ಕರಿಸುವುದೇ? ಎಂಬ ಭೀತಿ ಈಗ ಎಲ್ಲ ಜನರನ್ನು ತಲ್ಲಣಗೊಳಿಸಿದೆ. ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದಾಳಿ ಮಾಡುತ್ತದೆ ಎಂಬುವುದು ಇನ್ನಷ್ಟುಗಾಬರಿಗೊಳಿಸಿದೆ.

Tap to resize

Latest Videos

undefined

ಕೊರೋನಾ ಎರಡನೇ ಅಲೆಯಿಂದ ಸಾಕಷ್ಟು ಸಾವು- ನೋವುಗಳು ಸಂಭವಿಸಿವೆ. ಎರಡನೇ ಅಲೆಯ ಹೊಡೆತದಿಂದ ತತ್ತರಿಸಿದ ಬಹುತೇಕ ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಕೊರೋನಾ ಹೊಡೆತಕ್ಕೆ ಸಿಕ್ಕಿ ನೋವುಂಡ ಜನರು ಮನೆ ಬಾಗಿಲು ಬಿಟ್ಟು ಹೊರ ಬರುತ್ತಿಲ್ಲ. ಆದರೆ ಕೊರೋನಾ ಗಂಧ ಗಾಳಿ ಗೊತ್ತಿಲ್ಲದ ಜನರು ಕೊರೋನಾ ನನಗೇನೂ ಮಾಡಕ್ಕಾಗಲ್ಲ ಎಂಬ ನಿರ್ಲಕ್ಷ್ಯತನದಿಂದ ಅನ್‌ಲಾಕ್‌ ಬಳಿಕ ಹೊರಗಡೆ ಬೇಕಾಬಿಟ್ಟಿಓಡಾಡುತ್ತಿದ್ದಾರೆ. ಈ ನಿರ್ಲಕ್ಷ್ಯವೇ ಜನರಿಗೆ ಬರುವ ದಿನಗಳಲ್ಲಿ ಮತ್ತೊಮ್ಮೆ ಮುಳವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ನಿಯಮ ಪಾಲನೆ ಇರಲಿ:

ಇನ್ನೂ ಕೊರೋನಾ ಸಂಪೂರ್ಣವಾಗಿ ತಗ್ಗಿಲ್ಲ. ಅದು ತನ್ನ ವೇಗವನ್ನು ಕಡಿಮೆ ಮಾಡಿದೆ ಅಷ್ಟೇ. ಅದಿನ್ನೂ ಗುಪ್ತಗಾಮಿನಿಯಾಗಿಯೇ ಜೀವಂತವಿದೆ. ಅದಕ್ಕೆ ಜನರು ಸಿಕ್ಕರೆ ಒಬ್ಬರಿಂದ ಒಬ್ಬರಿಗೆ ಹಬ್ಬುವುದು ಕ್ಷಣ ಮಾತ್ರ ಸಾಕು. ಜನರು ಹೊರಗಡೆ ಸಂಚರಿಸುವುದು ಎಂದರೆ ಕೊರೋನಾಕ್ಕೆ ಹಬ್ಬದೂಟವಿದ್ದಂತೆ. ಹೊರಗಡೆ ಸಂಚರಿಸುವ ಜನರು ಮಾಸ್ಕ್‌, ಸ್ಯಾನಿಟೈಸರ್‌, ಸಾಮಾಜಿಕ ಅಂತರದ ನಿಯಮಗಳನ್ನು ಪರಿಪಾಲನೆ ಮಾಡದಿದ್ದರೆ ಕೊರೋನಾ ಮಹಾಮಾರಿ ಮತ್ತೆ ಎಲ್ಲರಲ್ಲೂ ಹರಡಿ ನೂರಾರು ಜೀವಗಳನ್ನು ಬಲಿ ತಗೆದುಕೊಂಡರೆ ಅಚ್ಚರಿ ಪಡಬೇಕಿಲ್ಲ.

ಬದುಕಿಗೆ ಕತ್ತಲೇ ತಂದ ಬ್ಲ್ಯಾಕ್‌ ಫಂಗಸ್‌..!

