ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಮಳೆಯಿಂದ ಉಂಟಾದ ಹಾನಿಯಿಂದ ಜನ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಮಳೆಯಿಂದ ಉಂಟಾದ ಹಾನಿಯಿಂದ ಜನ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಯಾವಾಗ ಮನೆ ಕುಸಿತವಾಗುವುದು, ಗುಡ್ಡದ ಮಣ್ಣು ಎಲ್ಲಿ ಜಾರಿ ಮನೆ ನೆಲಸಮವಾಗುವುದೋ ಎನ್ನುವ ಭೀತಿಯಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಸದ್ಯ ಮಳೆ ಅಬ್ಬರ ಕಡಿಮೆಯಾದರೂ ಆತಂಕದಲ್ಲಿ ಇರುವ ನಿವಾಸಿಗಳಿಗೆ ಮಳೆ ಬಿರುಸುಗೊಂಡರೆ ಮತ್ತಷ್ಟು ಮನೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದ್ದು ಬದಲಿ ಜಾಗ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಮತ್ತಷ್ಟು ಮನೆಗಳಿಗೆ ಹಾನಿಯಾಗುವ ಭೀತಿ
ಚಿಕ್ಕಮಗಳೂರು ತಾಲೂಕಿನ ಬೆಳಗೋಡು ಗ್ರಾಮದಲ್ಲಿ ಮಳೆ ನರಕ ಸೃಷ್ಟಿಸಿದ್ದು, ಮೂಲ ಸೌಕರ್ಯ ಅಲ್ಲಿರುವವರಿಗೆ ಗಗನ ಕುಸುಮವಾಗಿದೆ. ಈಗ ಸುರಿಯುತ್ತಿರುವ ಮಳೆಯು ಶಾಪವಾಗಿ ಪರಿಣಮಿಸಿದೆ. ಈ ಗ್ರಾಮಕ್ಕೆ ಸಮರ್ಪಕ ರಸ್ತೆಯಿಲ್ಲ, ಊರಿನಿಂದ ಮುಖ್ಯರಸ್ತೆಗೆ ಎಸ್ಟೇಟ್‌ಗೆ ಬರಲು ಒಂದೂವರೆ ಕಿ.ಮೀ. ನಡೆದುಕೊಂಡೇ ಬರಬೇಕಾಗಿದೆ. ಮಳೆಗಾಲ ಬತ್ತೆಂದರೆ ಜನರು ನರಕಯಾತನೆಯನ್ನು ಅನುಭವಿಸಬೇಕಾಗಿದೆ. 2019 ರಲ್ಲೆ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ವಾಸಿಸಲು ಯೋಗ್ಯವಲ್ಲದ ಸ್ಥಳವಾಗಿದೆ ಎಂದು ಹೇಳಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ. ಆಲ್ದೂರು ಸುತ್ತಮುತ್ತಲ ಸ್ಥಳದಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ, ಗ್ರಾಮಸ್ಥರನ್ನು ಸ್ಥಳಾಂತರಿಸಬೇಕೆಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಗ್ರಾಮಸ್ಥರು ಕೋರಿದ್ದಾರೆ.
45 ಕುಟುಂಬಗಳಿಗೆ ಆತಂಕ
ಇತ್ತೀಚೆಗೆ ಸುರಿದ ಮಹಾ ಮಳೆಯಿಂದ ಗುಡ್ಡದ ಮಣ್ಣುಕುಸಿದು ಕೆಲವು ಮನೆಗಳಿಗೆ ಹಾನಿಯಾಗಿದ್ದು, ಮಳೆಬಿರುಸುಗೊಂಡರೆ ಮತ್ತಷ್ಟು ಮನೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಪ್ರತಿನಿತ್ಯ ಆತಂಕದಲ್ಲಿ ಬೆಳಗೋಡು ಗ್ರಾಮಸ್ಥರು ಜೀವನ ಸಾಗಿಸುವಂತಾಗಿದೆ. ಪರಿಶಿಷ್ಟಜಾತಿಗೆ ಸೇರಿದ ಒಟ್ಟು 45 ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಬಹುತೇಕ ಜನರು ಕೂಲಿ ಮಾಡಿಕೊಂಡು ಜೀವನ ಸಾಗಿಸುವಂತಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಗುಡ್ಡ ಕುಸಿದು ಹಲವು ಮನೆಗಳಿಗೆ ಹಾನಿಯಾಗಿವೆ. ದೊಡ್ಡಮಾಗರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೆಳಗೋಡು ಗ್ರಾಮದ ಜನರು ಜೀವವನ್ನು ಕೈಯಲ್ಲಿಡಿದುಕೊಂಡು ಜೀವನ ಸಾಗಿಸುತ್ತಿದ್ದಾರೆ.
