ಕೆಸರು ಗದ್ದೆಯಾದ ರಸ್ತೆ ದುರಸ್ತಿಗೆ ಕಲ್ಪತರು ನಾಡು ಆಗ್ರಹ

By Kannadaprabha NewsFirst Published Jul 20, 2019, 12:59 PM IST
Highlights

ತುಮಕೂರಿನ ತಿಪಟೂರಿನ ಹಳೇಪಾಳ್ಯ ರಸ್ತೆ ಮಳೆಯಿಂದ ಕೆಸರು ಗದ್ದೆಯಾಗಿ ಬದಲಾಗಿದೆ. ವಾಹನ ಸಂಚಾರಿಗಳು, ಪಾದಾಚಾರಿಗಳು ಈ ರಸ್ತೆಯಲ್ಲಿ ಓಡಾಡಲು ತೊಂದರೆ ಪಡುತ್ತಿದ್ದು, ಶೀಘ್ರವೇ ದರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತುಮಕೂರು(ಜು.20): ತಿಪಟೂರು ನಗರದ ಹಳೇಪಾಳ್ಯ ರಸ್ತೆ ಮಳೆಯಿಂದ ಕೆಸರು ಗದ್ದೆಯಾಗಿದ್ದು, ವಾಹನ ಸಂಚಾರಕ್ಕೆ ಮತ್ತು ಪಾದಾಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ನಗರಸಭೆ ರಸ್ತೆಯನ್ನು ದುರಸ್ತಿಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಮಾಡಿ ತಿಂಗಳುಗಳೇ ಕಳೆದಿದರೂ ರಸ್ತೆಯನ್ನು ಇದುವರೆಗೂ ದುರಸ್ತಿ ಮಾಡದೇ ನಗರಸಭೆ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ರಸ್ತೆ ಕೆಸರು ಗದ್ದೆಯಂತಾಗಿದೆ. ನೂರಾರು ವಾಹನಗಳು ಕೆಸರಿನಲ್ಲಿಯೇ ಓಡಾಡುವುದರಿಂದ ಗುಂಡಿಗಳು ಹೆಚ್ಚಾಗಿವೆ.

ಹಲವು ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆ:

ಅಲ್ಲದೆ ನಗರದ ಸಮೀಪಕ್ಕೆ ಸಂಪರ್ಕ ಹೊಂದಿರುವ ಹಳೇಪಾಳ್ಯ ರಸ್ತೆಯು ದೊಡ್ಡಯ್ಯನಪಾಳ್ಯ, ಆದಿಲಕ್ಷ್ಮೇನಗರ, ಹೊಸನಗರ, ಅಣ್ಣಾಪುರ, ಚಿಕ್ಕಲಕ್ಕಿಪಾಳ್ಯ, ಗಾಯತ್ರಿನಗರ, ಕಲ್ಕೆಳೆ, ಬಂಜಾರಹಟ್ಟಿಸೇರಿದಂತೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ, ಆರ್‌ಟಿಒ ಕಚೇರಿ, ಶಾಲಾ ಕಾಲೇಜುಗಳಿಗೆ ಸೇರಿದಂತೆ ಇನ್ನೂ ಹಲವು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ.

ಮಳೆ ಬಂದರೆ ರಸ್ತೆ ಅಯೋಮಯ:

ಹಳೇಪಾಳ್ಯದಲ್ಲಿ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರು ಹೆಚ್ಚಾಗಿರುವ ಕಾರಣ ದಿನಕ್ಕೆ ಸಾವಿರಾರು ಜನರು, ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಓಡಾಡುತ್ತಾರೆ. ಆದರೆ ಸಣ್ಣ ಸೋನೆ ಮಳೆ ಬಂದರೂ ಈ ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ. ನಗರದಲ್ಲಿ ಹಲವಾರು ತಿಂಗಳ ಹಿಂದೆಯೇ ಯುಜಿಡಿ ಕಾಮಗಾರಿ ಮಾಡಲು ರಸ್ತೆಯನ್ನು ಅಗೆಯಲಾಗಿತ್ತು, ಜೋಡಿ ಕೇಬಲ ಲೈನ್‌ ವ್ಯವಸ್ಥೆಯನ್ನು ಮಾಡಲು ರಸ್ತೆ ಅಗೆದು ಹಾಳು ಮಾಡಿರುವುದು ಇಲ್ಲಿನ ನಿವಾಸಿಗಳಿಗೆ ದಿನನಿತ್ಯ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚೆನ್ನಾಗಿರುವ ರಸ್ತೆ ಹಾಳು ಮಾಡಿದ ನಗರಸಭೆ

ಯುಜಿಡಿ ಕಾಮಗಾರಿಗಾಗಿ ರಸ್ತೆಯ ಮಧ್ಯಭಾಗದಲ್ಲಿಯೇ ದೊಡ್ಡ ದೊಡ್ಡ ಚರಂಡಿಯನ್ನು ನಗರಸಭೆಯವರು ಚೆನ್ನಾಗಿದ್ದ ರಸ್ತೆಯನ್ನು ಅಗೆದು ಸಂಚಾರಕ್ಕೆ ತೊಂದರೆ ಮಾಡಿದ್ದಾರೆ. ಈ ರಸ್ತೆ ತುಂಬಾ ಕಿರಿದಾಗಿರುವುದರಿಂದಲೂ ವಾಹನಗಳು ಸುಗಮವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಬಡಾವಣೆಗಳಲ್ಲಿ ಅಲ್ಲಲ್ಲಿ ಚರಂಡಿ ಕಟ್ಟಿಕೊಂಡಿರುವುದರಿಂದ ಚರಂಡಿಯ ಕಲುಷಿತ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಇದರ ಮೇಲೆಯೇ ವಾಹನಗಳು ಓಡಾಡುವಂತಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.
ಹಾಕಿ ಎರಡು ತಿಂಗಳಾಗಿಲ್ಲ, ಶಿವಮೊಗ್ಗದ ರಸ್ತೆ ಮೊದಲ ಮಳೆಗೇ ವಾಶ್‌ ಔಟ್..!

ಹಳೇಪಾಳ್ಯ ಸೇರಿದಂತೆ ಈ ಎಲ್ಲ ಬಡವಾಣೆಗಳಲ್ಲಿಯೂ ಇದೇ ಗೋಳಾಗಿದ್ದು, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ಎಂಬುದು ಇಲ್ಲಿನ ನಿವಾಸಿಗಳ ಮಾತಾಗಿದೆ. ಈಗಲಾದರೂ ನಗರಸಭೆ ಇತ್ತ ಗಮನಹರಿಸಿ ರಸ್ತೆಯನ್ನು ದುರಸ್ಥಿಗೊಳಿಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ನಿವಾಸಿಗಳು ಸೇರಿದಂತೆ ಸಾರ್ವಜನಿಕರು ಉತ್ತಮ ರಸ್ತೆಯಲ್ಲಿ ಓಡಾಡುವಂತೆ ಸರಿಯಾದ ರಸ್ತೆಗಳನ್ನು ಮಾಡಿಕೊಡಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.

click me!