ಮೂಲ್ಕಿ ಪ್ರವಾಹದಿಂದಾಗಿ ಮಳೆಗಾಲದಲ್ಲಿ ದ್ವೀಪದಂತಾಗುವ ಪಂಜ: ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯದಲ್ಲಿ ಸಿಗುವುದೇ ಪರಿಹಾರ ಹಲವಾರು ವರ್ಷಗಳಿಂದ ನೆರೆಯಿಂದ ತತ್ತರಿಸುತ್ತಿರುವ ನಂದಿನ ನದಿ ತಟದ ಪಂಜ, ಉಲ್ಯ, ಮೊಗಪಾಡಿ ಗ್ರಾಮಸ್ಥರು
ಮೂಲ್ಕಿ ,(ಜು.15) : ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ, ಉಲ್ಯ, ಮೊಗಪಾಡಿ ಪ್ರದೇಶಗಳು ನಂದಿನಿ ನದಿ ತಟದಲ್ಲಿದ್ದು ತಗ್ಗು ಪ್ರದೇಶವಾಗಿರುವ ಇಲ್ಲಿ ಹೆಚ್ಚು ಕೃಷಿ ಭೂಮಿಗಳಿಂದ ಕೂಡಿದ್ದು ಇಲ್ಲಿನ ಗ್ರಾಮಸ್ಥರು ಜೀವನಕ್ಕೆ ಕೃಷಿಯನ್ನೇ ಅವಲಂಬಿಸಿದ್ದಾರೆ. ಪ್ರತಿವರ್ಷದ ಮಳೆಗಾಲದಲ್ಲಿ ಪ್ರವಾಹವುಂಟಾಗಿ ಬೆಳೆ ನಾಶವಾಗುತ್ತಿರುವುದರಿಂದ ಈ ಭಾಗದ ರೈತರನ್ನು ಚಿಂತೆಗೀಡುಮಾಡಿದೆ.
ಪ್ರತಿ ವರ್ಷ ಮಳೆಗಾಲ (Monsoon) ಸಂದರ್ಭದಲ್ಲಿ ನದಿ (River) ಉಕ್ಕಿ ಇಲ್ಲಿನ ಕೃಷಿ ಭೂಮಿಗಳನ್ನು ಆವರಿಸಿ ನಿರಂತರವಾಗಿ ಕೃಷಿಹಾನಿಯಾಗುತ್ತಿದ್ದು ಇಲ್ಲಿನ ಗ್ರಾಮಸ್ಥರು ಕಂಗಲಾಗಿದ್ದಾರೆ. ಕೆಲವು ವರ್ಷದ ಹಿಂದೆ ಉಲ್ಯದಲ್ಲಿ ಅಣೆಕಟ್ಟು ಒಡೆದು ನೀರು ಒಳ ನುಗ್ಗಿ ಹೆಚ್ಚಿನ ಹಾನಿಯಾಗಿದ್ದು ಮನೆಯವರು ತಾವು ಸಾಕಿದ ದನ ಕರುಗಳನ್ನು ಕುತ್ತಿಗೆಯಲ್ಲಿ ಎತ್ತಿಕೊಂಡು ಸೊಂಟದವರೆಗಿನ ನೀರಿನಲ್ಲೇ ಸಾಗಿ ದಡ ಸೇರಿದ ಘಟನೆಯೂ ನಡೆದಿದೆ. (ಕನ್ನಡಪ್ರಭ ಪತ್ರಿಕೆಯಲ್ಲಿ ಮುಖಪುಟದಲ್ಲಿ ಫೋಟೋ ಪ್ರಕಟವಾಗಿತ್ತು).
ಇದನ್ನೂ ಓದಿ: ಕಡಲ್ಕೊರೆತ ತಡೆಗೆ ‘ಸೀ ವೇವ್ ಬ್ರೇಕರ್’ ತಂತ್ರಜ್ಞಾನ: ಸಿಎಂ ಬೊಮ್ಮಾಯಿ
ಮಳೆಗಾಲದಲ್ಲಿ ನಿಲ್ಲದ ಗೋಳು: ಕಳೆದ ಹತ್ತು ದಿನಗಳ ನಿರಂತರ ಮಳೆ (Heavy rain) ಸುರಿಯುತ್ತಿರುವುದರಿಂದ ಈ ಬಾರಿಯೂ ನೆರೆ ಆವರಿಸಿದ್ದು, ಹೆಚ್ಚಿನ ಗ್ರಾಮಸ್ಥರು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಮಳೆ ಅಲ್ಪಪ್ರಮಾಣದಲ್ಲಿ ಕಡಿಮೆಯಾದರೂ ಗದ್ದೆಯಲ್ಲಿ ನೀರು ಇನ್ನೂ ಇಳಿಯದ ಕಾರಣ ಕೃಷಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿಮಾರ್ಣವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಎರಡು ದಿನಗಳ ಹಿಂದೆ ದ.ಕ. ಜಿಲ್ಲೆ ಮಳೆಹಾನಿ ಪರಿಶೀಲನೆ ಭೇಟಿಗೆ ಆಗಮಿಸಿದ್ದ ವೇಳೆ ಪಂಜ, ಉಲ್ಯಕ್ಕೂ ಭೇಟಿ ನೀಡುವ ಮಾಹಿತಿ ಇತ್ತು. ನಾಡಿನ ದೊರೆಯ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗಬಹುದೆಂದು ಇಲ್ಲಿನ ನಿವಾಸಿಗಳು ಆಶಾಭಾವನೆ ಇಟ್ಟು ಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿಗಳ ಭೇಟಿ ರದ್ದಾದ ಕಾರಣ ಗ್ರಾಮಸ್ಥರು ನಿರಾಸೆ ಅನುಭವಿಸಿದರು.
