ಅನ್ನದಾತರ ಹೊಲಕ್ಕೆ ನೀರು ಹರಿಸಿ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ: ಮುನೇನಕೊಪ್ಪ

By Kannadaprabha NewsFirst Published Jul 21, 2022, 9:29 PM IST
Highlights

ಪ್ರತಿವರ್ಷ ಜು. 21ರಂದು ರೈತ ಹುತಾತ್ಮ ದಿನ ಆಚರಣೆ

ಹುಬ್ಬಳ್ಳಿ(ಜು.21):  ನವಲಗುಂದ ಹಾಗೂ ನರಗುಂದ ರೈತ ಬಂಡಾಯ ಯಾರಿಗೆ ತಾನೇ ಗೊತ್ತಿಲ್ಲ. ಹೊಲಕ್ಕೆ ನೀರು ಬಾರದಿದ್ದರೂ ನೀರಾವರಿ ಅಭಿವೃದ್ಧಿ ಕರ ಹೇರಿದ ರಾಜ್ಯ ಸರ್ಕಾರದ ವಿರುದ್ಧ ನಡೆದ ರೈತ ಬಂಡಾಯದಲ್ಲಿ ಇಬ್ಬರು ರೈತರು ಪೊಲೀಸರ ಗುಂಡಿಗೆ ಹುತಾತ್ಮರಾದರು. ಆ ದಿನದ ನೆನಪಿಗಾಗಿ ಪ್ರತಿವರ್ಷ ಜು. 21ರಂದು ರೈತ ಹುತಾತ್ಮ ದಿನ ಆಚರಿಸಲಾಗುತ್ತದೆ. ಅಂದು ಪ್ರತಿಯೊಬ್ಬ ರಾಜಕಾರಣಿಗಳು ರೈತರ ಏಳ್ಗೆ ಬಗ್ಗೆ ಗಂಟೆಗಟ್ಟಲೇ ಭಾಷಣ ಬಿಗಿದು ಹೋಗುವುದು ಮಾಮೂಲಿ. ಆದರೆ ನವಲಗುಂದ ಶಾಸಕರೂ ಆಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಂದು ರೈತರ ಯಾವ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ಮಾಡಿದ್ದರೂ ಅ ಬೇಡಿಕೆಗಳನ್ನು ಈಡೇರಿಸುವ ಮೂಲಕ ರೈತ ಹುತಾತ್ಮ ದಿನಕ್ಕೆ ತಮ್ಮದೇಯಾದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ಮೂಲಕ ಮುನೇನಕೊಪ್ಪ ಅಪರೂಪದ ರಾಜಕಾರಣಿ ಎನಿಸಿದ್ದಾರೆ.

ಈ ಭಾಗದಲ್ಲಿ ವ್ಯರ್ಥವಾಗಿ ಹರಿದುಹೋಗುವ ತುಪರಿಹಳ್ಳ- ಬೆಣ್ಣಿಹಳ್ಳಗಳ ನೀರನ್ನು ಸದ್ಬಳಕೆ ಮಾಡಿಕೊಂಡು ನೀರಾವರಿ ಕಲ್ಪಿಸುವ ಪ್ರಯತ್ನದಲ್ಲಿ ಸಾಗಿದ್ದಾರೆ. ಇದರಲ್ಲಿ ಕೊಂಚ ಮಟ್ಟಿಗೆ ಯಶಸ್ವಿ ಕೂಡ ಆಗಿದ್ದಾರೆ. ಈ ಮೂಲಕ ಹುತಾತ್ಮ ರೈತರಿಗೆ ನೈಜ ರೂಪದಲ್ಲೇ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ವಿಷಯವಾಗಿ ‘ಕನ್ನಡಪ್ರಭ’ ಎದುರು ತಮ್ಮ ಹೋರಾಟ, ಚಿಂತನೆ, ಕೈಕೊಂಡ ಕ್ರಮಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ಅದರ ಪೂರ್ಣ ಪಾಠ ಇಂತಿದೆ.

Karnataka: ರೈತರಿಗೆ ಸಿಗುತ್ತಿರುವ ಸೌಲಭ್ಯ ನೇಕಾರರಿಗೂ ವಿಸ್ತರಣೆ: ಸಚಿವ ಮುನೇನಕೊಪ್ಪ

-ನವಲಗುಂದ ಕ್ಷೇತ್ರದಲ್ಲಿ ನೀರಾವರಿ, ನೀರಾವರಿ ಅಭಿವೃದ್ಧಿ ಕರದ ಬಗ್ಗೆ ಹೋರಾಟ ನಡೆದಿತ್ತು. ಈಗ ಅವರಿಗೆ ಯಾವ ರೀತಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೀರಿ?

