Bengaluru Accident: ಧಾರಾವಾಹಿ ನಿರ್ದೇಶಕನ ಕಾರಿಗೆ ಪಾದಾಚಾರಿ ಬಲಿ: ಅಪಘಾತದ ವಿಡಿಯೊ ವೈರಲ್‌

By Girish Goudar  |  First Published May 21, 2022, 7:28 AM IST

*  ಬೆಂಗಳೂರಲ್ಲಿ ಅಡ್ಡಾದಿಡ್ಡಿ ಚಲಿಸಿದ ಕಾರಿಗೆ ರಿಪ್ಪನ್‌ಪೇಟೆ ವ್ಯಕ್ತಿ ಬಲಿ
*  ಈ ಸಂಬಂಧ ಸಹಾಯಕ ನಿರ್ದೇಶಕ ಮುಕೇಶ್‌ ಎಂಬಾತನ ಬಂಧನ
*  ಘಟನೆಯಲ್ಲಿ ಎರಡು ಕಾರು ಹಾಗೂ ಎರಡು ದ್ವಿಚಕ್ರ ವಾಹನ ಜಖಂ


ಬೆಂಗಳೂರು(ಮೇ.21): ನಗರದ ಕತ್ರಿಗುಪ್ಪೆ ರಿಂಗ್‌ ರಸ್ತೆಯಲ್ಲಿ ಕನ್ನಡ ಕಿರುತೆರೆ ಸಹಾಯಕ ನಿರ್ದೇಶಕನೊಬ್ಬ ಶುಕ್ರವಾರ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.

ಕತ್ರಿಗುಪ್ಪೆ ನಿವಾಸಿ ರುದ್ರಪ್ಪ ಅಲಿಯಾಸ್‌ ಸುರೇಶ್‌(28) ಮೃತರು. ಸುರೇಶ್‌ ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆ ಮೂಲದವರು. ಶಿವರಾಜು(25) ಸಚಿನ್‌(21) ಹಾಗೂ ದ್ವಾರಕನಗರ ನಿವಾಸಿ ಶೈಲೇಂದ್ರ(21) ಗಾಯಗೊಂಡವರು. ಈ ಮೂವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಸಹಾಯಕ ನಿರ್ದೇಶಕ ಮುಕೇಶ್‌(28) ಎಂಬಾತನನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಎರಡು ಕಾರು ಹಾಗೂ ಎರಡು ದ್ವಿಚಕ್ರ ವಾಹನ ಜಖಂ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

Hebbal Flyover: ಪಾದಚಾರಿಗಳ ಅನುಕೂಲಕ್ಕೆ ಇಬ್ಬರು ಕಾನ್ಸ್‌ಟೇಬಲ್ಸ್, 4 ಟ್ರಾಫಿಕ್ ಪೊಲೀಸರ ನಿಯೋಜನೆ