ಎಚ್ಚರಿಕೆ ಇರಲಿ:

ಜಿಲ್ಲೆಯಲ್ಲಿ ಭಾಗಶಃ ಅನ್‌ಲಾಕ್‌ ಆಗಿದೆ. ಆದರೆ ಜನರು ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರದ ಪರಿವೇಯಿಲ್ಲದೆ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿರುವುದು ಜನರಲ್ಲಿ ಕೊರೋನಾ ಮೂರನೇ ಅಲೆ ತಜ್ಞರು ಎಚ್ಚರಿಸಿದ ದಿನಕ್ಕಿಂತಲೂ ಮೊದಲೇ ದಾಳಿಯಿಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಜನರು ಮಾಸ್ಕ್‌ ಬಾಯಿ, ಮೂಗಿಗೆ ಹಾಕದೇ ಕೊರಳಲ್ಲಿ ಹಾಕಿಕೊಂಡು ತಿರುಗುತ್ತಿದ್ದಾರೆ. ಸ್ಯಾನಿಟೈಸರ್‌ ಎಂಬುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ.

ಕಿಸೆಯಲ್ಲಿ ಸ್ಯಾನಿಟೈಸರ್‌ ಇಟ್ಟುಕೊಂಡು ಆಗಾಗ ಸಿಂಪರಣೆ ಮಾಡಿಕೊಳ್ಳುವುದು ಬಹುತೇಕ ಕಡೆಗಳಲ್ಲಿ ಜನರಲ್ಲಿ ಕಂಡು ಬರುತ್ತಿಲ್ಲ. ಸಾಮಾಜಿಕ ಅಂತರವಂತೂ ಮುಗಿದೇ ಹೋಯಿತು. ವಿಜಯಪುರದ ಮಾರುಕಟ್ಟೆಪ್ರದೇಶದಲ್ಲಿ ಜನ ದಟ್ಟನೆ ಅತಿಯಾಗಿದೆ. ಇಂಥ ಮಾರುಕಟ್ಟೆಯಲ್ಲಿ ಒಬ್ಬರ ಮೇಲೊಬ್ಬರು ಬಿದ್ದುಕೊಂಡು ಮೈಗೆ ಮೈ ತಾಗಿಸಿಕೊಂಡು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಇದು ಕೊರೋನಾ ಮೂರನೇ ಅಲೆಗೆ ಸ್ವತಃ ನಾವೇ ಮೈ ಮರೆತು ಆಹ್ವಾನ ಕೊಟ್ಟಂತಾಗುತ್ತದೆ.ಈ ತಪ್ಪು ನಿರಂತರವಾಗಿ ಇದೇ ರೀತಿ ಮುಂದುವರಿದರೆ ಗ್ಯಾರಂಟಿ ಮೂರನೇ ಅಲೆಗೆ ನಾವು ತಲೆದಂಡ ಕೊಡುವ ಪರಿಸ್ಥಿತಿ ಬರುತ್ತದೆ ಎಂಬ ಎಚ್ಚರಿಕೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ.
ಕೊರೋನಾ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಇಲ್ಲದಿದ್ದರೆ ಕೊರೋನಾ ಮೂರನೇ ಅಲೆಯನ್ನು ಆ ದೇವರಿಂದಲೂ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದರೆ ಅತಿಶಯೋಕ್ತಿ ಎನಿಸದು.

ಅವಧಿ ನಂತರವೂ ಓಪನ್‌:

ಲಾಕ್‌ಡೌನ್‌ ಸಡಿಲಿಸಿ ಮೊದಲ ಹಂತದಲ್ಲಿ ಅನ್‌ಲಾಕ್‌ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ನಿಗದಿಯಾಗಿದ್ದ ಅಂಗಡಿ ಮುಂಗಟ್ಟುಗಳ ಸಮಯವನ್ನು ಮತ್ತೆ ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಲಾಗಿದೆ. ಮಧ್ಯಾಹ್ನ 2 ಗಂಟೆ ನಂತರವೂ ಕೆಲವು ಕಡೆ ಅಂಗಡಿ ಮುಂಗಟ್ಟುಗಳು ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಇನ್ನು ಕೆಲವೊಂದು ಅಂಗಡಿ ಮುಂಗಟ್ಟುಗಳನ್ನು ಮಾತ್ರ ತೆರೆಯಲು ಅವಕಾಶವಿದ್ದರೂ ಅನುಮತಿ ಪಡೆಯದ ಚಿನ್ನದ ಅಂಗಡಿ, ಬಟ್ಟೆಅಂಗಡಿಗಳು ಅಲ್ಲಲ್ಲಿ ಆರಂಭವಾಗಿವೆ. ಹೀಗಾಗಿ ಇಕ್ಕಟ್ಟಿನ ಪ್ರದೇಶದಲ್ಲಿ ಜನದಟ್ಟನೆ ಹೆಚ್ಚಾಗಿ ಕೊರೋನಾ ಹರಡಲು ವೇದಿಕೆಯಾದಂತಾಗಿದೆ.
 

click me!