ಬಳ್ಳಾರಿ ಜಿಲ್ಲೆಯ ವಿಭಜನೆಯಿಂದ ಬಿಜೆಪಿಗೆ ಯಾವ ಅನುಕೂಲವಾಗುವುದಿಲ್ಲ. ಬದಲಿಗೆ ನಷ್ಟವೇ ಆಗಲಿದೆ. ಅಖಂಡ ಜಿಲ್ಲೆಯನ್ನು ಇಬ್ಭಾಗ ಮಾಡಿದರೆ ಜಿಲ್ಲೆಯ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ: ಶಾಸಕ ಜಿ. ಸೋಮಶೇಖರ ರೆಡ್ಡಿ ಆಕ್ರೋಶ
ಬಳ್ಳಾರಿ(ನ.19): ವಿಜಯನಗರ ಪ್ರತ್ಯೇಕ ಜಿಲ್ಲೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಮುಖ್ಯಮಂತ್ರಿಗಳ ನಡೆಯಿಂದಾಗಿ ಜಿಲ್ಲೆಯಲ್ಲಿ ಬಿಜೆಪಿ ಎರಡು ಹೋಳಾಗಲಿದೆ. ಇದಕ್ಕೆ ಮುಖ್ಯಮಂತ್ರಿಗಳೇ ಕಾರಣವಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ನಿಲುವು ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಸೋಮಶೇಖರ ರೆಡ್ಡಿ, ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಜಿಲ್ಲೆಯ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಸಚಿವ ಸಂಪುಟ ಕಸರತ್ತು ಮಧ್ಯೆಯೇ ಆನಂದದಿಂದ ರಾಜೀನಾಮೆ ಕೊಡುವೆ ಎಂದ ಸಚಿವ
ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವುದು ಬೇಡ ಎಂದು ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಅನೇಕ ಬಾರಿ ಮನವಿ ಮಾಡಿಕೊಂಡಿದ್ದೆವು. ಇಷ್ಟಾಗಿಯೂ ಮುಖ್ಯಮಂತ್ರಿ ನಮ್ಮ ಮನವಿಗೆ ಸ್ಪಂದಿಸದೆ ಪ್ರತ್ಯೇಕ ಜಿಲ್ಲೆಗೆ ಆಸಕ್ತಿ ತೋರಿಸಿದ್ದಾರೆ. ಬಳ್ಳಾರಿ ಜಿಲ್ಲೆ ಇಬ್ಭಾಗ ಆಗಲೇಬೇಕು ಎಂದು ಅವರು ನಿರ್ಧರಿಸಿದಂತಿದೆ. ನಾನಂತೂ ಮತ್ತೊಮ್ಮೆ ಮುಖ್ಯಮಂತ್ರಿ ಬಳಿ ತೆರಳಿ ಮನವಿ ಮಾಡಿಕೊಳ್ಳುವುದಿಲ್ಲ. ಜಿಲ್ಲೆ ವಿಭಜನೆಗೆ ಯಾರೇ ಹೋರಾಟ ಮಾಡಿದರೂ ನಾನು ಬೆಂಬಲ ಕೊಡುತ್ತೇನೆ. ಪ್ರತ್ಯೇಕ ಜಿಲ್ಲೆಗೆ ನನ್ನದು ಮೊದಲಿನಿಂದಲೂ ವಿರೋಧವಿದೆ ಎಂದ ಶಾಸಕ ರೆಡ್ಡಿ, ಜಿಲ್ಲೆಯ ವಿಭಜನೆ ಬೇಡ ಎಂದು ಎಷ್ಟುಬಾರಿ ನಾವು ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಳ್ಳಬೇಕು? ಎಂದು ಪ್ರಶ್ನಿಸಿದರು.
ಜಿಲ್ಲೆಯ ವಿಭಜನೆಯಿಂದ ಬಿಜೆಪಿಗೆ ಯಾವ ಅನುಕೂಲವಾಗುವುದಿಲ್ಲ. ಬದಲಿಗೆ ನಷ್ಟವೇ ಆಗಲಿದೆ. ಅಖಂಡ ಜಿಲ್ಲೆಯನ್ನು ಇಬ್ಭಾಗ ಮಾಡಿದರೆ ಜಿಲ್ಲೆಯ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ಎಚ್ಚರಿಸಿದರು.