
ಬೆಂಗಳೂರು (ಜು.15): ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಅನಿವಾರ್ಯವಾಗಿದ್ದು, 10 ಪಥದ ಮೇಲ್ಸೇತುವೆಯಾಗಿ ಅಗಲೀಕರಣ ಮಾಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಇಲಾಖೆಯ ಮುಖ್ಯಸ್ಥರು ಭೇಟಿ ನೀಡಿದ ನಂತರ ಹೆಬ್ಬಾಳ ಮೇಲ್ಸೇತುವೆ ಬಳಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಸಂಚಾರಿ ದಟ್ಟಣೆ ಕಡಿಮೆ ಆಗಿಲ್ಲ. ಹಾಗಾಗಿ, ಬಿಡಿಎಯಿಂದ ಮೇಲ್ಸೇತುವೆ ಅಗಲೀಕರಣಕ್ಕೆ ಸಂಬಂಧಿಸಿದ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಬಿಡಿಎಯಿಂದ ಟೆಂಡರ್ ಆಹ್ವಾನಿಸಿ ನಿರ್ಮಾಣ ಕಾಮಗಾರಿ ಆರಂಭಿಸಲಿದೆ ಎಂದು ತಿಳಿಸಿದರು.
ಸದ್ಯ ನಗರದಿಂದ ವಿಮಾನ ನಿಲ್ದಾಣ ಕಡೆ ಸಾಗಲು ಮೂರು ಪಥ ಮತ್ತು ವಿಮಾನ ನಿಲ್ದಾಣದಿಂದ ನಗರದ ಕಡೆ ಬರಲು ಎರಡು ಪಥವಿದ್ದು, ಅದನ್ನು 10 ಪಥಗಳಾಗಿ ಅಗಲೀಕರಣ ಮಾಡಲಾಗುತ್ತದೆ.
ರೈಲ್ವೆ ಅಂಡರ್ ಪಾಸ್‌ಗೆ ವಿಘ್ನ: ಹೆಬ್ಬಾಳ ಮೇಲ್ಸೇತುವೆ ಕೆಳ ಭಾಗದಲ್ಲಿರುವ ರೈಲ್ವೆ ಹಳಿ ದಾಟಲು ಸದ್ಯಕ್ಕೆ ಅವಕಾಶ ನೀಡುವಂತೆ ಮಾಡಿಕೊಂಡ ಮನವಿಗೆ ರೈಲ್ವೆ ಇಲಾಖೆ ನಿರಾಕರಿಸಿದ್ದು, ಅಂಡರ್ ಪಾಸ್‌ಗೆ ಅನುಮತಿ ನೀಡುವುದಾಗಿ ತಿಳಿಸಿದೆ. ಅಂಡರ್ ಪಾಸ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಹಲವಾರು ತಾಂತ್ರಿಕ ಸಮಸ್ಯೆಗಳು ಎದುರಾಗಲಿವೆ. ಹಾಗಾಗಿ, ಅಂಡರ್ ಪಾಸ್ ನಿರ್ಮಾಣ ಚಿಂತನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಟ್ರಾಫಿಕ್ ತಡೆಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ: ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕ ಪರಿಹಾರದೊಂದಿಗೆ ಶಾಶ್ವತ ಪರಿಹಾರಗಳಿಗೂ ಹೆಚ್ಚು ಆದ್ಯತೆ ಕೊಡಬೇಕು. ನಿಗದಿತ ಅವಧಿಯಲ್ಲಿ ಪರಿಹಾರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಬೇಕೆಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ.
