ಕಾಂಗ್ರೆಸ್‌ನಲ್ಲಿ ತಮ್ಮ ಭಾವನಿಗೆ ಮಹತ್ವದ ಸ್ಥಾನ ನೀಡಿದ ಡಿಕೆಶಿ

By Kannadaprabha NewsFirst Published Mar 24, 2021, 2:20 PM IST
Highlights

KPCC ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಭಾವನಿಗೆ ಕೈನಲ್ಲಿ ಮಹತ್ವದ ಹುದ್ದೆ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಚುರುಕು ಮೂಡಿಸುವ ಉದ್ದೇಶದಿಂದ ಈ ಆಯ್ಕೆ ಮಾಡಿದ್ದಾರೆ. 

ಚನ್ನಪಟ್ಟಣ (ಮಾ.24):  ತಾಲೂಕು ಬ್ಲಾಕ್‌ ಕಾಂಗ್ರೆಸ್‌ಗೆ ಚುರುಕು ಮೂಡಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ತಮ್ಮ ಭಾವ ಸೇರಿದಂತೆ ಇಬ್ಬರಿಗೆ ಕೆಪಿಸಿಸಿ ಸದಸ್ಯ ಸ್ಥಾನ ನೀಡಿದ್ದಾರೆ. ಅದೇ ರೀತಿ ಬ್ಲಾಕ್‌ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ತಮ್ಮ ಭಾವ ಶರತ್‌ಚಂದ್ರ ಮತ್ತು ಮಾಜಿ ಸಚಿವ ವಿ.ವೆಂಕಟಪ್ಪ ಅವರ ಮೊಮ್ಮಗ ಟಿ.ಕೆ.ಯೋಗೀಶ್‌(ಪಾಪು) ಅವರನ್ನು ತಾಲೂಕಿನಿಂದ ಕೆಪಿಸಿಸಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಡಿಕೆಶಿ ಅವರ ಸಹೋದರಿಯ ಪತಿಯಾಗಿರುವ ಶರತ್‌ ಚಂದ್ರ ಅವರು ತಾಲೂಕು ರಾಜಕೀಯದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಾರೆ ಎಂಬ ಸುದ್ದಿ ದಟ್ಟವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಲಾಯಿತು.

ಇನ್ನು ಮೈಸೂರು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಹಾಗೂ ಕೆಂಗಲ್‌ ಹನುಮಂತಯ್ಯ ಅವರ ಸಚಿವ ಸಂಪುಟದಲ್ಲಿ ವಿದ್ಯಾಮಂತ್ರಿಯಾಗಿದ್ದ ವಿ.ವೆಂಕಟಪ್ಪ ಅವರ ಮೊಮ್ಮಮಗ ಟಿ.ಕೆ.ಯೋಗೀಶ್‌ ಅವರನ್ನು ಕೆಪಿಸಿಸಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಟಿ.ಕೆ.ಯೋಗೀಶ್‌ 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಇವರ ತಂದೆ ಟಿ.ವಿ.ಕೃಷ್ಣಪ್ಪ ಸಹ ಎರಡು ಬಾರಿ ಶಾಸಕರಾಗಿದ್ದರು. ಸದ್ಯ ಟಿ.ಕೆ.ಯೋಗೀಶ್‌ ತಾಲೂಕಿನ ಪ್ರತಿಷ್ಟಿತ ಸಾರ್ವಜನಿಕ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

'ಮೂರರಲ್ಲಿ ಎರಡು ಕಡೆ ಕೈ ಗೆಲುವು : ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ' ...

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ನೇಮಕ:  ತಾಲೂಕು ಬ್ಲಾಕ್‌ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ತಾಪಂ ಮಾಜಿ ಸದಸ್ಯ ಎಸ್‌.ಆರ್‌.ಪ್ರಮೋದ್‌ ಅವರನ್ನು ನೇಮಕ ಮಾಡಿದ್ದು, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಮಾಜಿ ನಗರಸಭಾ ಸದಸ್ಯ ಸುನಿಲ್‌ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

ಎಸ್‌.ಆರ್‌.ಪ್ರಮೋದ್‌ ಡಿ.ಕೆ.ಶಿವಕುಮಾರ್‌ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯ ಗೇರು ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿದ್ದರು. ಮಾಜಿ ನಗರಸಭಾ ಸದಸ್ಯರಾಗಿದ್ದ ಸುನಿಲ್‌ ಕುಮಾರ್‌ ಕಟ್ಟಾಕಾಂಗ್ರೆಸ್‌ ಕುಟುಂಬದವರಾಗಿದ್ದ ಇವರ ತಂದೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಇವರ ತಾಯಿ ಜಿಲ್ಲಾ ಪರಿಷತ್‌ ಸದಸ್ಯರಾಗಿದ್ದರು.

ಯೋಗೇಶ್ವರ್‌ ಕಾಂಗ್ರೆಸ್‌ ನಿಂದ ದೂರಾದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಕಳೆದು ಕೊಂಡಿರುವುದು ಕೆಲ ಚುನಾವಣೆಗಳಿಂದ ವೇದ್ಯವಾಗಿದೆ. ಇದೀಗ ನೂತನ ಪದಾ​ಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಕೆಪಿಸಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಗೊಳಿಸಲು ಮುಂದಾಗಿದ್ದು, ತಾಲೂಕು ಕಾಂಗ್ರೆಸ್‌ ಸಾರಥ್ಯ ವಹಿಸಿಕೊಂಡಿರುವ ನೂತನ ಪದಾಧಿ​ಕಾರಿಗಳು ಪಕ್ಷವನ್ನು ಬಲಗೊಳಿಸಿಯಾರೇ ಎಂದು ಕಾಯ್ದು ನೋಡಬೇಕಿದೆ.

click me!