ಮನೆ ಮನೆಗಳ ಮುಂದೆಯೂ CAA ವಿರೋಧಿ ಕರಪತ್ರ : ಕಾಣದ ಕೈವಾಡ

By Suvarna NewsFirst Published Jan 14, 2020, 2:47 PM IST
Highlights

 ಚಿತ್ರದುರ್ಗ ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿ ಮನೆ ಮನೆಗಳ ಮುಂದೆಯೂ ಪೌರತ್ವ ವಿರೊಧಿ ಕರಪತ್ರಗಳನ್ನು ಅಂಟಿಸಲಾಗಿದೆ. ಆದರೆ ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವುದು ಮಾತ್ರ ತಿಳಿದು ಬಂದಿಲ್ಲ.

ಚಿತ್ರದುರ್ಗ [ಜ.14]:  ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆ ರೂಪಿಸಿದ ಅಂದಿನಿಂದ ಈವರೆಗೆ ಒಂದಲ್ಲಾ ಒಂದು ರೀತಿಯ ವಿರೋಧ ಕೇಳಿಬರುತ್ತಿದೆ. ಬಹುತೇಕ ಜನರಿಗೆ ಈ ಕಾಯಿದೆಯ ಸತ್ಯಾಂಶ ಏನೆಂಬುದು ತಿಳಿದಿಲ್ಲ. ಕೆಲವರಿಗೆ ಕಾಯಿದೆ ಉದ್ದೇಶ ತಿಳಿದಿದ್ದರೂ ದುರುದ್ದೇಶದಿಂದ ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ. ಇದರಿಂದ ಭಯಭೀತರಾದ ಮುಗ್ಧ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ಕೇಂದ್ರದ ಮೇಲೆ ಗೂಬೆ ಕೂರಿಸಲು ಕಾಯುತ್ತಿದ್ದ ವಿರೋಧ ಪಕ್ಷಗಳು ಈ ಸಂದರ್ಭ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಇಂತಹ ಅನೇಕ ವಿರೋಧಗಳ ಸಾಲಿಗೆ ಈಗ ಚಿತ್ರದುರ್ಗ ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿ ಮನೆ ಮನೆಗಳ ಮುಂದೆ ರಾರಾಜಿಸುತ್ತಿರುವ ಕರಪತ್ರಗಳು ಹೊಸ ಸೇರ್ಪಡೆ ಎನ್ನಬಹುದಾಗಿದೆ. 

ನಗರದ ಇಮ್ಮತ್‌ನಗರ, ರಾಮ್‌ದಾಸ್ ಕಾಂಪೌಂಡ್, ಗೋಪಾಲಪುರ ರಸ್ತೆ, ಆಜಾದ್‌ನಗರ, ಜೆ.ಜೆ.ಹಟ್ಟಿ ಸೇರಿದಂತೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಇರುವ ಪ್ರದೇಶಗಳಲ್ಲಿ ಮನೆಗಳ ಮುಂದೆ ಈ ಕರಪತ್ರಗಳನ್ನು ಅಂಟಿಸಲಾಗಿದೆ. ಇದರಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯಿದೆಗಳ ವಿರೋಧಿಸುವ ಕುರಿತು ಪ್ರಕಟಿಸಲಾಗಿದೆ.
 
ಈ ಕರಪತ್ರಗಳನ್ನು ಅಂಟಿಸಿರುವ ಕುರಿತು ಸ್ವತಃ ಆ ಮನೆಗಳ ನಿವಾಸಿಗಳಿಗೇ ತಿಳಿದಿಲ್ಲ. ರಾತ್ರೋ ರಾತ್ರಿ ಈ ಕರಪತ್ರಗಳನ್ನು ಅಂಟಿಸಲಾಗಿದೆ. ಶುಕ್ರವಾರ ಯಾವುದೇ ಮನೆಗಳ ಮುಂದೆ ಯಾವುದೇ ರೀತಿಯ ಕರಪತ್ರಗಳು ಇರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಪ್ರತಿ ಮನೆ ಮನೆಗಳ ಮುಂಬಾಗದಲ್ಲಿ, ಕಾಂಪೌಂಡ್ ಗೋಡೆಗಳ ಮೇಲೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯಿದೆಗಳ ವಿರೋಧಿ ಕರಪತ್ರಗಳು ರಾರಾಜಿಸುತ್ತಿವೆ. ಇವುಗಳನ್ನು ಕಂಡು ಸ್ವತಃ ಆ ಮನೆಗಳ ನಿವಾಸಿಗಳೇ ಬೇಸ್ತು ಬಿದ್ದಿದ್ದಾರೆ. 

ಮುಸ್ಲಿಂ ಸಂಘಟನೆಗಳ ಪ್ರತಿಭಟನೆ: ಮಂಗಳೂರಲ್ಲಿ ಹೈ ಅಲರ್ಟ್..!...

ಪೌರತ್ವ ತಿದ್ದುಪಡಿ ಕಾಯಿದೆ ಉದ್ದೇಶ ಪೌರತ್ವ ನೀಡುವುದೇ ವಿನಃ ಪೌರತ್ವ ಕಿತ್ತುಕೊಳ್ಳುವುದಲ್ಲ. ಈ ಕುರಿತು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಈ ಕುರಿತು ಸರ್ಕಾರದ ವತಿಯಿಂದ ಕರಪತ್ರಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ. ಇದರಲ್ಲಿ ಪೌರತ್ವ ನೀಡುವ ಕುರಿತು ವಿಷಯ ತಿಳಿಸಲಾಗಿದೆ. 