ಸರಿಯಾಗಿ ಕೂಲಿಯೂ ಸಿಗದೆ ಬಡ ಕುಟುಂಬಗಳು ಜೀವನ ಸಾಗಿಸಲು ಹರಸಾಹಸ ಪಡುವಂತಾಗಿದೆ. ಗ್ರಾಮದ ಪಕ್ಕದಲ್ಲಿರುವ ಸುಮಾರು 40 ಅಡಿ ಎತ್ತರವಿರುವ ಗುಡ್ಡ ಕೆಲವು ದಿನಗಳ ಹಿಂದೆ ಕುಸಿದಿದ್ದು, ಮಳೆ ಇದೇ ರೀತಿ ಮುಂದುವರೆದರೆ ಮತ್ತಷ್ಟು ಮನೆಗಳು ಹಾನಿಗೊಳಗಾಗುವ ಸಾಧ್ಯತೆಗಳಿವೆ. ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕೆಲವು ಕುಟುಂಬಗಳು ಉಳಿದುಕೊಳ್ಳಬಹುದಾಗಿದ್ದರೂ ಬಹುತೇಕ ಕುಟುಂಬಗಳು ಅಲ್ಲಿ ಆಶ್ರಯ ಪಡೆಯವುದು ಕಷ್ಟಸಾಧ್ಯ. ಗ್ರಾಮಸ್ಥರಿಗೆ 1993 ರಲ್ಲೆ ಮನೆಯ ಹಕ್ಕುಪತ್ರ ನೀಡಿದ್ದು, ಜಾಗ ಗುರುತಿಸಿಲ್ಲ, ಅಕ್ಕಪಕ್ಕದಲ್ಲಿ ಸರ್ಕಾರಿ ಜಾಗವೂ ಇಲ್ಲ ಹಾಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಜನರನ್ನು ಸ್ಥಳಾಂತರಿಸಲು ಮುಂದಾಗುತ್ತಿಲ್ಲ, ಬೇರೆ ಕಡೆ ಜಾಗ ಗುರುತಿಸಿ ನಿವೇಶನ ಹಕ್ಕುಪತ್ರ ನೀಡುವ ಭರವಸೆಯನ್ನು ನೀಡುತ್ತಿದ್ದಾರೆ.
ಈ ಗ್ರಾಮವು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತಿದ್ದು, ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಎಂ.ಪಿ.ಕುಮಾರಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಪರ್ಯಾಯ ವ್ಯವಸ್ಥೆ ಮಾಡುವತ್ತ ಗಮನಹರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಬೇರೆ ಕಡೆ ಜಾಗ ಗುರುತಿಸಿ, ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದಿಟ್ಟಿದ್ದಾರೆ. ಅಲ್ಲೊಂದು, ಇಲ್ಲೊಂದು ಮನೆಗಳಿದ್ದು, ಗ್ರಾಮದಲ್ಲಿ ಸ್ವಲ್ಪ ದೂರ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಬೆಳಗೋಡು ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮವನ್ನು ಬೇರೆಡೆ ಸ್ಥಳಾಂತರಿಸಬೇಕೆಂಬ ಕೂಗಿಗೆ ಜಿಲ್ಲಾಡಳಿತ ಸ್ಪಂದಿಸಲು ಮುಂದಾಗಬೇಕಿದೆ.