
ತುಮಕೂರು (ಸೆ.24): ನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಜ್ವರದಿಂದ ಬಳಲುತ್ತಿದ್ದ ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಳ್ಳಿ ಗ್ರಾಮದ ನಿವಾಸಿ ಮಹಮ್ಮದ್ ರಫಿ (20) ಎಂದು ಗುರುತಿಸಲಾಗಿದೆ.
ಮಹಮ್ಮದ್ ರಫಿ ಶಿರಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದನು. ಕಳೆದ ಒಂದು ವಾರದಿಂದ ಆತ ತೀವ್ರ ಜ್ವರದಿಂದ ಬಳಲುತ್ತಿದ್ದ. ರಜೆ ತೆಗೆದುಕೊಂಡು ಊರಿಗೆ ಹೋಗಿದ್ದ ರಫಿ, ನಿನ್ನೆಯಷ್ಟೇ ಹಾಸ್ಟೆಲ್‌ಗೆ ಹಿಂದಿರುಗಿದ್ದ. ಇಂದು ಬೆಳಗ್ಗೆ ಶೌಚಾಲಯಕ್ಕೆ ಹೋದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆ ಹಾಸ್ಟೆಲ್‌ನ ಇತರ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಿರಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಶಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಸುದ್ದಿ ತಿಳಿದ ಕುಟುಂಬಸ್ಥರು ಆಸ್ಪತ್ರೆಯ ಬಳಿ ಬಂದು ಕಣ್ಣೀರು ಹಾಕಿದ್ದು, ಪರಿಸರ ಭಾವುಕವಾಗಿತ್ತು. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಈ ದುರ್ಘಟನೆಯ ವಿಷಯ ತಿಳಿದು, ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರ್ಕಾರ ಹಾಗೂ ತಮ್ಮ ವತಿಯಿಂದ ಸೂಕ್ತ ಪರಿಹಾರ ನೀಡುವ ಭರವಸೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಹಾಸ್ಟೆಲ್ ಆಡಳಿತದ ಬಗ್ಗೆಯೂ ಹಲವಾರು ಪ್ರಶ್ನೆಗಳು ಎದ್ದಿದ್ದು, ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ.