ರೈಲು ವೇಳಾಪಟ್ಟಿ ಬದಲಾವಣೆಗೆ ಮಾಡಬೇಕು ಎಂದು ದಾವಣಗೆರೆ-ಕರಾವಳಿ ರೈಲ್ವೆ ಹೋರಾಟ ಸಮಿತಿ ಆಗ್ರಹಿಸಿದೆ. ಸಮಯ ಬದಲಾವಣೆಯಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಮಿತಿ ಹೇಳಿದೆ.
ದಾವಣಗೆರೆ (ಮಾ.24): ವಿಜಯಪುರ-ಮಂಗಳೂರು ಮಧ್ಯೆ ಸಂಚರಿಸುವ ರೈಲಿನ ವೇಳಾಪಟ್ಟಿಬದಲಿಸುವಂತೆ ದಾವಣಗೆರೆ-ಕರಾವಳಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ನಿರ್ಮಾಲ್ ರಾಜೇಂದ್ರ ಬಂಗೇರಾ ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿಜಯಪುರದಿಂದ ಹೊರತು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ತಡರಾತ್ರಿ ಅಥವಾ 3.30ಕ್ಕೆ ಬಂದು ತಲುಪಿ, ಮಂಗಳೂರಿಗೆ ಮಾರನೆಯ ದಿನ ಮಧ್ಯಾಹ್ನ 12ಕ್ಕೆ ತಲುಪುತ್ತಿರುವ ರೈಲಿನ ವೇಳಾಪಟ್ಟಿಬದಲಿಸಬೇಕು ಎಂದರು.
ದಾವಣಗೆರೆಗೆ ತಡರಾತ್ರಿ 3ರಿಂದ 3.30ರ ಅವದಿಯಲ್ಲಿ ಬಂದು ಹೋಗುವ ವಿಜಯಪುರ-ಮಂಗಳೂರು ರೈಲನ್ನು ಬೆಳಗಿನ ಜಾವ 6 ಗಂಟೆಗೆ ಮಂಗಳೂರು ತಲುಪುವಂತೆ ಸಮಯ ಬದಲಾವಣೆ ಮಾಡಬೇಕು. ಈಗ ಸಂಚರಿಸುತ್ತಿರುವ ರೈಲು ಮಧ್ಯಾಹ್ನ 12ಕ್ಕೆ ಮಂಗಳೂರು ತಲುಪುವುದರಿಂದ ಇಲ್ಲಿಂದ ಮಣಿಪಾಲ, ಏನಪೋಯಾ ಆಸ್ಪತ್ರೆಗೆ ಹೋಗುವ ಮತ್ತು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಂತಹ ಯಾತ್ರಾರ್ಥಿಗಳು, ಕರಾವಳಿ ಮೂಲದ ಜನರಿಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.
ವಿಶ್ವದ ಅತೀ ಎತ್ತರದ ರೈಲು ಸೇತುವೆ ಕಮಾನು ಕಾಮಗಾರಿ ಪೂರ್ಣ; ಹೆಚ್ಚಾಯ್ತು ಕಾಶ್ಮೀರದ ಸೌಂದರ್ಯ!
ಸ್ಥಳೀಯರು, ರೋಗಿಗಳು, ಹಿರಿಯ ನಾಗರೀಕರು, ಮಹಿಳೆಯರಿಗೆ, ಆಸ್ತಿಕರಿಗೆ ಅನುಕೂಲವಾಗುವಂತೆ ಎಲ್ಲರಿಗೂ ಸೂಕ್ತವಾಗುವ ಸಮಯಕ್ಕೆ ಅಂದರೆ ಬೆಳಗ್ಗೆ 6ಕ್ಕೆ ಮಂಗಳೂರನ್ನು ರೈಲು ತಲುಪುವಂತಾಗಬೇಕು. ಹೀಗೆ ಮಾಡುವುದರಿಂದ ಬಡ, ಮಧ್ಯಮ ವರ್ಗದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿರುವ ಅಸಂಖ್ಯಾತ ಕರಾವಳಿಯ ಕಾರ್ಮಿಕರು, ಕೃಷಿಕರು, ಸರ್ಕಾರಿ ನೌಕರರು, ಶ್ರಮಿಕರಿಗೂ ಇದರಿಂದ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ವಿಜಯಪುರದಿಂದ ಹೊರಡುವ ರೈಲು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ರಾತ್ರಿ 8ರಿಂದ 9 ಅಥವಾ 10 ಗಂಟೆ ಒಳಗಾಗಿ ತಲುಪಿದರೆ ಬೆಳಿಗ್ಗೆ 6 ಗಂಟೆಗೆ ಮಂಗಳೂರು ತಲುಪುವುದರಿಂದ ಎಲ್ಲಾ ವರ್ಗದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ದಾವಣಗೆರೆ, ಹರಿಹರದಿಂದ ನೂರಾರು ರೋಗಿಗಳು ಮಂಗಳೂರಿನ ಏನಪೋಯಾ ಆಸ್ಪತ್ರೆ, ಕಸ್ತೂರಿ ಬಾ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ, ಕೆ.ಎಸ್.ಹೆಗಡೆ ಆಸ್ಪತ್ರೆ ಹಾಗೂ ಪುಣ್ಯಕ್ಷೇತ್ರಗಳಾದ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಪೊಳಲಿ ಮತ್ತಿತರೆ ದೇವರ ದರ್ಶನ ಮಾಡುವ ಭಕ್ತರಿಗೂ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಬೆಲೆ ಏರಿಕೆಯ ಇಂದಿನ ದುಬಾರಿ ದಿನಮಾನಗಳಲ್ಲಿ ಬಸ್ಸಿನ ಪ್ರಯಾಣ ದರ ವಿಪರೀತ ಹೆಚ್ಚಾಗಿದೆ. ದಾವಣಗೆರೆ-ಮಂಗಳೂರು ಮಧ್ಯೆ ಸಂಚರಿಸಲು 550-600 ರು. ಕೊಟ್ಟು ಹೋಗಲು ಕಷ್ಟವಾಗುತ್ತದೆ. ಆದರೆ, ರೈಲಿನಲ್ಲಿ ಆದರೆ ಬಡ, ಮಧ್ಯಮ ವರ್ಗದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಂದ್ರ ರೈಲ್ವೆ ಸಚಿವರು, ಕೇಂದ್ರ ಸರ್ಕಾರ ಹಾಗೂ ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್‌ಗೆ ಎನ್.ರಾಜೇಂದ್ರ ಬಂಗೇರಾ ಮನವಿ ಮಾಡಿದರು.