ಹುಟ್ಟೂರ ಅಭಿವೃದ್ಧಿಗೆ ₹25 ಕೋಟಿ ಕೊಡಿಸಿ, ಕಾಮಗಾರಿ ಮುಗಿಯುವ ಮುನ್ನವೇ ಕಣ್ಮುಚ್ಚಿದ ಎಸ್.ಎಲ್. ಭೈರಪ್ಪ!

Published : Sep 24, 2025, 06:28 PM IST
S L Bhyrappa village SanteShivara

ಸಾರಾಂಶ

ತಾನು ಹುಟ್ಟಿ ಬೆಳೆದ ಊರನ್ನು ಅಭಿವೃದ್ಧಿ ಮಾಡಬೇಕು ಎಂದು ಪಣತೊಟ್ಟು ಸರ್ಕಾರದ ಬಳಿ ನೇರವಾಗಿ ತೆರಳಿ ನಮ್ಮೂರಿನ ಅಭಿವೃದ್ಧಿಗೆ ಹಣ ಕೊಡಿ ಎಂದು ಎಸ್.ಎಲ್. ಭೈರಪ್ಪ ಕೇಳಿದ್ದರು. ತಮ್ಮೂರಿನ ಅಭಿವೃದ್ಧಿಗೆ ₹25 ಕೋಟಿ ಅನುದಾನ ತಂದು, ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುವ ಮೊಲದೇ ಭೈರಪ್ಪ ಕಾಲವಾಗಿದ್ದಾರೆ.

ಹಾಸನ (ಸೆ.24): ಸರಸ್ವತಿ ಸಮ್ಮಾನ್ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಅವರ ಹುಟ್ಟೂರಾದ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಆಳವಾದ ದುಃಖ ಮತ್ತು ನೀರವ ಮೌನ ಆವರಿಸಿದೆ. ಇಡೀ ಗ್ರಾಮವು ತಮ್ಮ ಹೆಮ್ಮೆಯ ಪುತ್ರನ ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದೆ.

ಭೈರಪ್ಪ ಅವರು ಕೇವಲ ಸಾಹಿತಿಯಾಗಿ ಮಾತ್ರವಲ್ಲದೆ, ತಮ್ಮ ಗ್ರಾಮದ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡಿದ್ದರು. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಸಂತೇಶಿವರ ಅಭಿವೃದ್ಧಿಗಾಗಿ 25 ಕೋಟಿ ರೂ. ಹಣ ಬಿಡುಗಡೆಯಾಗುವಂತೆ ಶ್ರಮಿಸಿದ್ದರು. ಈ ಅನುದಾನದಲ್ಲಿ, ಸಂತೇಶಿವರ ಕೆರೆಯಿಂದ ಸುತ್ತಮುತ್ತಲ 20 ಕೆರೆಗಳಿಗೆ ನೀರು ತುಂಬಿಸುವ 20 ಕೋಟಿ ರೂ. ಯೋಜನೆಯು ಈಗಾಗಲೇ ಪೂರ್ಣಗೊಂಡಿದೆ. ಅಲ್ಲದೆ, 5 ಕೋಟಿ ರೂ. ವೆಚ್ಚದಲ್ಲಿ 'ಎಸ್.ಎಲ್. ಭೈರಪ್ಪ ಕಲೆ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ' ನಿರ್ಮಾಣ ಹಂತದಲ್ಲಿದೆ.

ಬಾಲ್ಯದ ದಿನಗಳ ಮೆಲುಕು:

ಎಸ್.ಎಲ್. ಭೈರಪ್ಪ ಅವರು ಮಾರ್ಚ್ 9, 2025ರಂದು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ್ದರು. ಆ ಸಂದರ್ಭದಲ್ಲಿ ಅವರು ಸಂತೇಶಿವರ ಕೆರೆಯ ದಡದಲ್ಲಿ ಕುಳಿತು ತಮ್ಮ ಬಡತನದ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದರು. ಪ್ಲೇಗ್ ರೋಗದಿಂದ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಭೈರಪ್ಪ, ತಮ್ಮ ಆರಂಭಿಕ ಶಿಕ್ಷಣವನ್ನು ಸಂತೇಶಿವರ, ಬಾಗೂರು, ಮತ್ತು ಚನ್ನರಾಯಪಟ್ಟಣದಲ್ಲಿ ಪೂರೈಸಿ ನಂತರ ಮೈಸೂರಿಗೆ ತೆರಳಿದ್ದರು. ಬಡತನದಲ್ಲೇ ಬೆಳೆದರೂ, ಅವರ ಸಾಹಿತ್ಯಿಕ ಸಾಧನೆ ಅಮೋಘ.

