ಕೋಳಿ ಫಾರ್ಮ್‌ಗಳಿಂದಾಗಿ ಹೆಚ್ಚಾದ ನೊಣಗಳು| ಗ್ರಾಪಂ ಹರಸಾಹಸಪಟ್ಟರೂ ನಿಯಂತ್ರಣಕ್ಕೆ ಬರಲಿಲ್ಲ| ಗಗದ ಜಿಲ್ಲೆಯ ಡಂಬಳ ಹೋಬಳಿಯ ಕದಾಂಪುರ ಗ್ರಾಮ| ನೊಣಗಳ ಹಾವಳಿಯಿಂದಾಗಿ ಗ್ರಾಮದಲ್ಲಿ ಕಾಣಿಸಿಕೊಂಡ ವಾಂತಿ ಭೇದಿ, ಜ್ವರ|
ರಿಯಾಜ್ ಅಹ್ಮದ ಎಂ ದೊಡ್ಡಮನಿ
ಡಂಬಳ(ನ.19): ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಸುತ್ತ ಇರುವ ಕೋಳಿ ಫಾರ್ಮ್‌ಗಳಿಂದಾಗಿ ಮತ್ತು ಫಾರ್ಮ್‌ಗಳ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದಾಗಿ ದುರ್ನಾತದೊಂದಿಗೆ ನೊಣಗಳು ಹೆಚ್ಚಾಗಿದ್ದು, ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ.
undefined
ಗ್ರಾಮಸ್ಥರು ಮನವಿ ಸಲ್ಲಿಸಿದ ನಂತರ ಕೋಳಿ ಫಾರ್ಮ್‌ಗಳಿಗೆ ಇಲ್ಲಿನ ಸ್ಥಳೀಯ ಪಂಚಾಯಿತಿ ಆಡಳಿತ ನೋಟಿಸ್ ನೀಡಿದ್ದು, ನಂತರ ಗ್ರಾಪಂ ವತಿಯಿಂದ ಗ್ರಾಮದಲ್ಲಿ ಔಷಧಿ ಸಿಂಪರಣೆ ಮಾಡಿದೆ. ಆದರೂ ನೊಣಗಳು ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಹೆಚ್ಚಾದ ನೊಣಗಳಿಂದ ನಾನಾ ರೋಗಗಳು ಬರಬಹುದು ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.
ತಟ್ಟೆಗೆ ಮುಕುರುವ ನೊಣ:
ಕೋಳಿ ಫಾರ್ಮ್‌ನ ಹತ್ತಿರದಲ್ಲಿರುವ ಹೊಲದಲ್ಲಿ ರೈತರ ಬೆಳೆಗಳ ಮೇಲೆ ಮತ್ತು ಹೊಲದಲ್ಲಿ ರೈತರು ಊಟಕ್ಕೆ ಕುಳಿತರೆ ಸಾಕು ಊಟದ ಬುತ್ತಿಗೆ ನೂರಾರು ಸಂಖ್ಯೆಯಲ್ಲಿ ನೊಣಗಳು ಮುಕುರುತ್ತವೆ. ಈ ಮೂಲಕ ರೈತರಿಗೆ ಊಟ ಮಾಡಲು ಸಹ ಆಗದ ಸ್ಥಿತಿ ನಿರ್ಮಾಣವಾಗಿದೆ.
ಪೊಲೀಸರ ಹೆಸರಲ್ಲಿ ಫೇಸ್‌ಬುಕ್ ಖಾತೆ, ಹಣದ ಬೇಡಿಕೆ: ಕಂಗಾಲಾದ ಆರಕ್ಷಕರು..!