ಆದರೆ ಯಾವ ಸಮುದಾಯದವರ ಪೌರತ್ವ ರದ್ದು ಮಾಡುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಆದಾಗ್ಯೂ ಕೆಲವರು ಮುಗ್ಧ ಜನರನ್ನು ನಿರಂತರವಾಗಿ ದಿಕ್ಕು ತಪ್ಪಿಸುತ್ತಿದ್ದಾರೆ. ಇದರಿಂದ ಜನರು ಅನಗತ್ಯ ಗೊಂದಲ ಕ್ಕೊಳಗಾಗಿದ್ದಾರೆ. 

ಇದಕ್ಕೆ ಪೂರಕವೆಂಬಂತೆ ಯಾವುದೋ ಕಾಣದ ಕೈಗಳು ಮನೆಗಳ ಮುಂಭಾಗದ ಗೋಡೆಗಳ ಮೇಲೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯಿದೆಗಳ ವಿರೋಧಿ ಕರಪತ್ರಗಳನ್ನು ಅಂಟಿಸಿವೆ. ಇದರಲ್ಲಿ ನಾವು ಭಾರತೀಯರು, ನಮ್ಮ ಭಾರತ ದೇಶದ ಸಂವಿಧಾನವನ್ನು ಗೌರವಿಸುತ್ತೇವೆ. ಅದಕ್ಕಾಗಿ ಸಂವಿಧಾನ ವಿರೋಧಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯಿದೆಗಳನ್ನು ತಿರಸ್ಕರಿಸುತ್ತೇವೆ. ದಯವಿಟ್ಟು ಈ ಬಗ್ಗೆ ಯಾರೂ ನಮ್ಮನ್ನು ವಿಚಾರಿಸಬೇಡಿ ಎಂದು ಮುದ್ರಿಸಲಾಗಿದೆ. ಇಂತಹ ಕರಪತ್ರಗಳು ಮನೆಗಳು, ಅಂಗಡಿ ಮುಂಗಟ್ಟುಗಳು ಸೇರಿದಂತೆ ವಿವಿಧೆಡೆಗಳಲ್ಲಿ ಕಂಡುಬರುತ್ತಿವೆ. 

CAA ವಿರೋಧಿಸಿ ಸುಪ್ರೀಂ ಕದ ತಟ್ಟಿದ ಕೇರಳ: ಕೇಂದ್ರಕ್ಕೆ ಸೆಡ್ಡು ಹೊಡೆದ ಮೊದಲ ರಾಜ್ಯ!..

 ಕೆಲವರು ಇದು ಸಂವಿಧಾನ ವಿರೋಧಿ ಕಾಯಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇದು ಧಾರ್ಮಿಕ ತಾರತಮ್ಯ ಮಾಡುತ್ತಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಮುಸ್ಲೀಮರನ್ನು ದೇಶದಿಂದ ಹೊರಹಾಕುವ ಕಾಯಿದೆ ಎಂದು ಬೀದಿ ಬೀದಿಗಳಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಕಳೆದ ಅನೇಕ ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೆಲವರು ತಮ್ಮದೇ ಆದ ಶೈಲಿಯಲ್ಲಿ ಪೌರತ್ವ ಕಾಯಿದೆ ಕುರಿತು ವ್ಯಾಖ್ಯಾನ ನೀಡುತ್ತಿದ್ದಾರೆ. ಪೌರತ್ವ ಕೊಡುವುದಾದಲ್ಲಿ ಪ್ರಪಂಚದ ಎಲ್ಲಾ ದೇಶಗಳಲ್ಲಿನ ನಿರಾಶ್ರಿತರನ್ನು ಭಾರತಕ್ಕೆ ಕರೆತಂದು ಪೌರತ್ವ ನೀಡಲಿ ಎಂಬ ಹೃದಯ ವೈಶಾಲ್ಯತೆ ಮೆರೆಯುತ್ತಿದ್ದಾರೆ! 

ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ನೀಡುತ್ತಿರುವುದನ್ನು ಕಂಡ ಮುಸ್ಲೀಮರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ನಗರದ ವಿವಿಧೆಡೆಗಳಲ್ಲಿ ಮನೆಗಳ ಮುಂದೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯಿದೆಗಳ ವಿರೋಧಿ ಕರಪತ್ರಗಳನ್ನು ಅಂಟಿ ಸಿರುವುದು ಕಂಡುಬಂದಿದೆ. ಮನೆ ನಿವಾಸಿಗಳಿಗೆ ತಿಳಿಯದಂತೆ ಯಾರು ಈ ಕರಪತ್ರಗಳನ್ನು ಅಂಟಿಸಿದರು. ಕರಪತ್ರಗಳನ್ನು ಅಂಟಿಸಲು ಯಾರು ಅನುಮತಿ ನೀಡಿದ್ದರು ಎಂಬ ಇತ್ಯಾದಿ ಪ್ರಶ್ನೆಗಳು ಸಾಗರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

click me!