1 ರೂ. ಹೆಚ್ಚು ಪಡೆದು 30 ಸಾವಿರ ದಂಡ ತೆತ್ತ KSRTC! ವಕೀಲ ರಾಕ್ಸ್​, ಸಾರಿಗೆ ಸಂಸ್ಥೆ ಶಾಕ್ಸ್​

Published : Jul 15, 2025, 04:45 PM ISTUpdated : Jul 15, 2025, 05:25 PM IST
Extra Charge from KSRTC

ಸಾರಾಂಶ

ಟಿಕೆಟ್​ ಬೆಲೆಗಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದ KSRTC ವಿರುದ್ಧ ವಕೀಲರೊಬ್ಬರು ಕೋರ್ಟ್​ ಮೆಟ್ಟಿಲೇರಿದ್ದು, ಸಾರಿಗೆ ಸಂಸ್ಥೆಗೆ 30 ಸಾವಿರ ರೂಪಾಯಿ ದಂಡ ವಿಧಿಸಿದೆ ಕೋರ್ಟ್​. ಏನಿದು ಕುತೂಹಲದ ಸ್ಟೋರಿ ನೋಡಿ... 

ಬಸ್​ಗಳಲ್ಲಿ ಕಂಡಕ್ಟರ್​ ಬಳಿಯಿಂದ ಚೇಂಜ್​ ಪಡೆದುಕೊಳ್ಳುವುದು ಎಷ್ಟು ಕಷ್ಟ ಎನ್ನುವುದು ಬಹುತೇಕ ಪ್ರಯಾಣಿಕರಿಗೆ ಅರಿವಿದೆ. ಕೆಲವು ಸಂದರ್ಭದಲ್ಲಿ ಚೇಂಜ್​ ಸಮಸ್ಯೆ ಇರುವುದು ನಿಜವಾದರೂ, ಕೆಲವೊಮ್ಮೆ ಚೇಂಜ್​ ಇದ್ದರೂ, ಇಳಿಯುವಾಗ ಕೊಡುತ್ತೇನೆ ಎಂದು ಇಳಿಯುವ ಸಂದರ್ಭದಲ್ಲಿ ಕಂಡಕ್ಟರ್​ ನಾಪತ್ತೆಯಾಗುವುದು ಪ್ರಯಾಣಿಕರಿಗೆ ತಿಳಿಯದ ವಿಷಯವೇನಲ್ಲ. ಹಾಗೆಂದು, ಪ್ರಯಾಣಿಕರು ಮರೆತರೂ ಅವರಿಗೆ ಚೇಂಜ್​ ಕೊಟ್ಟು ಇಳಿಸುವ ಪ್ರಾಮಾಣಿಕ ಕಂಡಕ್ಟರ್​ಗಳೂ ಇಲ್ಲವೆಂದೇನಿಲ್ಲ. ಆದರೆ 1,2 ರೂಪಾಯಿಗಳಿಂದ ಹಿಡಿದು ಊರುಗಳ ಬಸ್​ನಲ್ಲಾದರೆ 10-20 ರೂಪಾಯಿಗಳೂ ಸಿಗದೇ ಬರುವ ಸ್ಥಿತಿಯೂ ಇದೆ ಅನ್ನಿ.