ಗ್ರಾಮದ ಸುತ್ತಲೂ ನಿರ್ಮಾಣವಾಗಿರುವ ಕೋಳಿ ಫಾರ್ಮ್‌ಗಳಲ್ಲಿ ಕೋಳಿಗಳಿಂದ ಉಂಟಾಗುವ ತ್ಯಾಜ್ಯವನ್ನು ಸರಿಯಾಗಿ ಸಾಗಿಸುತ್ತಿಲ್ಲ. ಪ್ರತಿದಿನ ನೂರಾರು ಕೋಳಿಗಳು ಸಾಯುತ್ತವೆ. ಅವುಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಅಲ್ಲದೆ ನಿಯಮಗಳನ್ನು ಮೀರಿ ಹೆಚ್ಚಿನ ಕೋಳಿಗಳ ಸಾಕಾಣಿಕೆ ಇರುವುದರಿಂದ ನೊಣಗಳ ಸಂಖ್ಯೆ ಗ್ರಾಮದಲ್ಲಿ ದಿನೇ ದಿನೇ ಹೆಚ್ಚಾಗಲು ಕಾರಣವಾಗಿದೆ. ನೊಣಗಳಿಂದಾಗಿ ನಮಗೆ ನೆಮ್ಮದಿಯಿಂದ ಊಟ ಮಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದಲ್ಲಿ ರೈತರು ಸಾಕಿದ ಎತ್ತು, ಆಕಳು, ಎಮ್ಮೆಗಳ ಮೇಲೆ ರಾಶಿ ರಾಶಿ ನೊಣಗಳು ಕುಳಿತುಕೊಳ್ಳುವುದಲ್ಲದೆ ಅವುಗಳ ರಕ್ತ ಹೀರುತ್ತಿವೆ. ಇದರಿಂದ ಹಲವು ಜಾನುವಾರು ರೋಗದ ಬಾಧೆಗೆ ಒಳಗಾಗುತ್ತಿವೆ. ಏನಾದರೂ ಮಾಡಿ ನೊಣಗಳಿಂದ ಮುಕ್ತಿ ನೀಡಲು ಮುಂದಾಗಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ನೊಣಗಳ ಹಾವಳಿಯಿಂದಾಗಿ ಗ್ರಾಮದಲ್ಲಿ ವಾಂತಿ ಭೇದಿ, ಜ್ವರ ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ವಿಚಿತ್ರ ಆಕಾರದ ನೊಣಗಳು ದನಕರುಗಳ ರಕ್ತ ಹೀರುತ್ತಿರುವುದರಿಂದ ಅವುಗಳ ಸ್ಥಿತಿ ಚಿಂತಾಜನಕವಾಗಿದೆ. ಕೋಳಿ ಫಾರ್ಮ್‌ಗಳನ್ನು ಸ್ಥಳಾಂತರಗೊಳಿಸಲು ಮುಂದಾಗಬೇಕು ಎಂದು ಕದಾಂಪೂರ ಗ್ರಾಮಸ್ಥ ಶಿವಪ್ಪ ಬಿಡನಾಳ ತಿಳಿಸಿದ್ದಾರೆ.
ಗ್ರಾಮದ ಪ್ರತಿ ಓಣಿಯಲ್ಲಿ ನೊಣಗಳ ಸಂಖ್ಯೆ ಹೆಚ್ಚಿದ್ದರಿಂದಾಗಿ ಗ್ರಾಮದಲ್ಲಿ ನೊಣಗಳ ನಿಯಂತ್ರಣಕ್ಕಾಗಿ ಔಷಧಿ ಸಿಂಪರಣೆ ಮಾಡಲಾಗಿದೆ. ಅಲ್ಲದೆ ನೊಣಗಳ ತಡೆಗೆ ಕೋಳಿಫಾರ್ಮ್‌ಗಳ ಸ್ವಚ್ಛತೆಗೆ ಆದ್ಯತೆ ನೀಡುವಂತೆ ನೋಟಿಸ್ ನೀಡಲಾಗಿದೆ ಎಂದು ಆಡಳಿತಾಧಿಕಾರಿ ಕದಾಂಪೂರ ಪಿಡಿಒ ಪಾರ್ವತಿ ಹೊಂಬಳ ಎಸ್.ಎಸ್. ಕಲ್ಮನಿ ಹೇಳಿದ್ದಾರೆ.