ಸಕಲೇಶಪುರ ಶಾಸಕರ ಸಂತಾಪ

ಭೈರಪ್ಪ ಅವರ ನಿಧನಕ್ಕೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಸಂತಾಪ ವ್ಯಕ್ತಪಡಿಸಿದ್ದಾರೆ. "ಇದು ಹಾಸನ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯ ಮತ್ತು ದೇಶಕ್ಕೆ ತುಂಬಲಾರದ ನಷ್ಟ. ಈ ನಾಡು ಏನು ಕೊಟ್ಟಿದೆ, ಮರಳಿ ಅದನ್ನೇ ಕೊಡಬೇಕು ಎಂಬ ತತ್ವದಲ್ಲಿ ಅವರು ಜೀವನ ನಡೆಸುತ್ತಿದ್ದರು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ' ಎಂದು ಪ್ರಾರ್ಥಿಸಿದ್ದಾರೆ. ಇನ್ನು ಸಂತೇಶಿವರ ಗ್ರಾಮಸ್ಥರು ಭೈರಪ್ಪ ಅವರ ಭಾವಚಿತ್ರಕ್ಕೆ ಹಾರ ಹಾಕಿ ನಮನ ಸಲ್ಲಿಸಿದ್ದು, ತಮ್ಮ ಗ್ರಾಮವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಚೇತನವನ್ನು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಭೈರಪ್ಪ ಅವರಂತಹವರು ಕನ್ನಡ ನೆಲದಲ್ಲೇ ಮತ್ತೆ ಹುಟ್ಟಬೇಕು: ಸಿ.ಟಿ.ರವಿ

ಹಿರಿಯ ಸಾಹಿತಿ, ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಿ.ಟಿ. ರವಿ, 'ಭೈರಪ್ಪ ಅವರಂತಹವರ ಪುನರ್ಜನ್ಮ ಆಗಬೇಕು, ಅವರು ಕನ್ನಡದ ಮಣ್ಣಲ್ಲೇ ಮತ್ತೆ ಹುಟ್ಟಬೇಕು' ಎಂದು ಹೇಳಿದ್ದಾರೆ. ಭೈರಪ್ಪ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಬರವಣಿಗೆಯಲ್ಲಿ ಅವರು ಎಂದೆಂದಿಗೂ ಜೀವಂತ. ತಮ್ಮ ಕಾದಂಬರಿಗಳ ಮೂಲಕ ಜಾತಿ ವ್ಯವಸ್ಥೆ ಮತ್ತು ಸಮಾಜದ ವಾಸ್ತವಗಳನ್ನು ವಿಮರ್ಶಾತ್ಮಕವಾಗಿ ಚಿತ್ರಿಸಿದ್ದರು. 'ದಾಟು' ಕಾದಂಬರಿಯೇ ಇದಕ್ಕೆ ಉತ್ತಮ ನಿದರ್ಶನ. ರಾಷ್ಟ್ರೀಯ ಹಿತಾಸಕ್ತಿಗಳ ಪರವಾಗಿ ದನಿ ಎತ್ತುತ್ತಿದ್ದ ಭೈರಪ್ಪ, ತಮ್ಮ ಬರಹಗಳ ಮೂಲಕ ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಅವರ ಬರವಣಿಗೆಯ ಕಾರಣದಿಂದಲೇ ಅವರು ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದು ಸಿ.ಟಿ. ರವಿ ನುಡಿದರು.

ಬೊಮ್ಮಾಯಿ ಸರ್ಕಾರದಿಂದ ಅಭಿವೃದ್ಧಿ:

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಭೈರಪ್ಪ ಅವರು ತಮ್ಮ ಊರಾದ ಸಂತೇಶಿವರದ ಕೆರೆ ತುಂಬಿಸುವ ಯೋಜನೆಗಾಗಿ ಮನವಿ ಮಾಡಿದ್ದರು. 'ಭೈರಪ್ಪ ಅವರ ಮನವಿಯಂತೆ ಯೋಜನೆ ಜಾರಿಯಾಯಿತು. ಅದರ ಉದ್ಘಾಟನೆಗೆ ಸ್ವತಃ ಬೊಮ್ಮಾಯಿ ಅವರೇ ಆಗಮಿಸಿದ್ದರು. 'ದೇವರು ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ' ಎಂದು ಪ್ರಾರ್ಥಿಸಿ, ಭೈರಪ್ಪ ಅವರ ವ್ಯಕ್ತಿತ್ವಕ್ಕೆ ಹಾಗೂ ಸಾಹಿತ್ಯಿಕ ಕೊಡುಗೆಗೆ ಗೌರವ ಸಿ.ಟಿ.ರವಿ ನಮನ ಸಲ್ಲಿಸಿದರು.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