ಗೊರಗುಂಟೆಪಾಳ್ಯದಲ್ಲಿ ಕಾಮಗಾರಿ: ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಈಗಾಗಲೇ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ. ತಾಜ್ ವಿವಾಂತ ಹೋಟೆಲ್ ಪಕ್ಕದಲ್ಲಿ ಎಡ ತಿರುವು ಮತ್ತು ಗೊರಗುಂಟೆ ಪಾಳ್ಯದ ಹೊರ ವರ್ತುಲ ರಸ್ತೆಯಲ್ಲಿ 990 ಮೀ. ಸಮಾನಾಂತರ ರಸ್ತೆಗೆ ಡಾಂಬರೀಕರಣವನ್ನು ತಕ್ಷಣವೇ ಆರಂಭಿಸಬೇಕು. ಶೌಚಾಲಯ ನಿರ್ಮಾಣಕ್ಕಾಗಿ ಜಲಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಹತ್ತು ದಿನಗಳಲ್ಲಿ ಪೂರ್ಣಗೊಳಿಸಬೇಕು. ಬಿಡಿಎ ವತಿಯಿಂದ ಸೈನೇಜ್ ವಿನ್ಯಾಸ ಮುಗಿಯುವ ಹಂತಕ್ಕೆ ಬಂದಿದ್ದು, ವಾರದೊಳಗಾಗಿ ಅದನ್ನು ಅಳವಡಿಸಬೇಕು. ಪಾದಚಾರಿ ಮೇಲುಸೇತುವೆಯ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಳಸೇತುವೆ: ಹೆಬ್ಬಾಳ ಜಂಕ್ಷನ್‌ನಲ್ಲಿ ರೈಲ್ವೇ ಹಳಿ ಕೆಳಗೆ ಕೆಳ ಸೇತುವೆ ಯೋಜನೆ ಕೈಗೆತ್ತಿಕೊಳ್ಳುವ ಯೋಜನೆಯ ಬಗ್ಗೆ ಚರ್ಚಿಸಲಾಯಿತು. ತಾತ್ಕಾಲಿಕವಾಗಿ ಲೆವೆಲ್ ಕ್ರಾಸಿಂಗ್ ಕುರಿತು ಚರ್ಚಿಸಲಾಯಿತು. ಬಿಎಂಟಿಸಿ ವತಿಯಿಂದ ಪ್ರದರ್ಶನ ಫಲಕಗಳನ್ನು ಹಾಕಲು ಮತ್ತು ವೀಕ್ಷಣಾ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ರಾಕೇಶ್ ಸಿಂಗ್ ಸೂಚಿಸಿದರು. ಈ ವೇಳೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪರೆಡ್ಡಿ, ಎಲ್ಲಾ 6 ಪ್ರಮುಖ ಜಂಕ್ಷನ್‌ಗಳಲ್ಲಿ ತಲಾ 25 ಗೃಹರಕ್ಷಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಯದೇವ ಕೆಳ ಸೇತುವೆ ಕೆಲಸ ಪೂರ್ಣ?: ಜಯದೇವ ಜಂಕ್ಷನ್‌ನಲ್ಲಿ ಸವೀರ್‍ಸ್ ರಸ್ತೆಯಲ್ಲಿರುವ ಭಗ್ನಾವಶೇಷಗಳನ್ನು ಬಿಎಂಆರ್‌ಸಿಎಲ್‌ನಿಂದ ತೆರವುಗೊಳಿಸಲಾಗಿದೆ. ಬನ್ನೇರುಘಟ್ಟರಸ್ತೆಯ ಗುಣಮಟ್ಟವನ್ನು ಹೆಚ್ಚಿಸಬೇಕಿದ್ದು, ಜಯದೇವ ಕೆಳಸೇತುವೆ ಕಾಮಗಾರಿಯನ್ನು ಜುಲೈ 15 ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ರಾಕೇಶ್ ಸಿಂಗ್ ತಿಳಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬಿಎಂಟಿಸಿ ಬಸ್ ನಿಲ್ದಾಣದ ಪ್ರವೇಶ ಮಾರ್ಗವನ್ನು ಅಂತಿಮಗೊಳಿಸಿ ಬಸ್‌ಗಳು ಬರಲು ಅನುಮತಿ ನೀಡಬೇಕು. ಕೆ.ಆರ್.ಪುರ ಜಂಕ್ಷನ್‌ನಲ್ಲಿ ಎಡ ಭಾಗದ ರಸ್ತೆಯು ಭಾಗಶಃ ಪೂರ್ಣಗೊಂಡಿದ್ದು, ದೇವಸ್ಥಾನದ ಬಳಿ ಬಸ್ ನಿಲ್ದಾಣವನ್ನು ಪೂರ್ಣಗೊಳಿಸಬೇಕಿದೆ ಹಾಗೂ ಬಲ ಬದಿಯ ಕಾಮಗಾರಿಗಳನ್ನು ಆರಂಭಿಸಬೇಕು ಸೂಚಿಸಿದರು.