-ಅಂದು ಹೊಲಕ್ಕೆ ನೀರು ಬಾರದಿದ್ದರೂ ಸರ್ಕಾರ ರೈತರ ಮೇಲೆ ನೀರಾವರಿ ಅಭಿವೃದ್ಧಿ ಕರ ಹೇರಿತ್ತು. ಅದರ ವಿರುದ್ಧ ರೈತರಲ್ಲಿ ತೀವ್ರ ಆಕ್ರೋಶವಿತ್ತು. ಈ ಹಿನ್ನೆಲೆಯಲ್ಲಿ ಹೋರಾಟ ಆರಂಭಿಸಿದ್ದರು. ಕೊನೆಗೆ ಗೋಲಿಬಾರ್‌ ಆಗಿ, ಬಲಿದಾನವೂ ನಡೆದುಹೋಯಿತು. ಇಷ್ಟಾದರೂ ತಾಲೂಕಿನ ಜನತೆಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಈ ಕೊರಗು ನಮ್ಮಲ್ಲಿ ಸಾಕಷ್ಟಿತ್ತು. ಜತೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರಲ್ಲಿ ಬೆಣ್ಣಿಹಳ್ಳ ಹಾಗೂ ಹಾವೇರಿ ಜಿಲ್ಲೆ ದುಂಡಸಿಯಲ್ಲಿ ಉಗಮವಾಗುವ ತುಪರಿಹಳ್ಳಗಳೆರಡು ಪ್ರತಿವರ್ಷ ತಾಲೂಕಿನ ಜನರನ್ನು ಹೈರಾಣು ಮಾಡುತ್ತಿದ್ದವು. ಸುಮಾರು 22 ಟಿಎಂಸಿ ನೀರು ಪ್ರತಿವರ್ಷ ವ್ಯರ್ಥವಾಗಿ ಹರಿದು ಹೋಗುತ್ತದೆ. 2012ರಲ್ಲಿ ರಚನೆಯಾಗಿದ್ದ ಪರಮಶಿವಯ್ಯ ವರದಿ ಕೂಡ ಇದನ್ನೇ ಹೇಳಿತ್ತು. ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಅದಕ್ಕಾಗಿ ಹರಿದು ಹೋಗುವ ನೀರನ್ನು ತಡೆಹಿಡಿಯಬೇಕೆಂಬ ಶಿಫಾರಸು ಅದರಲ್ಲಿತ್ತು. ಆ ನೀರನ್ನು ತಡೆ ಹಿಡಿದು ರೈತರ ಹೊಲಗಳಿಗೆ ನೀರು ಹರಿಸುವುದೇ ನಮ್ಮ ಮುಖ್ಯ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಸಾಗಿದೆ. ಈ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಣ್ಣ ಪ್ರಯತ್ನ ನಮ್ಮದು.

-ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯೊಳಗೆ ಈ ಯೋಜನೆ ಸೇರಿಸಿಕೊಂಡಿದ್ದೀರಿ? ಇದರಿಂದ ಲಾಭವೇನು?

-ಮೊದಲು ತುಪರಿಹಳ್ಳ ಹಾಗೂ ಬೆಣ್ಣಿಹಳ್ಳಗಳೆರಡು ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯೊಳಗೆ ಬರುತ್ತಿರಲಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಇವು ಯಾವ ನದಿಗೂ ಕಮ್ಮಿಯಿಲ್ಲ. ಪ್ರತಿವರ್ಷ ಪ್ರವಾಹದಿಂದ ಸಾಕಷ್ಟುತೊಂದರೆಯಾಗುತ್ತದೆ. ಆದಕಾರಣ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯೊಳಗೆ ಸೇರಿಸುವಂತೆ ಕೋರಿದ್ದೇವು. ಅದಕ್ಕೆ ಆಗ ಅವರು ಒಪ್ಪಿಗೆ ಸೂಚಿಸಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಸೇರಿಸಿದ್ದರು. ಅದರಿಂದ ಇದೀಗ ದೊಡ್ಡ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾದಂತಾಗಿದೆ.

-ತುಪರಿಹಳ್ಳದ ಪ್ರವಾಹ ತಡೆಗಟ್ಟಲು ಯಾವ ರೀತಿ ಯೋಜನೆ ಹಾಕಿಕೊಂಡಿದ್ದೀರಿ?

-ಬೆಣ್ಣಿಹಳ್ಳ- ತುಪರಿಹಳ್ಳಗಳೆರಡು ಪ್ರತಿವರ್ಷ ಸೃಷ್ಟಿಸುವ ಅನಾಹುತ ಅಷ್ಟಿಷ್ಟಲ್ಲ. ಇವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಯೋಜನೆ ರೂಪಿಸಿದ್ದೇವೆ. ತುಪರಿಹಳ್ಳದ ಪ್ರವಾಹ ತಡೆಗಟ್ಟಲು . 312 ಕೋಟಿ ಯೋಜನೆ ಸಿದ್ಧಪಡಿಸಿದ್ದೇವೆ. ಇದಕ್ಕೆ ಈಗಾಗಲೇ ಮಂಜೂರಾತಿ ಸಿಕ್ಕಿದೆ. ಮೊದಲ ಹಂತದಲ್ಲಿ .150 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಕೂಡ ನಡೆದಿದೆ. ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು.

