ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜೆಡಿಎಸ್‌ನಲ್ಲೇ ಸ್ಫೋಟವಾದ ಅಸಮಾಧಾನ

Kannadaprabha News   | Asianet News
Published : Nov 19, 2020, 12:49 PM ISTUpdated : Nov 19, 2020, 01:15 PM IST
ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜೆಡಿಎಸ್‌ನಲ್ಲೇ ಸ್ಫೋಟವಾದ ಅಸಮಾಧಾನ

ಸಾರಾಂಶ

ರಾಜ್ಯದ ಎರಡು  ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸೋಲು ಕಂಡಿದ್ದು ಇದೀಗ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸ್ವ ಪಕ್ಷದಲ್ಲೇ ಅಸಮಾಧಾನ ಸ್ಫೋಟವಾಗಿದೆ. 

ಚನ್ನಪಟ್ಟಣ (ನ.19):  ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಎರಡು ದಿನಗಳ ಪ್ರವಾಸದ ವೇಳಾಪಟ್ಟಿಸಿದ್ಧಪಡಿಸಲು ಕರೆದಿದ್ದ ಜೆಡಿಎಸ್‌ ಪ್ರಮುಖರ ಸಭೆಯಲ್ಲಿ ಪಕ್ಷದ ಕಾರ್ಯಕರ್ತರ ಅಸಮಾಧಾನ ಸೊ​ೕಟಗೊಂಡಿದೆ.

ಉಪ ಚುನಾವಣೆಗಳು ಹಾಗೂ ರಾಜ್ಯ ರಾಜಕಾರಣದಲ್ಲಿ ಬ್ಯುಸಿಯಾಗಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಇದೀಗ ಸ್ವಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ. ಗುರುವಾರದಿಂದ ಎರಡು ದಿನಗಳ ಕಾಲ ಕ್ಷೇತ್ರ ಪ್ರವಾಸ ಕೈಗೊಳ್ಳಲಿರುವ ಎಚ್‌ಡಿಕೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಜತೆಗೆ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಅಧಿ​ಕಾರಿಗಳು ಮತ್ತು ಪಕ್ಷದ ಮುಖಂಡರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಹಾಗೂ ಹಿರಿಯ ಮುಖಂಡರ ಸಮ್ಮುಖದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಜೆಡಿಎಸ್‌ ಮುಖಂಡ ಕಾಂಗ್ರೆಸ್‌ ಸೇರ್ಪಡೆ : ಮತ್ತೆ 3000 ಮಂದಿ ಶೀಘ್ರ ಕೈಗೆ

ದರ್ಖಾಸ್‌ ಸಮಿತಿ ಕೈ ತಪ್ಪಿದ್ದಕ್ಕೆ ಆಕ್ರೋಶ:

ತಾಲೂಕು ಬಗರ್‌ಹುಕುಂ ಸಾಗುವಳಿ ಸಮಿತಿ ಸದಸ್ಯ ಸ್ಥಾನವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ನಮ್ಮ ಪಕ್ಷದ ಶಾಸಕರು ಅಧ್ಯಕ್ಷರಾಗಿರುವ ಸಮಿತಿಗೆ ಬೇರೆ ಪಕ್ಷದವರಿಗೆ ಅವಕಾಶ ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದರು. ಈ ಹಿಂದೆ ಆಯ್ಕೆಯಾಗಿದ್ದ ನಮ್ಮ ಪಕ್ಷದ ಕಾರ್ಯಕರ್ತರಿಗೆ ನಮ್ಮವರೇ ಅಡ್ಡಗಾಲು ಹಾಕಿ ತಪ್ಪಿಸಿದ್ದಾರೆ ಎಂಬ ವಿಷಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿತು.

ಶಾಸಕರ ಆಪ್ತ ಸಹಾಯಕನಿಗೆ ತರಾಟೆ:

ತಾಲೂಕಿನ ಶಾಸಕರ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಆಪ್ತ ಸಹಾಯಕ ಕೆಂಚೇಗೌಡ ವಿರುದ್ಧ ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಕಾರ್ಯಕರ್ತರ ಕೆಲಸಗಳನ್ನು ಮಾಡಿ ಕೊಡುತ್ತಿಲ್ಲ. ಇಲಾಖೆಗಳಲ್ಲಿ ನಮ್ಮ ಕೆಲಸಗಳ ಬಗ್ಗೆ ನಿಗಾ ವಹಿಸುತ್ತಿಲ್ಲ. ಕಾರ್ಯಕರ್ತರು ಕೆಲಸ ಕಾರ್ಯಗಳ ಬಗ್ಗೆ ಹೇಳಿದರೆ ನಿರ್ಲಕ್ಷ್ಯ ಮಾಡುತ್ತಾರೆ ಎಂದು ಆಪ್ತ ಸಹಾಯಕ ಕೆಂಚೇಗೌಡ ವಿರುದ್ಧ ಸಭೆಯುದ್ದಕ್ಕೂ ತಮ್ಮ ಆಕ್ರೋಶವನ್ನು ಕಾರ್ಯಕರ್ತರು ಹೊರಹಾಕಿದರು.