ಇದು ಕಂಡಕ್ಟರ್​ಗಳ ಮಾತಾದರೆ, ಇನ್ನು ಕೆಎಸ್​ಆರ್​ಟಿಸಿಯೇ ಒಂದು ರೂಪಾಯಿ ಹೆಚ್ಚು ಪಡೆದು, ಭಾರಿ ದಂಡವನ್ನು ಕಟ್ಟುವ ಸ್ಥಿತಿಗೆ ಬಂದಿರುವ ಕುತೂಹಲದ ವಿಷಯವೊಂದು ನಡೆದಿದೆ. ಅಷ್ಟಕ್ಕೂ, ಇದೀಗ ಒಂದು ಕಡೆ ಸ್ತ್ರೀಯರಿಗೆ ಉಚಿತ ಎಂದು ಹೇಳಿ, ಇನ್ನೊಂದೆಡೆ ಬಸ್​ ದರಗಳನ್ನು ದುಪ್ಪಟ್ಟು ಮಾಡಿರುವುದು, ಬೇರೆ ಊರುಗಳಿಗೆ ಇದ್ದ ರಾಜಹಂಸ ಬಸ್ಸುಗಳನ್ನೇ ತೆಗೆದು ಸ್ಲೀಪರ್​ ಕೋಚ್​ ಬಸ್​ಗಳನ್ನಷ್ಟೇ ಹಾಕಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಎಲ್ಲರಿಗೂ ತಿಳಿದದ್ದೇ. ಆದರೆ ಈ ಪ್ರಕರಣದಲ್ಲಿ, ಒಂದು ರೂಪಾಯಿ ಹೆಚ್ಚಿಗೆ ಟಿಕೆಟ್​ನಲ್ಲಿ ವಸೂಲಿ ಮಾಡಿದ ಕಾರಣಕ್ಕೆ, ಪ್ರಯಾಣಿಕರೊಬ್ಬರು ಪಟ್ಟು ಬಿಡದೇ ಗ್ರಾಹಕರ ಕೋರ್ಟ್​ಗೆ ಹೋಗಿ ಜಯ ಸಾಧಿಸಿದ್ದಾರೆ. ಮೈಸೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) 30 ಸಾವಿರ ರೂಪಾಯಿ ದಂಡ ವಿಧಿಸಿದೆ.

ಚಾಮರಾಜನಗರದ ಹೂಗ್ಯ ಗ್ರಾಮದ ನಿವಾಸಿ, ಮೈಸೂರು ಮೂಲದ ವಕೀಲ ಜೆ. ಕಿರಣ್ ಕುಮಾರ್, ಡಿಸೆಂಬರ್ 31, 2024 ರಂದು ಮೈಸೂರಿನಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಐರಾವತ ಮಲ್ಟಿ-ಆಕ್ಸಲ್ ಬಸ್‌ನಲ್ಲಿ ಪ್ರಯಾಣಿಸಿದ್ದರು. ಯುಪಿಐ ವಹಿವಾಟಿನ ಮೂಲಕ 390 ರೂ. ಅವರು ಪಾವತಿಸಿದ್ದರು. ಅಸಲಿಗೆ, ಮೂಲ ದರ 370 ರೂ., ಜಿಎಸ್‌ಟಿ 19 ರೂಪಾಯಿ ಇತ್ತು. ಅಂದರೆ 389 ರೂಪಾಯಿ ಟಿಕೆಟ್​ ದರ. ಆದರೆ ಚೇಂಜ್​ ಸಮಸ್ಯೆಯಿಂದಲೋ ಏನೋ ಸಾಮಾನ್ಯವಾಗಿ ಎಲ್ಲಾ ಕಡೆ ಮಾಡುವಂತೆ ಕೆಎಸ್​ಆರ್​ಟಿಸಿ ರೌಂಡ್​ ಆಫ್​ ಫಿಗರ್​ ಎಂದು ಒಂದು ರೂಪಾಯಿ ಸೇರಿಸಿ 390 ರೂಪಾಯಿ ಟಿಕೆಟ್​ ದರ ಮಾಡಿದೆ. ಇದು ವಕೀಲರನ್ನು ಕೆರಳಿಸಿದೆ.

