PM Gati Shakti: ಪಿಎಂ ಗತಿಶಕ್ತಿಗೆ ಬೆಂಗ್ಳೂರು ರೈಲ್ವೆ ವಿಭಾಗ ಆಯ್ಕೆ

By Girish Goudar  |  First Published May 21, 2022, 5:14 AM IST

*   ಯೋಜನೆಗೆ ಆಯ್ಕೆಯಾದ ದೇಶದ 4 ವಿಭಾಗಗಳ ಪೈಕಿ ಬೆಂಗಳೂರು ಒಂದು
*  ದಕ್ಷಿಣ ಭಾರತದ ಏಕೈಕ ವಿಭಾಗ
*  ಇದರಿಂದ ರೈಲ್ವೆ ಇಲಾಖೆಯ ಕಾಮಗಾರಿಗಳಿಗೆ ವೇಗ
 


ಬೆಂಗಳೂರು(ಮೇ.21): ಬೆಂಗಳೂರು ರೈಲ್ವೆ ವಿಭಾಗವನ್ನು ಪ್ರಧಾನ ಮಂತ್ರಿಗಳ ಗತಿಶಕ್ತಿ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಮೂಲಸೌಕರ್ಯ ಸಮಸ್ಯೆ ಪರಿಹಾರವಾಗಿ ರೈಲ್ವೆ ಕಾಮಗಾರಿಗಳು ವೇಗ ಪಡೆದುಕೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ಶುಕ್ರವಾರ ಡಾ. ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌ ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದವರೆಗೆ ರೇರ್‌-ವಿಂಡೋ ತಪಾಸಣೆ ನಡೆಸಿ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ‘ದೇಶದ ವಿವಿಧ ಆರ್ಥಿಕ ವಲಯಗಳಿಗೆ ಬಹುವಿಧದ ಸಂಪರ್ಕ ಒದಗಿಸಲು ಪ್ರಧಾನಮಂತ್ರಿಗಳ ಗತಿ ಶಕ್ತಿ ರಾಷ್ಟ್ರೀಯ ಯೋಜನೆಯನ್ನು 2021ರಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಭಾರತೀಯ ರೈಲ್ವೆ ಇಲಾಖೆಯು ಒಂದಾಗಿದೆ. ರಾಷ್ಟ್ರದ ನಾಲ್ಕು ರೈಲ್ವೆ ವಿಭಾಗಗಳಲ್ಲಿ ಗತಿ ಶಕ್ತಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದ್ದು, ಅದರಲ್ಲಿ ಬೆಂಗಳೂರು ವಿಭಾಗವು ಒಂದಾಗಿದೆ. ಅಲ್ಲದೆ, ಈ ಯೋಜನೆಗೆ ಆಯ್ಕೆಯಾದ ದಕ್ಷಿಣ ಭಾರತದ ಏಕೈಕ ವಿಭಾಗ ಇದಾಗಿದೆ. ಇಲ್ಲಿ ಸ್ಥಾಪನೆಯಾಗುವ ಗತಿ ಶಕ್ತಿ ಘಟಕಗಳು ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಎದುರಾಗುವ ಮೂಲಸೌಕರ್ಯಗಳ ಅಡೆತಡೆಗಳ ನಿರ್ಮೂಲನೆ ಮಾಡಲಿವೆ. ಜತೆಗೆ ಚಲನಶೀಲತೆಯನ್ನು ಸುಧಾರಿಸಿ, ಸರಕು ಸಾಗಣೆ ಸೇರಿದಂತೆ ಇತ್ಯಾದಿ ನಿರ್ವಹಣೆ ಮಾಡಲಿದೆ ಎಂದರು.

Tap to resize

Latest Videos

ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ಸೇರಿ 9 ರೈಲುಗಳ ವೇಗ ಹೆಚ್ಚಳ

ಗತಿ ಶಕ್ತಿಘಟಕ ಘಟಕವನ್ನು ಮುಖ್ಯ ಯೋಜನಾ ವ್ಯವಸ್ಥಾಪಕರ ನೇತೃತ್ವದಲ್ಲಿ ಸ್ಥಾಪಿಸಲಾಗುವುದು. ಅವರು ವಿಭಾಗಿಯ ರೈಲ್ವೆ ವ್ಯವಸ್ಥಾಪಕರಿಗೆ ಘಟಕದ ಆಗುಹೋಗುಗಳ ವರದಿ ಸಲ್ಲಿಸುವರು. ಪ್ರಮುಖವಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಸಂದರ್ಭದಲ್ಲಿ ವಿಶ್ವ ದರ್ಜೆಯ ಸಲಹೆಗಾರರ ಸೇವೆಯನ್ನು ಬಳಸಿಕೊಳ್ಳಲಿದ್ದಾರೆ. ಯೋಜನೆಗೆ ಸಮರ್ಥ ನಿರ್ವಹಣಾ ಸಿಬ್ಬಂದಿ ನೇಮಕಾತಿ, ಸಂಬಂಧಿತ ಉದ್ಯಮದಿಂದ ವಿನ್ಯಾಸದ ಸಹಾಯ, ಸ್ಥಳ ಪರಿಶೀಲನೆ , ಸ್ಥಳದ ಸಮೀಕ್ಷೆ ಸೇರಿದಂತೆ ಹಲವು ಕೆಲಸಗಳನ್ನು ಮುಖ್ಯ ಯೋಜನಾ ವ್ಯವಸ್ಥಾಪಕರು ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಗತ್ಯ ಬೆಂಬಲ ಭರವಸೆ

ಕೇಂದ್ರ ಸಚಿವರು ಚೆನ್ನೈ-ಬೆಂಗಳೂರು ರೈಲ್ವೆ ಮಾರ್ಗ ತಪಾಸಣೆ ಜತೆಗೆ ನೈಋುತ್ಯ ರೈಲ್ವೆ ವಿವಿಧ ಯೋಜನೆಗಳ ಪರಿಶೀಲಿಸಿದರು. ಈ ವೇಳೆ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ವಿಭಾಗಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವಂತೆ ರೈಲ್ವೆ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸಚಿವರು ಸಮ್ಮತಿ ಸೂಚಿಸಿದರು. ಇಲಾಖೆ ಉನ್ನತೀಕರಣಕ್ಕೆ ಹೊಸ ಆಲೋಚನೆಗಳ ಕುರಿತು ಯುವ ಅಧಿಕಾರಿಗಳ ತಮ್ಮ ಅಭಿಪ್ರಾಯವನ್ನು ಸಚಿವರೊಂದಿಗೆ ಹಂಚಿಕೊಂಡರು. ಸುರಕ್ಷತೆಯನ್ನು ಹೆಚ್ಚಿಸುವ ರೈಲ್ವೆ ಕಾರ್ಯಾಚರಣೆಗಳು ಮತ್ತು ಆದಾಯವನ್ನು ಹೆಚ್ಚಿಸುವ ನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಅಗತ್ಯ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.

ನೈಋುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್‌ ಸೇರಿದಂತೆ ನೈಋುತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಅಧಿಕಾರಿಗಳು ಸಚಿವ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು.
 

click me!