* ಕುಟುಂಬದ ಜತೆಗೆ ನೆಮ್ಮದಿಯ ಕ್ಷಣ ಕಳೆಯಲು ಈ ನಗರವನ ಸ್ಥಾಪನೆ
* ಇದು ಉದ್ಯಾನವನವಲ್ಲ ಬದಲಿಗೆ ಅರಣ್ಯ ರೂಪದ ವನ
* ನವಗ್ರಹ ವನ ಮತ್ತು ರಾಶಿ ವನಗಳನ್ನು ಬೆಳೆಸಲಾಗುತ್ತಿದೆ
ಬಸವರಾಜ ಹಿರೇಮಠ
ಧಾರವಾಡ(ಜು.09): ನಗರ ಪ್ರದೇಶದ ವ್ಯಾಪ್ತಿಯಲ್ಲಿ ಒತ್ತಡದ ಸನ್ನಿವೇಶದಲ್ಲಿ ಜೀವನ ಸಾಗಿಸುತ್ತಿರುವ ಜನರಿಗೆ ನೆಮ್ಮದಿ, ಹಸಿರೀಕರಣದ ಬಗ್ಗೆ ಆಸಕ್ತಿ ಹುಟ್ಟಿಸುವುದು, ಶಾಂತವಾದ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನವಲೂರು ಬಳಿ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ನಗರ ವನ ಸೃಷ್ಟಿಸಲಾಗಿದೆ.
ಪ್ರಸ್ತುತ ಧಾರವಾಡದಲ್ಲಿ ಬಾರೋ ಸಾಧನಕೇರಿ, ಕಿತ್ತೂರು ಚೆನ್ನಮ್ಮ ಪಾರ್ಕ್, ಕೆಲಗೇರಿ ಸೇರಿದಂತೆ ಹಲವು ಉದ್ಯಾನವನಗಳಿವೆ. ಆದರೆ, ಈ ಉದ್ಯಾನವನಗಳಿಗೆ ಭಿನ್ನವಾಗಿ ಹೆಚ್ಚು ಆಮ್ಲಜನಕ ಸಿಗುವ ಮರಗಳನ್ನು ಹೊಂದಿರುವ ಹಾಗೂ ಕೆಲಸದ ಒತ್ತಡ ಮರೆತು ಕೆಲ ಕ್ಷಣಗಳ ಕಾಲ ಕುಟುಂಬದ ಜತೆಗೆ ಕಾಲ ಕಳೆಯಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಈ ನಗರ ವನ ರೂಪಿಸಲಾಗಿದ್ದು ನಗರದ ಜನತೆಯನ್ನು ಆಕರ್ಷಿಸುತ್ತಿದೆ. ಧಾರವಾಡ ಪ್ರಾದೇಶಿಕ ಅರಣ್ಯ ವಿಭಾಗವು ನವಲೂರು ಗ್ರಾಮ ವ್ಯಾಪ್ತಿ ಅರಣ್ಯ ಇಲಾಖೆಯ ಗುಡ್ಡದ ಪ್ರದೇಶದಲ್ಲಿ ಕೇಂದ್ರ ಸರ್ಕಾರದ .2 ಕೋಟಿ ಅನುದಾನದಲ್ಲಿ ಸಾಲು ಮರದ ತಿಮ್ಮಕ್ಕ ನಗರವನ ಇದೀಗ ಗಮನ ಸಳೆಯುತ್ತಿದೆ.
ಕರ್ನಾಟಕ ಪರಿಸರ ಇಲಾಖೆಗೆ ಸಾಲು ಮರದ ತಿಮ್ಮಕ್ಕ ರಾಯಭಾರಿ: ಆದೇಶ ಹೊರಡಿಸಿದ ಸರ್ಕಾರ
ಏನಿದೆ ನಗರ ವನದಲ್ಲಿ?:
ಈ ಪ್ರದೇಶವು ಒಟ್ಟು 58.29 ಹೆಕ್ಟರ್ ಅರಣ್ಯ ಪ್ರದೇಶವಿದ್ದು, ಈ ಪೈಕಿ ಐದು ಹೆಕ್ಟೇರ್ ಪ್ರದೇಶದಲ್ಲಿ ಈ ನಗರ ವನ ಶುರು ಮಾಡಲಾಗಿದೆ. ವನದಲ್ಲಿ ಔಷಧೀಯ ಸಸ್ಯಗಳು ಸೇರಿದಂತೆ ಹೆಚ್ಚು ಆಮ್ಲಜನಕ ನೀಡುವ ಮರಗಳನ್ನು ಬೆಳೆಸಲಾಗುತ್ತಿದೆ. ಆ ಮರಗಳ ಮಾಹಿತಿ ಫಲಕಗಳ ಆ ಗಿಡಗಳ ಬಳಿ ನೆಡಲಾಗಿರುವುದು ವಿಶೇಷ. ನವಗ್ರಹ ವನ ಮತ್ತು ರಾಶಿ ವನಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನಗರವನ ಯೋಜನೆಯಡಿ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳನ್ನು ಹಾಗೂ ಗಡಿ ಬಲವರ್ಧನೆಯಡಿ ಮುಳ್ಳುತಂತಿ ಬೇಲಿ ನಿರ್ಮಾಣ ಸಹ ಮಾಡಲಾಗುತ್ತಿದೆ. ದ್ವಾರಬಾಗಿಲು, ಸೂಚನಾ ಫಲಕಗಳು, ಪರಗೋಲಾ, ಚಿಕ್ಕ ಮಕ್ಕಳ ಆಟದ ವಸ್ತುಗಳು, ವೀಕ್ಷಣಾ ಗೋಪುವಿದೆ. ಆಸಕ್ತರು ಗುಡ್ಡದ ಸುತ್ತಲೂ ಹತ್ತಾರು ಕಿಮೀ ಟ್ರಕ್ಕಿಂಗ್ ಸಹ ಮಾಡಬಹುದು.