ಹೀಗೆ ಒಬ್ಬೊಬ್ಬರಿಂದ ಒಂದೊಂದು ರೂಪಾಯಿ ಎಂದರೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಎಷ್ಟು ಅನ್ಯಾಯ ಮಾಡುತ್ತಿದೆ ಎನ್ನುವುದು ಅವರ ಪ್ರಶ್ನೆ. ಅಷ್ಟಕ್ಕೂ ಯುಪಿಐ ಪಾವತಿಯಾಗಿದ್ದರಿಂದ ಚೇಂಜ್​ ಅವಶ್ಯಕತೆಯೇ ಬೀಳುವುದಿಲ್ಲ. ಈ ಸಮಸ್ಯೆ ಪರಿಹಾರಕ್ಕಾಗಿಯೇ UPI ವ್ಯವಸ್ಥೆ ಮಾಡಿದ್ದರೂ, ವಿನಾಕಾರಣ ಒಂದು ರೂಪಾಯಿ ಹೆಚ್ಚಿಗೆ ಪಡೆಯುತ್ತಿರುವುದು ಸರಿಯಲ್ಲ ಎಂದು ಮೈಸೂರಿನ ಗ್ರಾಹಕರ ಕೋರ್ಟ್​ಗೆ ಅವರು ದೂರು ಸಲ್ಲಿಸಿದ್ದರು. ಕೆಎಸ್‌ಆರ್‌ಟಿಸಿ ಪ್ರತಿದಿನ ಸುಮಾರು 35 ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತದೆ, ಇದರಲ್ಲಿ 3.44 ಲಕ್ಷಕ್ಕೂ ಹೆಚ್ಚು ಐಷಾರಾಮಿ ಬಸ್ ಪ್ರಯಾಣಿಕರು ಸೇರಿದ್ದಾರೆ ಎಂದು ಅವರು ಗಮನಸೆಳೆದರು. ಮಾಸಿಕ ಅಂದಾಜಿನ ಆಧಾರದ ಮೇಲೆ, ಪ್ರತಿ ತಿಂಗಳು ಒಂದು ಕೋಟಿಗೂ ಹೆಚ್ಚು ಪ್ರಯಾಣಿಕರು ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ವಾರ್ಷಿಕವಾಗಿ, ಈ ಸಂಖ್ಯೆ 12 ಕೋಟಿ ತಲುಪುತ್ತದೆ. "ಪ್ರತಿ ಐಷಾರಾಮಿ ಬಸ್ ಪ್ರಯಾಣಿಕರಿಂದ ರೂ. 1 ಅನ್ನು ಹೆಚ್ಚುವರಿಯಾಗಿ ಸಂಗ್ರಹಿಸುವ ಮೂಲಕ, ಅನ್ಯಾಯದ ಕಾರ್ಯವಿಧಾನದ ಮೂಲಕ ಕೆಎಸ್‌ಆರ್‌ಟಿಸಿ ವರ್ಷಕ್ಕೆ ಸುಮಾರು ರೂ. 12.39 ಕೋಟಿ ಗಳಿಸುತ್ತದೆ" ಎಂದು ಕಿರಣ್ ಆರೋಪಿಸಿದರು.

ಇದನ್ನು ಕೋರ್ಟ್​ ಗಂಭೀರವಾಗಿ ಪರಿಗಣಿಸಿತು. ಆದ್ದರಿಂದ ಹೆಚ್ಚುವರಿಯಾಗಿ ಪಡೆದ ಒಂದು ರೂಪಾಯಿ, ಹಾಗೂ ದೂರುದಾರರಿಗೆ ಆಗಿರುವ ಮಾನಸಿಕ ನೋವಿಗೆ 25,000 ರೂ. ಪರಿಹಾರವನ್ನು ಹಾಗೂ ನ್ಯಾಯಾಲಯದ ವೆಚ್ಚವಾಗಿ 5,000 ರೂ.ಗಳನ್ನು ಪಾವತಿಸುವಂತೆ ಆದೇಸಿಸಿದೆ. ಒಂದು ತಿಂಗಳೊಳಗೆ 30,001 ರೂ.ಗಳನ್ನು ಪಾವತಿಸಲು ಕೆಎಸ್‌ಆರ್‌ಟಿಸಿಗೆ ವೇದಿಕೆ ನಿರ್ದೇಶಿಸಿದೆ. ಇದೇ ಆದೇಶ ಇಟ್ಟುಕೊಂಡು ಹೆಚ್ಚು ಪಡೆದವರೆಲ್ಲಾ ವೇದಿಕೆಯ ಮೊರೆ ಹೋದರೆ, ಸಾರಿಗೆ ಸಂಸ್ಥೆ ಕಥೆ ಅಷ್ಟೇ!

PREV
Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