ಚಿಕ್ಕಮಗಳೂರು: ನೆಲ್ಲೂರಿನ ಕಬ್ಬಿನಗದ್ದೆಯಲ್ಲಿ ಬೀಡುಬಿಟ್ಟ ಆನೆಗಳು, ಬೆಚ್ಚಿಬಿದ್ದ ಜನತೆ..!

By Girish Goudar  |  First Published Nov 16, 2023, 9:30 PM IST

ಆನೆದಾಳಿ ಭೀತಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಗ್ರಾಮಸ್ಥರು ಮನೆಗಳಿಂದ ಹೊರ ಬರಲು ಆಗುತ್ತಿಲ್ಲ. ನಮ್ಮ ಗೋಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅರಣ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.16):  ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಆನೆಗಳ ಹಿಂಡು ಗುರುವಾರ ಬೆಳಗ್ಗೆ ನಗರದ ಸೆರಗಂಚಿನ ಗ್ರಾಮ ನೆಲ್ಲೂರಿಗೆ ಲಗ್ಗೆ ಇಟ್ಟಿದ್ದು ಜನತೆ ಬೆಚ್ಚಿಬಿದ್ದಿದ್ದಾರೆ. ನಗರದಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ನೆಲ್ಲೂರಿನ ಕಬ್ಬಿನ ಗದ್ದೆಯಲ್ಲಿ ಆನೆಗಳು ಬೀಡುಬಿಟ್ಟಿರುವುದು ಗೊತ್ತಾದ ಕೂಡಲೇ ನೂರಾರು ಗ್ರಾಮಸ್ಥರು ಸೇರಿ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

ಅಧಿಕಾರಿಗಳ ಭೇಟಿ

ವಿಷಯ ತಿಳಿಯುತ್ತಿದ್ದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಬಾಬು ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಆಮಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು.

CHIKKAMAGALURU: ಕಿಲ್ಲರ್ ಒಂಟಿ ಸಲಗ ಆಪರೇಷನ್ ವೇಳೆ ಮತ್ತೊಂದು ಕಾಡಾನೆ ಸೆರೆ

ಶಾಲೆಗಳಿಗೆ ರಜೆ

ಗಾಬರಿಗೊಂಡಿರುವ ಆನೆಗಳ ಹಿಂಡು ನಗರಕ್ಕೆ ನುಗ್ಗುವ ಸಾಧ್ಯತೆಗಳು ಇದ್ದ ಕಾರಣಕ್ಕೆ ನೆಲ್ಲೂರು ಸೇರಿದಂತೆ ಸುತ್ತಲಿನ ಶಾಲೆಗಳಿಗೆ ಬೆಳಗ್ಗೆಯೇ ರಜೆ ಘೋಷಿಸಲಾಯಿತು. ಸ್ವಲ್ಪ ಸಮಯದಲ್ಲೇ ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ಆರಂಭವಾಯಿತು. ಸುಮಾರು ಒಂದು ಗಂಟೆ ನಂತರ ಆನೆಗಳ ಹಿಂಡು ನಿಧಾನವಾಗಿ ಕಬ್ಬಿನ ಗದ್ದೆಯಿಂದ ಸರಿದು ಗುಡ್ಡದ ತಪ್ಪಲಿನ ಅರಣ್ಯದ ಕಡೆಗೆ ಚಲಿಸಲಾರಂಭಿಸಿದವು. 

ಕಾರ್ಯಾಚರಣೆಗೆ ಡ್ರೋಣ್ ಬಳಕೆ

ಡ್ರೋನ್ ಕ್ಯಾಮರಾಗಳ ಮೂಲಕ ಆನೆಗಳ ಚಲನವಲನವನ್ನು ಗಮನಿಸಿ ಅವರುಗಳು ಅರಣ್ಯದ ಕಡೆಗೆ ಹೋಗುತ್ತಿರುವುದನ್ನು ದೃಢಪಡಿಸಿಕೊಳ್ಳಲಾಯಿತು. ನಲ್ಲೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟ ಕಾಡಾನೆ ಹಿಂಡು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಮಾಡುವೆ.

ಹಿಂಡಿನಲ್ಲಿ ಭುವನೇಶ್ವರಿ

ಕತ್ತಿಗೆ ರೇಡಿಯೋ ಕಾಲರ್ ಧರಿಸಿರುವ ಭುವನೇಶ್ವರಿ ಆನೆಯು ತಂಡದಲ್ಲಿದೆ. ಈ ಆನೆಗೆ ಅರಣ್ಯ ಇಲಾಖೆಯೇ ಹಿಂದೆ ರೇಡಿಯೋ ಕಾಲರ್ ಅಳವಡಿಸಿ ಭುವನೇಶ್ವರಿ ಎಂದು ಹೆಸರಿಟ್ಟಿದೆ.ಹಾಸನ ಜಿಲ್ಲೆ ಸಕಲೇಶಪುರ-ಆಲೂರು ಮಾರ್ಗವಾಗಿ ಮೂಡಿಗೆರೆಯಿಂದ ಆಲ್ದೂರು ಅರಣ್ಯವಲಯಕ್ಕೆ ಬಂದಿರುವ ನಾಲ್ಕೈದು ಆನೆಗಳನ್ನ ಹಿಂಡನ್ನು ಭುವನೇಶ್ವರಿ ಆನೆಯೂ ಸೇರಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸುಮಾರು ೧ ತಿಂಗಳಿಗಿಂತಲೂ ಹಿಂದಿನಿಂದ ಈ ಆನೆಗಳ ಹಿಂಡು ಮೂಡಿಗೆರೆ, ಆಲ್ದೂರು ವಲಯದಲ್ಲಿ ಬೀಡುಬಿಟ್ಟಿದ್ದು, ಇದೀಗ ಚಿಕ್ಕಮಗಳುರು ನಗರದಂಚಿನ ಗ್ರಾಮಗಳಿಗೆ ಲಗ್ಗೆ ಇಡಲಾರಂಭಿಸಿವೆ.