ಕನ್ನಡ ಕಿರುತೆರೆಯ ಧಾರಾವಾಹಿಯ ಸಹಾಯ ನಿರ್ದೇಶಕ ಮುಕೇಶ್‌ ರಾತ್ರಿ ಶೂಟಿಂಗ್‌ ಮುಗಿಸಿಕೊಂಡು ಕಾರಿನಲ್ಲಿ ಕತ್ರಿಗುಪ್ಪೆ ನಿವಾಸಕ್ಕೆ ಬರುವಾಗ ಬೆಳಗ್ಗೆ 7.20ರ ಸುಮಾರಿಗೆ ಮಾರ್ಗ ಮಧ್ಯೆ ಈ ದುರ್ಘಟನೆ ನಡೆದಿದೆ. ರಿಂಗ್‌ ರಸ್ತೆಯಲ್ಲಿ ಕತ್ರಿಗುಪ್ಪೆ ಜಂಕ್ಷನ್‌ ಕಡೆಯಿಂದ ಇಟ್ಟಮಡು ಜಂಕ್ಷನ್‌ ಕಡೆಗೆ ಮುಕೇಶ್‌ ಕಾರನ್ನು ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ ಪರಿಣಾಮ ಉದ್ಭವ ಆಸ್ಪತ್ರೆ ಬಳಿ ಇರುವ ಚಂದನ್‌ ಮೋಟರ್‌ ದ್ವಿಚಕ್ರ ವಾಹನ ಶೋ ರೂಮ್‌ ಬಳಿ ನಡೆದು ಬರುತ್ತಿದ್ದ ಸುರೇಶ್‌, ಶಿವರಾಜು, ಸಚಿನ್‌ ಹಾಗೂ ಶೈಲೇಂದ್ರ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಮೇಲಕ್ಕೆ ಹಾರಿ ಪಾದಚಾರಿ ಮಾರ್ಗಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್‌ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತದ ವೇಳೆ ಪಾದಾಚಾರಿ ಮಾರ್ಗದಲ್ಲಿ ನಿಲುಗಡೆ ಮಾಡಿದ್ದ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳು ಜಖಂ ಆಗಿವೆ. ಕಾರು ಚಾಲಕ ಮುಕೇಶ್‌ ಹಾಗೂ ಆತನ ಪಕ್ಕದಲ್ಲಿ ಕುಳಿತ್ತಿದ್ದ ಕಾರಿನ ಮಾಲೀಕ ಕಿರುತೆರೆ ನಿರ್ದೇಶಕ ಶ್ರೀನಿವಾಸ್‌ ತಿಮ್ಮಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕಾರು ಚಲಾಯಿಸಿದ ಸಹಾಯ ನಿರ್ದೇಶಕ ಮುಕೇಶ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೆ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ರಾತ್ರಿ ಶೂಟಿಂಗ್‌ ಮುಗಿಸಿ ನಿದ್ರೆಯ ಮಂಪರಲ್ಲಿ ಮುಕೇಶ್‌ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿರುವ ಸಾಧ್ಯತೆಯಿದೆ. ಈ ಸಂಬಂಧ ಬನಶಂಕರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ಪಾದಚಾರಿ ಮೇಲೆ ಲಾರಿ ಹರಿಸಿದ್ದ ಚಾಲಕ 11 ವರ್ಷ ಬಳಿಕ ಬಂಧನ

ಅಪಘಾತದ ವಿಡಿಯೊ ವೈರಲ್‌

ಸಹಾಯಕ ನಿರ್ದೇಶಕ ಮುಕೇಶ್‌ ಕಾರನ್ನು ಅಡ್ಡಾದಡ್ಡಿಯಾಗಿ ಚಾಲನೆ ಮಾಡಿಕೊಂಡು ಎದುರಿನಿಂದ ಬರುತ್ತಿದ್ದ ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆಯುವ ಸಿಸಿಟಿವಿ ಕ್ಯಾಮರಾ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಪಾದಾಚಾರಿಗಳು ಮೇಲಕ್ಕೆ ಹಾರಿ ಪಾದಾಚಾರಿ ಮಾರ್ಗಕ್ಕೆ ಬೀಳುತ್ತಾರೆ. ಕಾರು ಪಾದಾಚಾರಿ ಮಾರ್ಗದಲ್ಲಿ ನಿಲುಗಡೆ ಮಾಡಿದ್ದ ಒಂದು ಕಾರು ಹಾಗೂ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮೂವರು ಕೇಟರಿಂಗ್‌ ಕೆಲಸ, ಓರ್ವ ವಿದ್ಯಾರ್ಥಿ

ಅಪಘಾತದಲ್ಲಿ ಮೃತಪಟ್ಟಸುರೇಶ್‌ ಹಾಗೂ ಗಾಯಗೊಂಡಿರುವ ಶಿವರಾಜು ಮತ್ತು ಸಚಿನ್‌ ಸ್ನೇಹಿತರಾಗಿದ್ದು, ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕೇಟರಿಂಗ್‌ ಕೆಲಸ ಮಾಡುತ್ತಿದ್ದ ಮೂವರು ಶುಕ್ರವಾರ ಬೆಳಗ್ಗೆ ಕಾರ್ಯಕ್ರಮವೊಂದಕ್ಕೆ ಕೇಟಿರಿಂಗ್‌ ಕೆಲಸಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಇನ್ನು ಮತ್ತೊಬ್ಬ ಗಾಯಾಳು ಶೈಲೇಂದ್ರ ದ್ವಾರಕನಗರ ನಿವಾಸಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಅಂತಿಮ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾನೆ. ಬೆಳಗ್ಗೆ ಕಾಲೇಜಿಗೆ ನಡೆದುಕೊಂಡು ಹೋಗುವಾಗ ಈ ಅಪಘಾತವಾಗಿದೆ.
 

click me!