ಎಗ್ಗಿಲ್ಲದೆ ಸಾಗಿದ ಮಟ್ಕಾ ಹಾವಳಿ| ಮಟ್ಕಾ ಬುಕ್ಕಿಗಳ ಜೊತೆ ಕೆಲವು ಪೊಲೀಸರ ಶಾಮೀಲು: ಆರೋಪ| ಮಟ್ಕಾ ದಾಳಿ: ಹಣಕ್ಕಾಗಿ ಖಾಕಿಯಲ್ಲೇ ಮುಸುಕಿನ ಗುದ್ದಾಟ| ಜಿಲ್ಲೆಯ ಕೆಲವೆಡೆ ನಾಯಿಕೊಡೆಗಳಂತೆ ತಲೆಯೆತ್ತಿದ ಮಟ್ಕಾ ಅಡ್ಡೆಗಳು|
ಆನಂದ್ ಎಂ. ಸೌದಿ
ಯಾದಗಿರಿ(ಮಾ.24): ಮರಳು ಮಾಫಿಯಾದ ಜೊತೆ ಜೊತೆಯಲ್ಲೇ ಯಾದಗಿರಿಯಲ್ಲಿ ಮಟ್ಕಾ ದಂಧೆಯೂ ಎಗ್ಗಿಲ್ಲದೆ ಸಾಗಿದೆ. ಸಾವಿರಾರು ಜನರ ಬದುಕು ಮಟ್ಕಾ ದಂಧೆಯಲ್ಲಿ ಬೀದಿಪಾಲಾಗುತ್ತಿದ್ದರೆ, ಮಟ್ಕಾ ಹಾವಳಿ ತಡೆಯಬೇಕಾದ ಖಾಕಿ ಪಡೆಯ ಕೆಲವು ಅಧಿಕಾರಿಗಳೇ ದಂಧೆಕೋರರಿಗೆ ಕಾವಲು ನೀಡಿದಂತಿದೆ ಎಂಬ ಆರೋಪಗಳು ಇಲ್ಲೀಗ ಪ್ರತಿಧ್ವನಿಸುತ್ತಿವೆ.
undefined
ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಮಟ್ಕಾ ಅಡ್ಡೆಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ. ದಂಧೆಕೋರರು ಅಥವಾ ಬುಕ್ಕೀಗಳು ಇದಕ್ಕಾಗಿ ಪ್ರತ್ಯೇಕ ಗುಂಪು ಹಾಗೂ ಹಣ ಸಂಗ್ರಹಿಸುವ ಏಜೆಂಟರನ್ನು ನೇಮಿಸಿದ್ದಾರೆ. ಅಚ್ಚರಿಯೆಂದರೆ, ಮಟ್ಕಾ ಹಣ ಸಂಗ್ರಹಿಸಲು ನಗರದಲ್ಲಿ ಮಹಿಳೆಯರನ್ನು ನೇಮಿಸಿದ್ದು, ಕೆಲವು ಸಂದರ್ಭಗಳಲ್ಲಿ ಮಹಿಳೆಯರ ಮೇಲೆ ದಾಳಿ ಅಷ್ಟುಸಲೀಸಲ್ಲ ಅನ್ನುವ ಕಾರಣಕ್ಕೆ ಇಂತಹುದ್ದೊಂದು ಉಪಾಯ ಮಾಡಲಾಗಿದೆಯಂತೆ.
ತಿಂಗಳ ಹಿಂದೆ, ಯಾದಗಿರಿಯಲ್ಲಿ ಮಟ್ಕಾ ಬುಕ್ಕೀಯೊಬ್ಬನ ಮೇಲೆ ದಾಳಿ ನಡೆಸಿದಾಗ ಅಲ್ಲಿ ದೊರಕಿದ ಹಣದ ವಿಚಾರವಾಗಿ ಬಗ್ಗೆಯೇ ಪೊಲೀಸ್ ಅಧಿಕಾರಿಗಳಿಬ್ಬರ ನಡುವೆ ಮುಸುಕಿನ ಗುದ್ದಾಟವೇ ಏರ್ಪಟ್ಟಿತ್ತು. ದಾಳಿ ನಡೆಸಿದ ಸಂದರ್ಭದಲ್ಲಿ ದೊರಕಿದ ಹಣ ಹೆಚ್ಚು ಕಡಮೆ ತೋರಿಸಲಾಗಿದೆ, ವ್ಯಾಪ್ತಿ ಪ್ರದೇಶದ ಅಧಿಕಾರಿಗಳ ಗಮನ ತಂದಿಲ್ಲ ಎಂಬಿತ್ಯಾದಿ ಮೇಲಧಿಕಾರಿಗಳೆದುರು ಪರಸ್ಪರ ಅರೋಪ ಪ್ರತ್ಯಾರೋಪಗಳೇ ನಡೆದಿದ್ದವು ಎಂದು ಖಾಕಿ ವಲಯದಲ್ಲೇ ಚರ್ಚೆಗಳಾಗಿದ್ದವು. ಇನ್ನು, ದಾಳಿ ಸಂದರ್ಭದಲ್ಲಿ ಸಿಕ್ಕಿಬಿದ್ದವರು ಶಾಸಕ ವೆಂಕಟರೆಡ್ಡಿ ಮುದ್ನಾಳರ ವಶೀಲಿಗೆ ಪ್ರಯತ್ನಿಸಿದರಾದರೂ, ಅವರನ್ನು ಮುದ್ನಾಳ್ ಯದ್ವಾತದ್ವಾ ಬೈಯ್ದು ಕಳುಹಿಸಿದ್ದರು ಎನ್ನಲಾಗಿದೆ.
'ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಂದ ಬದುಕು ದುರ್ಬರ'
ಕೆಲವೊಂದು ಘಟನೆಗಳಲ್ಲಿ ಬುಕ್ಕೀಗಳು ಹಣ ಸಿಕ್ಕವರ ವಿವರಗಳನ್ನು ಇಲಾಖೆಯಲ್ಲಿನ ತಮ್ಮವರ ಗಮನಕ್ಕೆ ತಂದಾಗ, ಮೊದಲೇ ಯೋಚಿಸಿದಂತೆ ಅಲ್ಲಿ ದಾಳಿ ನಡೆದು ಹಣ ಹಂಚಿಕೆಯಾಗುತ್ತದೆ ಎಂದು ತಿಳಿಸುವ ಹೆಸರೇಳಲಿಚ್ಛಿಸದ ಇಲಾಖೆಯ ಸಿಬ್ಬಂದಿಯೊಬ್ಬರು, ಹಣ ಹಂಚಿಕೆ ವಿಚಾರವಾಗಿ ಅಥವಾ ಮಟ್ಕಾ ತಡೆಯುವಲ್ಲಿ ಖಾಕಿ ಪಡೆಯೇ ಕಾವಲು ನಿಂತಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಸುಳ್ಳು ಎಫ್‌ಐಆರ್, ಸಾಕ್ಷಿಗಳ ಬದಲಾವಣೆ ವಿಚಾರ, ದೂರು ಸ್ವೀಕರಿಸುವಲ್ಲಿ ಹಿಂದೇಟು, ಮಟ್ಕಾ ದಂಧೆ ತಡೆಯುವಲ್ಲಿ ವಿಫಲ ಮುಂತಾದ ಕಾರಣಗಳಿಂದಾಗಿ ಪೊಲೀಸ್ ಇಲಾಖೆಯ ಪ್ರಾಮಾಣಿಕ ಸಿಬ್ಬಂದಿ ಹಾಗೂ ಅಧಿಕಾರಿಗಳ ಮಜುಗರಕ್ಕೆ ಕಾರಣವಾಗಿದೆ. ಈ ಹಿಂದೆ, ಮರಳು ಸಾಗಾಣಿಕೆ ವಿಚಾರದಲ್ಲಿ ದಾಖಲೆಗಳಿದ್ದೂ ಸಹ ಯಾದಗಿರಿ ನಗರ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಲಕ್ಷಾಂತರ ರುಪಾಯಿಗಳ ಹಣ ಬೇಡಿಕೆ ಇಟ್ಟಿದ್ದಾರೆಂದು ಗೃಹ ಸಚಿವರಿಗೆ ಸಾಕ್ಷಿ ಸಮೇತ ದೂರು ನೀಡಿದ್ದ ಟಿಪ್ಪರ್ ಮಾಲೀಕರೊಬ್ಬರ ಜೊತೆ ಹರಸಾಹಸ ನಡೆಸಿ ಸಂಧಾನಕ್ಕೆ ಬಂದಿದ್ದ ಆರೋಪಿತ ಅಧಿಕಾರಿಗಳು ಅದನ್ನು ತೆರೆಮರೆಗೆ ಸರಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನು, ಇಲಾಖೆಯಲ್ಲಿನ ಇಂತಹ ಕೆಟ್ಟ ವಾತಾವರಣ ಸರಿಪಡಿಸಲು ಮುಂದಾಗಿದ್ದರೂ ಸಹ, ರಾಜಕೀಯ ಪ್ರಭಾವದಿಂದಾಗಿ ಕೆಲವೊಂದು ಪ್ರಕರಣಗಳಲ್ಲಿ ಎಸ್ಪಿ ಋುಷಿಕೇಶ ಸಹ ಅಸಹಾಯಕರಂತೆ ಕಂಡುಬರುತ್ತಿರುವುದು ವಿಪರಾರಯಸ. ಇಷ್ಟೆಲ್ಲ ನಡೆಯುತ್ತಿದ್ದರೂ ಕೈಕಟ್ಟಿದಂತಾಗಿರುವ ಅವರು ಅಧಿವೇಶನದ ನಂತರ, ವರ್ಗಾವಣೆಯ ದಾರಿಯನ್ನು ಕಾಯುತ್ತಿರುವಂತಿದೆ.