-1 ಟಿಎಂಸಿ ನೀರು ಬಳಕೆಗೆ ಅಲೋಕೇಶನ್‌ ಪಡೆದಿದ್ದೀರಿ? ಅದರ ಬಳಕೆಗೆ ಯಾವ ಯೋಜನೆಯಿದೆ?

-ಸದ್ಯ ಬೆಣ್ಣಿಹಳ್ಳ- ತುಪರಿಹಳ್ಳದಿಂದ ವ್ಯರ್ಥವಾಗಿ ಹರಿದುಹೋಗುವ ನೀರನ್ನು ತಡೆಹಿಡಿದು ಸದ್ಯ 10 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿದ್ದೇವೆ. ಇನ್ನೂ ಈಗ ಅಲೋಕೇಶನ್‌ ಪಡೆದಿರುವ 1 ಟಿಎಂಸಿ ಅಡಿ ನೀರು ಬಳಕೆಗೆ ತುಪರಿಹಳ್ಳದ ಪ್ರತ್ಯೇಕ ಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಇದೀಗ ಡ್ರೋಣ ಸಮೀಕ್ಷೆ ನಡೆಸಲಾಗುತ್ತಿದೆ. ಶ್ರೀ ಯೋಗೇಶ್ವರ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಬ್ಯಾಹಟ್ಟಿ, ತಿರ್ಲಾಪುರ ಹಾಗೂ ಮೊರಬದಲ್ಲಿ ಹೀಗೆ ಮೂರು ಕಡೆಗಳಲ್ಲಿ ಸೇರಿ ಒಟ್ಟು 102 ಎಕರೆ ಪ್ರದೇಶಗಳಲ್ಲಿ ಮೂರು ಹೊಸದಾಗಿ ಕೆರೆಗಳನ್ನು ನಿರ್ಮಿಸಲಾಗುವುದು. ಬಳಿಕ ತುಪರಿಹಳ್ಳದಿಂದ ಈ ಕೆರೆಗಳನ್ನು ತುಂಬಿಸಲಾಗುವುದು. ಈ ಮೂಲಕ 16 ಸಾವಿರ ಎಕರೆ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಯೋಜನೆಯಿದಾಗಿದೆ. ಇದೀಗ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಇನ್ನೊಂದು ತಿಂಗಳಲ್ಲಿ ಪೂರ್ಣವಾಗಲಿದೆ. ಬಳಿಕ ಡಿಪಿಆರ್‌ ಸಿದ್ಧಪಡಿಸಿ ಕೆಲಸ ಶುರು ಮಾಡಲಾಗುವುದು.

ಜವಳಿ ಇಲಾಖೆಯಲ್ಲಿ 12 ಲಕ್ಷ ಉದ್ಯೋಗ ಸೃಷ್ಟಿ: ಸಚಿವ ಮುನೇನಕೊಪ್ಪ

-ಬೆಣ್ಣಿಹಳ್ಳದ ಪ್ರವಾಹದ ತಡೆಗಟ್ಟಲು ಕ್ರಮಗಳೇನು?

-ಬೆಣ್ಣಿಹಳ್ಳದ ಪ್ರವಾಹ ತಡೆಯಲು ಕ್ರಮ ಕೈಗೊಂಡಿದ್ದೇವೆ. ಕಾಲುವೆಗಳನ್ನು ಆಧುನಿಕರಣಗೊಳಿಸುತ್ತಿದ್ದೇವೆ. ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಂಡಿದ್ದೇವೆ. ಕಾಲುವೆಗಳ ಆಧುನಿಕರಣವಷ್ಟೇ ಅಲ್ಲ. ಹೊಲಗಾಲುವೆಗಳನ್ನು ಮಾಡುತ್ತಿದ್ದೇವೆ.

-ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕೈಗೊಂಡ ಕ್ರಮಗಳೇನು?

-ಪ್ರತಿ ಗ್ರಾಮಕ್ಕೂ ಮಲಪ್ರಭಾ ನದಿ ನೀರು ಪೂರೈಕೆ ಮಾಡಬೇಕೆನ್ನುವುದು ನಮ್ಮ ಸಂಕಲ್ಪ. ಈ ನಿಟ್ಟಿನಲ್ಲಿ ಜಲಜೀವನ ಹಾಗೂ ಜಲಧಾರೆ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿವ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಮನೆ ಮನೆಗೂ ಶುದ್ಧ ಕುಡಿವ ನೀರು ಪೂರೈಕೆಯಾಗಲಿದೆ. ಇದರಿಂದ ಜನತೆಗೆ ಸಾಕಷ್ಟುಅನುಕೂಲವಾಗಲಿದೆ.
 

click me!