ಗ್ರಾಮಸ್ಥರ ಆಕ್ರೋಶ

ನವೆಂಬರ್ 8 ರಂದು ಆಲ್ದೂರು ಸಮೀಪ ಹೆಡದಾಳು ಗ್ರಾಮದಲ್ಲಿ ಮೀನಾ ಎಂಬ ಕಾರ್ಮಿಕ ಮಹಿಳೆಯನ್ನು ಒಂಟಿ ಸಲಗವೊಂದು ಬಲಿ ಪಡೆದ ನಂತರ 9 ಸಾಕಾನೆಗಳ ನೆರವಿನಲ್ಲಿ ಆನೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ನರಹಂತಕ ಅನೆ ಸೆರೆಗೆ ಮಾತ್ರ ಒತ್ತು ನೀಡುತ್ತಿದ್ದು, ಉಳಿದ ಆರು ಆನೆಗಳ ಹಿಂಡನ್ನು ಕಾಡಿಗೆ ಹಿಮ್ಮೆಟ್ಟಿಸಲು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಮಲೆನಾಡಿನಲ್ಲಿ ಇಬ್ಬರನ್ನು ಬಲಿ ಪಡೆದ ಒಂಟಿ ಸಲಗ: ಸೆರೆ ಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ!

ಮೋಜು-ಮಸ್ತಿ ಆರೋಪ

ಆನೆ ಕಾರ್ಯಾಚರಣೆ ಹೆಸರಲ್ಲಿ ಅರಣ್ಯ ಸಿಬ್ಬಂದಿ ಮೋಜು ಮಾಡುತ್ತಿದ್ದಾರೆ. ಆಗೊಮ್ಮೆ, ಈಗೊಮ್ಮೆ ಪಟಾಕಿಗಳನ್ನು ಸಿಡಿಸಿ ವಾಪಾಸಾಗುತ್ತಿದ್ದಾರೆ. ಈ ಆನೆಗಳ ಹಿಂಡು ಪ್ರತಿದಿನ ಲಕ್ಷಾಂತರ ರೂ. ಬೆಲೆಯ ಬೆಳೆಯನ್ನು ಹಾನಿ ಪಡಿಸುತ್ತಿವೆ. ಭತ್ತ, ಕಬ್ಬು, ಬಾಳೆ, ಅಡಿಕೆ, ಕಾಫಿ ಸೇರಿದಂತೆ ಎಲ್ಲ ರೀತಿಯ ಬೆಳೆಗಳು ಹಾನಿಗೀಡಾಗುತ್ತಿದೆ. ಒಂದಷ್ಟನ್ನು ಆನೆಗಳು ತಿಂದುಹಾಕುತ್ತಿದ್ದರೆ, ಅದಕ್ಕಿಂತಲೂ ಹೆಚ್ಚಿನ ಪೈರು ಆನೆಗಳ ತುಳಿತದಿಂದ ಹಾನಿಗೀಡಾಗುತ್ತಿವೆ. ಎಂದು ಅಳಲು ತೋಡಿಕೊಂಡಿದ್ದಾರೆ.

ಶಾಶ್ವತವಾಗಿ ಹಿಮ್ಮೆಟ್ಟಿಸಿ

ಆನೆ ದಾಳಿ ಭೀತಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಗ್ರಾಮಸ್ಥರು ಮನೆಗಳಿಂದ ಹೊರ ಬರಲು ಆಗುತ್ತಿಲ್ಲ. ನಮ್ಮ ಗೋಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅರಣ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ನಿನ್ನೆಯಷ್ಟೇ ನೆಲ್ಲೂರು ಪಕ್ಕದ ಮತ್ತಾವರ ಗ್ರಾಮದ ಸುತ್ತಮುತ್ತ ದಾಳಿ ಮಾಡಿದ ಇದೇ ಆನೆಗಳ ಹಿಂಡು ಭಾರೀ ಪ್ರಮಾಣದ ಬೆಳೆ ಹಾನಿಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಗ್ರಾಮದ ಗೌರಿ ಕೆರೆ ಬಳಿ ದಿಢೀರ್ ಪ್ರತಿಭಟನೆ ನಡೆಸಿ ಆನೆಗಳನ್ನು ಶಾಶ್ವತವಾಗಿ ಕಾಡಿಗೆ ಹಿಮ್ಮೆಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.

click me!