ಬಳ್ಳಾರಿಯ ರಾಮನಗರದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು | 50 ಎಕರೆ ಪ್ರದೇಶದ ಬಾಳೆ, ಬತ್ತ ಜಲಾವೃತ | ಬೆಳೆ ಪರಿಹಾರ ನೀಡಲು ಒತ್ತಾಯ
ಬಳ್ಳಾರಿ (ಆ. 22): ಸಮೀಪದ ರಾಮಸಾಗರದ ಬಳಿಯ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ ತಡೆಗೋಡೆ ಮಂಗಳವಾರ ಒಡೆದು ಭಾರಿ ಪ್ರಮಾಣದ ನೀರು ಹೊಲ, ಗದ್ದೆ, ರಸ್ತೆಗೆ ನುಗ್ಗಿದೆ.
ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬರುತ್ತಿದೆ. ಹೀಗಾಗಿ ಜಲಾಶಯದಿಂದ ಬಲದಂಡೆ ಕೆಳಮಟ್ಟದ ಕಾಲುವೆಗೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಬಿಡಲಾಗಿದೆ. ನೀರಿನ ರಭಸಕ್ಕೆ 100 ಮೀಟರ್‌ನಷ್ಟು ತಡೆಗೋಡೆ ಒಡೆದಿದೆ. ಇದರಿಂದ ಸುಮಾರು ೫೦ ಎಕರೆ ಪ್ರದೇಶದ ಬಾಳೆ, ಬತ್ತ ಗದ್ದೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕಾಲುವೆಯಿಂದ ಹರಿದ ನೀರು ಬತ್ತದ ಗದ್ದೆಗಳಿಗೆ ನುಗ್ಗಿ
ಮುಂದೆ ವಿಜಯನಗರ ಕಾಲುವೆಗೆ ಸೇರಿದೆ.
ಕೆಲ ದಿನಗಳ ಹಿಂದೆ ಕಾಲುವೆಗೆ ನೀರು ಹರಿಸಿದ್ದರಿಂದ ನಾಟಿ ಮಾಡಿದ್ದರು. ಆದರೆ, ಇದೀಗ ಕಾಲುವೆ ನೀರು ನುಗ್ಗಿದ ಪರಿಣಾಮ ನಾಟಿ ಹಾಳಾಗಿದೆ. ಮೊದಲೇ ಸಾಲ ಮಾಡಿ ನಾಟಿ ಮಾಡಿದ್ದೇವು. ಇದೀಗ ಅದು ಸಹ ನೀರಿನಲ್ಲಿ ಜಲಾವೃತವಾಗಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಿಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಸಂಚಾರಕ್ಕೆ ತೊಂದರೆ:
ಕಾಲುವೆ ತಡೆಗೋಡೆ ಒಡೆದು ರಸ್ತೆಗೆ ನೀರು ನುಗ್ಗಿದ ಪರಿಣಾಮ ಕಂಪ್ಲಿ-ಹೊಸಪೇಟೆ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಅಡಚಣೆಯಾಯಿತು. ಮೊಣಕಾಲ ವರೆಗೂ ರಸ್ತೆಯಲ್ಲಿ ನೀರು ಹರಿದು ಬೈಕ್ ಸವಾರರಿಗೆ ತೊಂದರೆಯಾದರೆ ದೊಡ್ಡ ವಾಹನಗಳು ಹರಿಯುವ ನೀರಿನಲ್ಲಿಯೇ ಸಂಚರಿಸಿದವು. ಇನ್ನೂ ಸ್ಥಳೀಯರು ನೀರಿನಲ್ಲಿ ಮಿಂದೆದ್ದ ಸಂತಸ ವ್ಯಕ್ತಪಡಿಸಿದರು.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೊಸಪೇಟೆ ತಾಲೂಕು ಘಟಕ ಅಧ್ಯಕ್ಷ ಬುಕ್ಕಸಾಗರ ಎಲ್.ಎಸ್. ರುದ್ರಪ್ಪ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ ಅಕ್ವಡೆಕ್ಟ್ 8/04 ಕಿಮೀನಲ್ಲಿ ಬಲಗಡೆ ಭಾಗದ ಸೈಡ್ ವಾಲ್ ಮೇಲೆ ಕಟ್ಟಿದ ತಡೆಗೋಡೆ ಒಡೆದಿದೆ. ಇತ್ತೀಚಿನ ದಿನಗಳಲ್ಲಿ ಕಾಲುವೆ ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ಬಿಡುತ್ತಿರುವುದರಿಂದ ಕೆಲ ತಿಂಗಳ ಹಿಂದೇ ತಡೆಗೋಡೆ
ನಿರ್ಮಿಸಲಾಗಿತ್ತು. ಆದರೆ, ಕಾಲುವೆ ಅಲೆಗಳ ಹೊಡೆದ ಹೆಚ್ಚಿದ ಪರಿಣಾಮ ೧೦೦ ಮೀಟರ್‌ನಷ್ಟು ತಡೆಗೋಡೆ ಒಡೆದಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.