ರೋಪ್ ವೇ ಮಾಡಲಿ:
ನವಲೂರಿನ ನಗರವನದಂತೆ ಹು-ಧಾ ಮಹಾನಗರ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚು ಉದ್ಯಾನವನಗಳಲ್ಲಿ ಅರಣ್ಯೕಕರಣಗೊಳಿಸಲು ಉದ್ದೇಶಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹೂ, ಹಣ್ಣು ಮತ್ತು ಹಸಿರೆಲೆಗಳನ್ನು ಹೆಚ್ಚು ನೀಡುವ ಸಸಿಗಳನ್ನು ನಮ್ಮ ಉದ್ಯಾನವನಗಳಲ್ಲಿ ನೆಡಬೇಕು. ಇದರಿಂದ ಉದ್ಯಾನವನಗಳ ಒತ್ತುವರಿಯನ್ನು ತಪ್ಪಿಸಬಹುದು ಮತ್ತು ನಗರ ಸೌಂದರ್ಯಿಕರಣಕ್ಕೆ ಅನುಕೂಲವಾಗುತ್ತದೆ. ಈ ನಗರವನದಿಂದ ಸಂಜೀವಿನ ಪಾರ್ಕ್ಗೆ ರೋಪ್ ವೇ ಮಾಡುವ ಚಿಂತನೆಯೂ ನಡೆದಿದೆ ಎಂದು ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಶುಕ್ರವಾರವಷ್ಟೇ ಈ ನಗರವನಕ್ಕೆ ಚಾಲನೆ ನೀಡಿ ಮಾಹಿತಿ ನೀಡಿದರು.
ಪ್ರಾಕೃತಿಕವಾಗಿ ನವಲೂರು ಸುಂದರ ಪ್ರದೇಶ. ಇಲ್ಲಿ ನಗರ ವನ ಮಾಡುತ್ತಿರುವುದು ಉತ್ತಮ.ಆದರೆ, ಸಾಲು ಮರದ ತಿಮ್ಮಕ್ಕ ನಗರವನ ಧಾರವಾಡ ಎಂಬುದರ ಬದಲು ನವಲೂರು ಎಂದಾಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಈ ಮಹತ್ವಾಕಾಂಕ್ಷೆ ಯೋಜನೆಗೆ ಜಿಲ್ಲೆಯ ಎಲ್ಲ ನಾಗರಿಕರು, ಪರಿಸರ ಪ್ರೇಮಿಗಳು, ಸಂಘ-ಸಂಸ್ಥೆಗಳ ಸದಸ್ಯರು ಸಹಕಾರ ನೀಡಿ ಯಶಸ್ವಿಗೊಳಿಸಬೇಕೆಂದು ಪಾಲಿಕೆ ಸದಸ್ಯ ಡಾ. ಮಯೂರ ಮನವಿ ಮಾಡುತ್ತಾರೆ.
ಸಾಲುಮರದ ತಿಮ್ಮಕ್ಕಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ, ಜನ್ಮದಿನದಂದೇ ಸಿಕ್ತು ವಿಶೇಷ ಉಡುಗೊರೆ
ಭಾರತ ಸರ್ಕಾರವು ನಗರವನ ಯೋಜನೆಯಡಿ ನಗರ ಪ್ರದೇಶದಲ್ಲಿ ವನ ವೃದ್ಧಿಸಲು ಅನುದಾನ ನೀಡುತ್ತಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಹಲವಾರು ಕಾರಣಗಳಿಂದ ಉಷ್ಣಾಂಶ ಹೆಚ್ಚಳವಾಗಿ ನೆಮ್ಮದಿಯಿಂದ ಜೀವನ ಸಾಗಿಸುವುದು ದುಸ್ತರವಾಗಿದೆ.ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಈ ನಗರವನ ಯೋಜನೆ ಅನುಷ್ಟಾನಕ್ಕೆ ತರಲಾಗಿದೆ. ಅಂತೆಯೇ ಜಿಲ್ಲೆಯ ನವಲೂರು ಸಾಲು ಮರದ ತಿಮ್ಮಕ್ಕ ನಗರವನವನ್ನು ನವಲೂರು ಬಳಿ .2 ಕೋಟಿ ಅನುದಾನದಲ್ಲಿ ಪ್ರಾರಂಭಿಸಲಾಗಿದೆ ಅಂತ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ ತಿಳಿಸಿದ್ದಾರೆ.
ನಗರ ವನಕ್ಕೆ ದಾರಿ:
ನವಲೂರು ಗ್ರಾಮದ ಮೂಲಕವೂ ಈ ನಗರವನ ತಲುಪಬಹುದು.ಅಥವಾ ಹುಬ್ಬಳ್ಳಿ ಮಾರ್ಗವಾಗಿ ರಾಯಪೂರದ ಮೂಲಕ,ಧಾರವಾಡ ಮಾರ್ಗವಾಗಿ ನವಲೂರು ರೇಲ್ವೆ ಸೇತುವೆ ಕೆಳಗೆ ನವಲೂರು ಮಾರ್ಗವಾಗಿ ಬಂದರೆ ಈ ನಗರ ವನ ತಲುಪಬಹುದು. ಹುಬ್ಬಳ್ಳಿಯಿಂದ 16 ಕಿಮೀ ಧಾರವಾಡದಿಂದ 8 ಕಿಮೀ ದೂರ ಈ ವನವಿದೆ.