ಹೊರ ಜಿಲ್ಲೆಗೆಯವರಿಗೆ ಗುತ್ತಿಗೆ:

ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಲೂಕಿನಲ್ಲಿ ನಡೆದಿರುವ ಎಲ್ಲ ಕಾಮಗಾರಿಗಳ ಗುತ್ತಿಗೆ ರಾಮನಗರ, ಮಂಡ್ಯ, ಮದ್ದೂರು ಹಾಗೂ ಹಾಸನ ಭಾಗದ ಪ್ರಭಾವಿಗಳಿಗೆ ಸಿಕ್ಕಿದೆ. ತಾಲೂಕಿನ ಒಂದಿಬ್ಬರು ದೊಡ್ಡ ಗುತ್ತಿಗೆದಾರರು ಒಂದೆರಡು ಕಾಮಗಾರಿ ಮಾಡಿದ್ದನ್ನು ಬಿಟ್ಟರೆ ಬೇರೆ ಯಾರಿಗೂ ಕೆಲಸವಾಗಿಲ್ಲ. ಕಾರ್ಯಕರ್ತರಿಗೆ ಅ​ಧಿಕಾರದಲ್ಲಿದ್ದಾಗ ಸಹಕಾರವಾಗದಿದ್ದರೆ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವುದಾದರೂ ಹೇಗೆ ಎಂದು ಕಾರ್ಯಕರ್ತರು ತಮ್ಮ ಮುಖಂಡರನ್ನು ತರಾಟೆಗೆ ತೆಗೆದು ಕೊಂಡರು.

ಬಿಜೆಪಿ ಮುಖಂಡರಿಗೆ ಕೆಲಸ:

ನಮ್ಮ ಶಾಸಕರಾಗಿರುವ ಎಚ್‌ಡಿಕೆ ಅನುದಾನ ತರುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದಾರೆ. ಸಣ್ಣಪುಟ್ಟಕೆಲಸವೂ ಅವರಿಗೇ ಹೋಗುತ್ತಿದೆ. ನಮ್ಮ ಶಾಸಕರು ತರುತ್ತಿರುವ ಅನುದಾನದಲ್ಲಿ ನಮ್ಮ ಕಾರ್ಯಕರ್ತರಿಗೆ ಸ್ವಲ್ಪವೂ ಅನುದಾನ ಸಿಗದಿದ್ದರೆ ಹೇಗೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ತಲೆ ಮೇಲೆ ಕೈಹೊತ್ತ ಮುಖಂಡರು:

ಕಾರ್ಯಕರ್ತರು ದೂರುಗಳ ಸುರಿಮಳೆ ಸುರಿಸುತ್ತಿದ್ದರೆ ಇದಕ್ಕೆ ಉತ್ತರ ನೀಡಲಾಗದೆ ತಾಲೂಕು ಜೆಡಿಎಸ್‌ ಮುಖಂಡ ಹಾಪ್‌ಕಾಮ್ಸ್‌ ದೇವರಾಜು ತಲೆ ಮೇಲೆ ಕೈಹೊತ್ತು ಕೂತಿದ್ದು ವಿಶೇಷ ವೆನಿಸಿತು. ಎಲ್ಲ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿ ಸಮಾಧಾನಪಡಿಸುವ ವೇಳೆಗೆ ತಾಲೂಕು ಜೆಡಿಎಸ್‌ ಮುಖಂಡರು ಹೈರಾಣಾಗಿ ಹೋದರು.

ನಮಗೂ ಅವಕಾಶ ಕೊಡಿ:  ಸಭೆಯಲ್ಲಿ ಮಾತನಾಡಿದ ಕಾರ್ಯಕರ್ತ ಕೆಲವರು, ಕುಮಾರಸ್ವಾಮಿ ಅಪರೂಪಕ್ಕೆ ಕ್ಷೇತ್ರಕ್ಕೆ ಬರುತ್ತಾರೆ. ಅವರು ಬಂದಾಗ ನಮ್ಮ ಕಷ್ಟಸುಖ ಹೇಳಿಕೊಳ್ಳಲು ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಿ, ದೊಡ್ಡ ದೊಡ್ಡ ಮುಖಂಡರೇ ಅವರ ಸುತ್ತಾ ಮುತ್ತಿಕೊಂಡರೆ ನಾವು ಅವರ ಹತ್ತಿರ ಹೋಗುವುದಾದರೂ ಹೇಗೆ, ಬೆಂಗಳೂರಿಗೆ ಹೋಗಲಾಗದಷ್ಟುಶಕ್ತಿ ಇರುವ ನಮ್ಮಂತ ಸಾಮಾನ್ಯ ಕಾರ್ಯಕರ್ತರಿಗೆ ಭೇಟಿ ವೇಳೆ ಅವಕಾಶ ನೀಡಿ ಎಂದು ಸಲಹೆ ನೀಡಿದರು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