ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: ನೆಲಕಚ್ಚಿದ ಮನೆ, ವಿದ್ಯುತ್ ಕಂಬ, ಮರ

By Suvarna News  |  First Published Jul 9, 2022, 8:39 PM IST

* ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ 
* ಹಳ್ಳಿದಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಶೋಧ  
* ರಸ್ತೆಗೆ ಬಿದ್ದ ವಿದ್ಯುತ್ ಕಂಬ, ಮರಗಳು 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಜುಲೈ.09)
: ಕಾಫಿನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, 6ನೇ ದಿನದತ್ತ ಮಳೆಯ ಅಬ್ಬರ ಮುಂದುವರೆದಿದೆ. ಧರೆಕುಸಿದು, ವಿದ್ಯುತ್ಕಂಬ ಉರುಳಿಬಿದ್ದಿವೆ. ಮಳೆ ಆರ್ಭಟ ಮುಂದುವರೆದಿದ್ದರಿಂದ ತುಂಗಾ,ಭದ್ರಾ, ಹೇಮವತಿ ನದಿಗಳು ಮೈದುಂಬಿ ಹರಿಯುತ್ತಿದೆ. 

ಮಲೆನಾಡಿನಲ್ಲಿ ಮಳೆ ಅಬ್ಬರ 
ಚಿಕ್ಕಮಗಳೂರು ತಾಲೂಕಿನ ಅಂಬಳೆ,ಲಕ್ಯಾ ಹೋಬಳಿ ಹೊರತುಪಡಿಸಿದರೆ ಉಳಿದ ಮಲೆನಾಡು ಭಾಗ, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 9ಮನೆಗಳು ನೆಲಸಮಗೊಂಡಿದ್ದರೆ, 15ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮೂಡಿಗೆರೆ ತಾಲೂಕಿನಲ್ಲೆ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ನಷ್ಟವನ್ನು ಅಂದಾಜಿಸುವಂತೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದರ್ಬಾರ್ ಪೇಟೆ ಗಣೇಶ್ ಅವರ ಮನೆ ಕುಸಿದು ಬಿದ್ದು ಮನೆಯಲ್ಲಿದ್ದವರು ಪ್ರಾಣಪಯದಿಂದ ಪಾರಾಗಿದ್ದಾರೆ. 

Tap to resize

Latest Videos

ಚಿಕ್ಕಮಗಳೂರು: ಮುಂದುವರಿದ ಮಳೆ ಅಬ್ಬರ, ಜನಜೀವನ ಸಂಪೂರ್ಣ ಅಸ್ತವ್ಯಸ್ಥ

ಅದೇ ರೀತಿ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಸುನಿಲ್ ಎಂಬವರಿಗೆ ಸೇರಿದ ಮನೆಯೂ ಮಳೆಯ ಅಬ್ಬರಕ್ಕೆ ಕುಸಿದು ಬಿದ್ದಿದೆ. ಮನೆ ಒಳಗಿನ ಪೀಠೋಪಕರಣಗಳು, ಸಾಮಾಗ್ರಿಗಳು ಹಾನಿಗಳಾಗಿವೆ. ಚಿಕ್ಕಮಗಳೂರು ತಾಲೂಕಿನ ಮಣಬೂರಿನಲ್ಲಿ ಮಳೆಗೆ ಕಿರು ಸೇತುವೆ ಕುಸಿದಿದೆ. ಇದರಿಂದ ಚಿಕ್ಕಮಗಳೂರು -ಮಣಬೂರು ಸಂಪರ್ಕ ಕಡಿತವಾಗಿದ್ದು,ರಸ್ತೆಗಳು ಕುಸಿಯುತ್ತಿರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ. ಇನ್ನೊಂದೆಡೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ದರೆಗುರುಳಿ ಹತ್ತಾರು ವಿದ್ಯುತ್ ಕಂಬಗಳು ಟ್ರಾನ್ಸ್ ಫಾರ್ಮರ್ ಮುರಿದು ಬಿದ್ದಿದೆ.

 ವಾಹನ ಸಂಚಾರ ಸ್ಥಗಿತ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ದಿಂದ ಹೊರನಾಡು ಸಂಪರ್ಕಿಸುವ ಹೆದ್ದಾರಿಗೆ ಕೆಳಗೂರು ಸಮೀಪ ಮರ ಬಿದ್ದಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಲಾಗಿದ್ದು ಈಗ ಸಂಚಾರ ಸುಗಮವಾಗಿದೆ.

ಆತಂಕದಲ್ಲಿ  ಕಾಫಿ ಬೆಳೆಗಾರರು 
ದಿನದಿಂದ ದಿನಕ್ಕೆ ಮಳೆ ಬಿರುಸು ಪಡೆದುಕೊಳ್ಳುತ್ತಿರುವುದರಿಂದ ತೇವಾಂಶ ಅಧಿಕವಾಗಿ ಬೆಳೆಗಳಿಗೆ ಕೊಳೆರೋಗ ಬರುವ ಆತಂಕವನ್ನು ರೈತರು ಮತ್ತು ಬೆಳೆಗಾರರು ಎದುರಿಸುತ್ತಿದ್ದಾರೆ. ಕಾಫಿಕಾಯಿ ಮತ್ತು ಎಲೆಗಳು ಈಗಾಗಲೇ ಉದುರಲಾರಂಭಿಸಿವೆ ಎಂದು ಬೆಳೆಗಾರರು ಆತಂಕವನ್ನು ಹೊರಹಾಕಿದಗ್ದಾರೆ. ಮಳೆಯ ಆರ್ಭಟಕ್ಕೆ ಕೆಲವೆಡೆ ಮನೆಗಳಗೋಡೆ ಕುಸಿದಿದ್ದರೆ, ವಿದ್ಯುತ್ಕಂಬಗಳ ಧರೆಗುರುಳಿವೆ. ಭೂ ಕುಸಿತ ಉಂಟಾಗಿದೆ. ಕೊಪ್ಪ ತಾಲೂಕಿನ ಮಡಬೂರು ಬಳಿ ಕಿರುಸೇತುವೆ ಕುಸಿದಿದೆ. ಬಸರಿಕಟ್ಟೆ ಹತ್ತಿರ ಹತ್ತಾರು ವಿದ್ಯುತ್ಕಂಬಗಳ ಧರೆಗುರುಳಿವೆ.

ಬಾಲಕಿಗಾಗಿ ಮುಂದುವರಿದ ಶೋಧ 
ಸೋಮವಾರ ಶಾಲೆಗೆ ಮುಗಿಸಿ ಮನೆಗೆ ತೆರಳುವ ಸಮಯದಲ್ಲಿ ಹೊಸಪೇಟೆಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗಿರುವ 6 ವರ್ಷದ ಬಾಲಕಿ ಸುಪ್ರೀತಾಗಾಗಿ ಶೋಧ ಕಾರ್ಯ ಇಂದು ಕೂಡ ನಡೆಯಿತು.. 1ನೇ ತರಗತಿ ಓದುತ್ತಿದ್ದ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿ 5 ದಿನಗಳೇ ಕಳೆದಿದೆ. ಈವರೆಗೂ ಬಾಲಕಿ ಪತ್ತೆಯಾಗದ ಹಿನ್ನಲೆಯಲ್ಲಿ ಪೋಷಕರು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

click me!