ಆಶಾಭಾವನೆ ಮೂಡಿಸಿದ ಡಿಸಿ ವಾಸ್ತವ್ಯ: ಜುಲೈ 16ರಂದು ಶನಿವಾರ ದ.ಕ. ಜಿಲ್ಲಾಧಿಕಾರಿಗಳು ಪಂಜ ವಿಠೋಭ ಭಜನಾ ಮಂದಿರದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆಗ ತಮ್ಮ ಸಮಸ್ಯೆ ಶಾಶ್ವತವಾಗಿ ಬಗೆಹರಿಯಬಹುದೆಂಬ ಆಶಾ ಭಾವನೆಯಲ್ಲಿದ್ದಾರೆ ಇಲ್ಲಿನ ಗ್ರಾಮಸ್ಥರು. ಮಳೆಗಾಲದಲ್ಲಿ ನಿರಂತರ ಮಳೆ ಬಂದಲ್ಲಿ ಮಳೆ ನಿಂತರೂ ಮನೆ ಸೇರಲು ದೋಣಿಯನ್ನೇ ಆಶ್ರಯಿಸಬೇಕಾಗಿದೆ. ಈ ಬಾರಿಯೂ ನಿರಂತರ ಮಳೆಯಿಂದಾಗಿ ಭತ್ತದ ಗದ್ದೆ ಮುಳುಗಿ ನಡುಗಡ್ಡೆಯಂತಾದ ದ್ವೀಪದಲ್ಲಿ ವಾಸಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಮಂಗ್ಳೂರಲ್ಲಿ ಕಡಲಬ್ಬರ: ಬೈಕಂಪಾಡಿ ಮೀನಕಳಿಯದಲ್ಲಿ ರಸ್ತೆಯೇ ಸಮುದ್ರ ಪಾಲು
ಲಕ್ಷಾಂತರ ಮೌಲ್ಯದ ಕೃಷಿ ಹಾನಿ: ನಂದಿನಿ ನದಿ ಉಕ್ಕಿ ಹರಿದ ಪರಿಣಾಮ ಭತ್ತದ ಗದ್ದೆಗಳು, ನದಿಗಳು ಒಂದೇ ರೀತಿಯಾಗಿದ್ದು ಎಕರೆಗಟ್ಟಲೆ ಭತ್ತದ ಗದ್ದೆಯಲ್ಲಿ ನೀರು ತುಂಬಿ ಲಕ್ಷಾಂತರ ಮೌಲ್ಯದ ಕೃಷಿ ನಾಶವಾಗಿದೆ. ಕೆಲವು ವರ್ಷಗಳ ಹಿಂದೆ ಅಣೆಕಟ್ಟು ಒಡೆದ ಬಳಿಕ ನಂದಿನಿಗೆ ನದಿಗೆ ತಡೆಗೋಡೆ ಕಟ್ಟದ ಕಾರಣ ಹಾಗೂ ಕೆಲವು ಕಿಂಡಿ ಅಣೆಕಟ್ಟುಗಳಲ್ಲಿ ಬಿದ್ದಿರುವ ಮರ, ಗೆಲ್ಲುಗಳನ್ನು ತೆಗೆಯದ ಕಾರಣ ನೀರು ಸರಾಗವಾಗಿ ಹರಿಯದೆ ಒಳಗೆ ನುಗ್ಗುತ್ತಿದೆ. ಇಲ್ಲಿನ ಗ್ರಾಮಸ್ಥರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಕೃಷಿ ಭೂಮಿಯಲ್ಲಿ ದೋಣಿಯಲ್ಲಿ ಸಾಗುತ್ತಿದ್ದಾರೆ. ತಕ್ಷಣ ಸರ್ಕಾರ ನಮ್ಮ ಬೆಳೆ ನಷ್ಟಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಕೊಟ್ಟು ಸ್ಪಂದಿಸುವಂತೆ ಗ್ರಾಮಸ್ಥರ ಆಗ್ರಹವಾಗಿದೆ. ಪ್ರತಿ ವರ್ಷ ನೆರೆ ಬಂದರೆ ಇಳಿಯುತ್ತಿದ್ದರೆ. ಆದರೆ ಈ ಬಾರಿ ವಾರಗಟ್ಟಲೇ ಇಳಿಯದೆ ಜನರು ತತ್ತರಿಸಿದ್ದಾರೆ. ವಾರದಿಂದಲೂ ನಿಂತಿರುವ ನೀರು ಗದ್ದೆಯಲ್ಲಿ ಇನ್ನೂ ಇಳಿದಿಲ್ಲ. ಸರ್ಕಾರ ಹೆಕ್ಟೇರ್‌ಗೆ 3-4 ಸಾವಿರ ಪರಿಹಾರ ಕೊಟ್ಟರೆ ಸಾಲುವುದಿಲ್ಲ. ಸುಮಾರು 300 ಎಕರೆ ಕೃಷಿ ಭೂಮಿ ನಾಶವಾಗಿದ್ದು ಸಾವಿರಾರು ಎಕರೆ ತೋಟಕ್ಕೆ ಹಾನಿಯಾಗಿದೆ. ಉಲ್ಯ ಸಮೀಪದ ಪಂಜ, ಕೊಯ್ಕುಡೆ, ಕೆಮ್ರಾಲ್ ಭಾಗದ ಭತ್ತದ ಗದ್ದೆಯಲ್ಲಿ ಇನ್ನೂ ನೀರು ನಿಂತಿದ್ದು ಮೇ ತಿಂಗಳಿನಲ್ಲಿ ಪತ್ತನಾಜೆ ಬಳಿಕ ಕೃಷಿ ಕಾರ್ಯ ಆರಂಭಿಸಿದ ರೈತರಿಗೆ ಭಾರಿ ಪ್ರಮಾಣದ ಭತ್ತ ನಾಶವಾಗಿದೆ. ಅಡಕೆ, ತೆಂಗು ಮತ್ತು ಬಾಳೆ ತೋಟಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದ್ದು ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳು ಕಂಗಾಲಾಗಿವೆ.
"ನನ್ನ ಕ್ಷೇತ್ರ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ, ಉಲ್ಯ ಪರಿಸರದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆ ಸಂದರ್ಭದಲ್ಲಿ ನೆರೆಯಿಂದಾಗಿ ಗ್ರಾಮಸ್ಥರಿಗೆ ಹೆಚ್ಚಿನ ನಷ್ಟಉಂಟಾಗುತ್ತಿದೆ. ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಮಾತನಾಡಿದ್ದು ಅವರು ಜಿಲ್ಲೆ ಭೇಟಿ ಸಂದರ್ಭ ಪಂಜ, ಉಲ್ಯ ನೆರೆಪೀಡಿತ ಪ್ರದೇಶ ವೀಕ್ಷಿಸುವುದಾಗಿ ಭರವಸೆ ನೀಡಿದ್ದರು. ಸಮಯದ ಅಭಾವದಿಂದ ಭೇಟಿ ರದ್ದಾಯಿತು. ಇದೀಗ ಜಿಲ್ಲಾಧಿಕಾರಿಯವರು ಶನಿವಾರ ಪಂಜದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು ಆ ಸಂದರ್ಭ ಸಮಸ್ಯೆಗೆ ಶಾಸ್ವತ ಪರಿಹಾರ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ"
- ಉಮಾನಾಥ ಕೋಟ್ಯಾನ್, ಶಾಸಕ
"ಈ ಭಾಗದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ನಂದಿನಿ ಉಕ್ಕಿ ಹರಿದು ಎಕರೆಗಟ್ಟಲೆ ಕೃಷಿ ನಾಶ ಉಂಟಾಗುತ್ತಿದೆ. ಈ ಬಾರಿ ಸುಮಾರು 500ಕ್ಕೂ ಹೆಚ್ಚು ಎಕರೆ ಕೃಷಿ ನಾಶ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಹಾನಿ ಸಂಭವಿಸಿದೆ. ಉಲ್ಯ ಪರಿಸರದಲ್ಲಿ ಸುಮಾರು 5 ಕಿ.ಮೀ. ಉದ್ದಕ್ಕೆ ತಡೆಗೋಡೆ ಅವಶ್ಯಕತೆ ಇದೆ. ಈ ಭಾಗದಲ್ಲಿ ದಾರಿದೀಪ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ನಾವು ವಂಚಿತರಾಗಿದ್ದೇವೆ. ಕೂಡಲೇ ಸೂಕ್ತ ವ್ಯವಸ್ತೆ ಕಲ್ಪಿಸಬೇಕು."
- ಸತೀಶ್ ಶೆಟ್ಟಿಬೈಲಗುತ್ತು, ಕೃಷಿಕ