* ದೇವರ ಮೆರವಣಿಗೆ ಕಳುಹಿಸಿ ಎಂದ ದಲಿತರ ಮೇಲೆ ದೌರ್ಜನ್ಯ.
* ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹುಣಸೇಘಟ್ಟ ಗ್ರಾಮದಲ್ಲಿ ಘಟನೆ.
* ಮುಜರಾಯಿ ಇಲಾಖೆಗೆ ಸೇರಿರುವ ಆಂಜನೇಯ ದೇವಸ್ಥಾನ.
ತುಮಕೂರು(ಏ.27): ರಾಜ್ಯ, ದೇಶದಲ್ಲಿ ಅಲ್ಲಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಿರುವಾಗಲೇ ತುಮಕೂರಿನಲ್ಲಿ ದಲಿತರ ಬೀದಿಗೆ ದೇವರನ್ನ ಕಳುಹಿಸಲು ಹಿಂದೇಟು ಹಾಕಿದ ಪ್ರಕರಣ ಸದ್ದು ಮಾಡುತ್ತಿದ್ದು, ಇದೇನಾ ಸಮಾನತೆ ಎಂಬ ಪ್ರಶ್ನೆಗಳು ಏಳಲಾರಂಭಿಸಿವೆ.
ಹೌದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹುಣಸೇಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ಮುಜರಾಯಿ ಇಲಾಖೆಗೆ ಸೇರಿರುವ ಆಂಜನೇಯ ದೇವಸ್ಥಾನ ದೇವರ ಮೆರವಣಿಗೆ ಕಳುಹಿಸಿ ಎಂದ ದಲಿತರ ಮೇಲೆ ದೌರ್ಜನ್ಯವೆಸಗಿದೆ ಹಾಗೂ ಮೇಲು ಕೀಳೆಂಬ ವಿಚಾರವನ್ನು ಮತ್ತೆ ಸದ್ದು ಮಾಡುವಂತೆ ಮಾಡಿದೆ.
ಪ್ರತಿವರ್ಷ ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತೆ. ಅದರಂತೆ ಇದೇ ಏಪ್ರಿಲ್ 23, 24 ರಂದು ಗ್ರಾಮದಲ್ಲಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಾಡಲಾಗಿತ್ತು. ಈ ವೇಳೆ ಗ್ರಾಮದ ತುಂಬಾ ಆಂಜನೇಯ ಸ್ವಾಮಿ, ದೊಡ್ಡಮ್ಮ, ಚಿಕ್ಕಮ್ಮ ದೇವರುಗಳನ್ನ ಗ್ರಾಮಸ್ಥರು ಮೆರವಣಿಗೆ ಮಾಡಿದ್ದರು. ಆದರೆ ದಲಿತರ ಕಾಲೋನಿ ಬರುತ್ತಿದ್ದ ಹಾಗೆ ದೇವರನ್ನ ಮೆರವಣಿಗೆ ಮಾಡದೇ ವಾಪಸ್ ಕೊಂಡೊಯ್ದಿದ್ದರು. ಆದರೆ ದಲಿತ ಕಾಲೋನಿಯಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಂದು, ಮಂಗಳಾರತಿ ಮಾಡಿಸಿಕೊಂಡು ಹೋಗಿ ಎಂದು ಪಟ್ಟು ಹಿಡಿದಿದ್ದರು.
ಇದನ್ನು ಒಪ್ಪದ ಗ್ರಾಮಸ್ಥರು ದಲಿತರಿರುವ ಕಾಲೋನಿಗೆ ದೇವರನ್ನು ಕರೆದೊಯ್ಯಲು ಹಿಂದೇಟು ಹಾಕಿದ್ದಲ್ಲದೇ, ನಾವು ದಲಿತರ ಬೀದಿಗೆ ದೇವರನ್ನ ಕಳುಹಿಸಲ್ಲ. ದಲಿತರ ಬೀದಿಗೆ ದೇವರ ಮೆರವಣಿಗೆ ಕರೆತಂದರೆ ದೇವರಿಗೆ ಮೈಲಿಗೆ ಆಗುತ್ತೆ ಎಂದು ಅವಾಚ್ಯ ಶಬ್ದಗಳನ್ನೂ ಬಳಸಿದ್ದಾರೆ. ಕೊನೆಗೂ ದೇವರ ಮೆರವಣಿಗೆಯನ್ನ ದಲಿತರ ಕಾಲೋನಿಗೆ ಕಳುಹಿಸದೇ ಗ್ರಾಮಸ್ಥರು ದೌರ್ಜನ್ಯವೆಸಗಿದ್ದಾರೆ
ಸದ್ಯ ಜಾತಿನಿಂದನೆ ಮಾಡಿ ದಲಿತರ ವಿರುದ್ಧ ದೌರ್ಜನ್ಯ ಎಸಗಿದ್ದಾರೆಂದು ಗ್ರಾಮಸ್ಥರ ವಿರುದ್ಧ ಆರೋಪಿಸಿ ನೊಣವಿನಕೆರೆ ಪೊಲೀಸ್ ಠಾಣೆ ಹಾಗೂ ತಿಪಟೂರು ತಹಸೀಲ್ದಾರ್ ಗೆ ದಲಿತರು ದೂರು ನೀಡಿದ್ದಾರೆ.