Idgah Maidan ಕ್ಕೆ ಚಾಮರಾಜೇಂದ್ರ ಒಡೆಯರ್‌ ಹೆಸರಿಡುವಂತೆ ಒತ್ತಾಯ

Published : Jul 15, 2022, 09:19 AM IST
Idgah Maidan ಕ್ಕೆ ಚಾಮರಾಜೇಂದ್ರ ಒಡೆಯರ್‌ ಹೆಸರಿಡುವಂತೆ ಒತ್ತಾಯ

ಸಾರಾಂಶ

ಈದ್ಗಾ ಮೈದಾನಕ್ಕೆ ಚಾಮರಾಜೇಂದ್ರ ಒಡೆಯರ್‌ ಹೆಸರಿಡುವಂತೆ  ಬಿಬಿಎಂಪಿಗೆ ಸಂಸದ ಪಿ.ಸಿ.ಮೋಹನ್‌ ಒತ್ತಾಯಿಸಿದ್ದಾರೆ.

ಬೆಂಗಳೂರು (ಜು.15): ಚಾಮರಾಜಪೇಟೆಯ ಮೈದಾನಕ್ಕೆ ಚಾಮರಾಜೇಂದ್ರ ಒಡೆಯರ್‌ ಅವರ ಹೆಸರಿಡಬೇಕು, ಸ್ವಾತಂತ್ರ್ಯ ದಿನಾಚಣೆ ಸೇರಿದಂತೆ ವಿವಿಧ ಆಚರಣೆಗೆ ಅವಕಾಶ ನೀಡಬೇಕೆಂದು ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ.ಮೋಹನ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸದಸ್ಯರು ಸಂಸದ ಪಿ.ಸಿ.ಮೋಹನ್‌ ನೇತೃತ್ವದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಸಭೆ ನಡೆಸಿದರು. ಈ ವೇಳೆ ಪಿ.ಸಿ.ಮೋಹನ್‌, ಬಿಬಿಎಂಪಿ ಆಸ್ತಿ ಆಗಿರುವ ಚಾಮರಾಜಪೇಟೆ ಆಟದ ಮೈದಾನಕ್ಕೆ ಚಾಮರಾಜೇಂದ್ರ ಒಡೆಯರ್‌ ಅವರ ಹೆಸರು ನಾಮಕರಣ ಮಾಡಬೇಕು. ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆ, ನವೆಂಬರ್‌ನಲ್ಲಿ ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್‌ ಜಯಂತಿ ಹಾಗೂ ಗಣೇಶ ಉತ್ಸವ, ಶಿವರಾತ್ರಿ ಉತ್ಸವ, ದಸರಾ ಉತ್ಸವ ಸೇರಿದಂತೆ ನಮ್ಮ ನಾಡು- ನುಡಿಯ ವೈಭವವನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತೇವೆ: ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪಿ.ಸಿ. ಮೋಹನ್‌, ಚಾಮರಾಜ ಪೇಟೆ ಆಟದ ಮೈದಾನ ಗೊಂದಲ ನಿವಾರಣೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಸಭೆ ನಡೆಸಲಾಯಿತು. ಮೈದಾನಕ್ಕೆ ಚಾಮರಾಜೇಂದ್ರ ಒಡೆಯರ್‌ ಅವರ ಹೆಸರು ನಾಮಕರಣಕ್ಕೆ ಆಗ್ರಹಿಸಲಾಗಿದೆ. ಜತೆಗೆ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಸೇರಿದಂತೆ ಮೊದಲಾದ ಆಚರಣೆಗೆ ಅವಕಾಶ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆಯಂದು ಚಾಮರಾಜ ಪೇಟೆ ಆಟದ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವುದಕ್ಕೆ ಅವಕಾಶ ಕೇಳಲಾಗಿದೆ. ಒಂದು ವೇಳೆ ಅವಕಾಶ ನೀಡದಿದ್ದರೂ ರಾಷ್ಟ್ರ ಧ್ವಜ ಹಾರಿಸುತ್ತೇವೆ ಎಂದರು.

ಸುಪ್ರೀಂ ಕೋರ್ಚ್‌ ವರ್ಷದಲ್ಲಿ ಎರಡು ದಿನ ಮುಸ್ಲಿಂ ಸಮುದಾಯದವರ ಪ್ರಾರ್ಥನೆಗೆ ಅವಕಾಶ ನೀಡಿದೆ. ಈ ಬಗ್ಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಇತರೆ ಆಚರಣೆಗೂ ಅವಕಾಶ ನೀಡಬೇಕು ಎಂದು ಆಯುಕ್ತರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಒಂದು ವಾರದಲ್ಲಿ ತೀರ್ಮಾನ ತೆಗೆದುಕೊಳ್ಳವ ಭರವಸೆಯನ್ನು ಮುಖ್ಯ ಆಯುಕ್ತರು ನೀಡಿದ್ದಾರೆ ಎಂದು ತಿಳಿಸಿದರು.

ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಪತ್ರ: ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಮಾತನಾಡಿ, ಚಾಮರಾಜಪೇಟೆ ಆಟದ ಮೈದಾನದ ವಿಚಾರವಾಗಿ ಸಂಸದರೊಂದಿಗೆ ಚರ್ಚೆ ನಡೆಸಲಾಗಿದೆ. ಮೈದಾನದಲ್ಲಿ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು ಹಾಗೂ ಚಾಮರಾಜೇಂದ್ರ ಒಡೆಯರ್‌ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಇನ್ನು ಸುಪ್ರೀಂ ಕೋರ್ಚ್‌ ಆದೇಶದ ಮೇಲೆ ವಕ್ಫ್ ಮಂಡಳಿ ಚಾಮರಾಜ ಪೇಟೆ ತಮ್ಮ ಆಸ್ತಿ ಎಂದು ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದೆ. ಪೂರಕ ದಾಖಲೆ ಸಲ್ಲಿಸುವಂತೆ ಈಗಾಗಲೇ ವಕ್ಫ್ ಮಂಡಳಿಗೆ ಬಿಬಿಎಂಪಿಯಿಂದ ಎರಡು ನೋಟಿಸ್‌ ನೀಡಲಾಗಿದೆ. ನೋಟಿಸ್‌ ನೀಡಿದ ನಂತರ 25 ದಿನ ಕಾಲಾವಕಾಶ ಇರಲಿದೆ. ತದ ನಂತರ ಜಂಟಿ ಆಯುಕ್ತರು ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