ರಾಜ್ಯ ರಾಜಕೀಯದಲ್ಲಿ ಏರುಪೇರು ಕಾದು ನೋಡಿ; ಬಿಎಸ್ ವೈ

By Web Desk  |  First Published Aug 12, 2018, 10:43 AM IST

- ಬಿಜೆಪಿ ಅಧಿಕಾರ ಸ್ಥಾಪನೆಯ ಸುಳಿವು ನೀಡಿದ ಬಿಎಸ್‌ವೈ  

- ಮೈತ್ರಿ ಸರ್ಕಾರದ ಪ್ರತಿಹೆಜ್ಜೆಯ ಮೇಲೆ ಕಣ್ಣಿಡಲು ಸಲಹೆ 

- ರಾಜ್ಯ ರಾಜಕೀಯದ ಏರುಪೇರು ಕಾದು ನೋಡಿ: ಬಿಎಸ್ ವೈ 


ಬೆಂಗಳೂರು (ಆ. 12): ‘ರಾಜ್ಯ ರಾಜಕೀಯದಲ್ಲಿ ಏನಾದರೂ ಏರುಪೇರಾಗಬಹುದು ಕಾದು ನೋಡಿ’ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಕಮಲ ಪಕ್ಷ ಅಧಿಕಾರ ಸ್ಥಾಪನೆಯ ಸುಳಿವು ನೀಡಿದ್ದಾರೆ.

ರಾಜ್ಯದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ನೇತೃತ್ವದ ರಾಜ್ಯ ಸರ್ಕಾರ ವೈಫಲ್ಯಗಳ ವಿರುದ್ಧ ಚಳವಳಿ ರೂಪಿಸುವ ಮೂಲಕ ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ. ಮುಖ್ಯ
ಮಂತ್ರಿಯೇ ಅಧಿಕಾರ ಬಿಟ್ಟು ತೊಗಲುವಂತೆ ಸರ್ಕಾರದ ಪ್ರತಿಹೆಜ್ಜೆಯ ಮೇಲೆ ಕಣ್ಣಿಟ್ಟು ಕೆಲಸ ಮಾಡಿ. ಇಲ್ಲದಿದ್ದರೆ ರಾಜ್ಯದ ಜನತೆಗೆ ನಾವು ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

Tap to resize

Latest Videos

ಜೆಡಿಎಸ್ ಬರೀ 37 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಬಿಜೆಪಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವಂತಾಗಿದೆ. ಚುನಾವಣೆ ಮುನ್ನದ 3 ತಿಂಗಳು ಹಾಗೂ ಸರ್ಕಾರ ರಚನೆಯಾದ 3 ತಿಂಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳಾಗಿಲ್ಲ. ಈ ಅನಿಷ್ಟ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಜನರು ಬೇಸರಗೊಂಡಿದ್ದಾರೆ. ಅಷ್ಟರ ಮಟ್ಟಿಗೆ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಜನವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವದ ನಂ. 1 ಆಗಲಿರುವ ಭಾರತ:

ಇನ್ನು 10 ವರ್ಷಗಳ ಕಾಲ ನರೇಂದ್ರ ಮೋದಿ ಈ ದೇಶದ ಪ್ರಧಾನಮಂತ್ರಿಯಾಗಿ ಮುಂದುವರಿದರೆ ಭಾರತ ಇಡೀ ಪ್ರಪಂಚದಲ್ಲಿ ಆರ್ಥಿಕವಾಗಿ ನಂ. 1 ದೇಶವಾಗಿ ಬಲಗೊಳ್ಳುತ್ತದೆ. ದಣಿವಿಲ್ಲದೆ ದೇಶಕ್ಕಾಗಿ ದುಡಿಯುತ್ತಿರುವ ಹಾಗೂ ಎಲ್ಲ ವರ್ಗದ ಹಿತ ಕಾಯುವ ಆಶಯಗಳೊಂದಿಗೆ ಕೆಲಸ ಮಾಡುವ ನರೇಂದ್ರ ಮೋದಿ ಅವರು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಏನೆಲ್ಲಾ ಪ್ರಯತ್ನಿಸಿತು.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ, ಮುಖಭಂಗ ಅನುಭವಿಸಿತು. ನರೇಂದ್ರ ಮೋದಿ ಅವರನ್ನು ಕೆಳಗಿಳಿಸಿ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡಲು ಕಾಂಗ್ರೆಸಿಗರು ಹಗಲು ಕನಸು ಕಾಣುತ್ತಿದ್ದಾರೆ. ಅದೆಂದಿಗೂ
ಸಾಧ್ಯವಾಗುವುದಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 23 ರಿಂದ 24 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ನರೇಂದ್ರ ಮೋದಿ ಅವರ ಶಕ್ತಿಯನ್ನು ಮತ್ತಷ್ಟು ಬಲಗೊಳಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಬೂತ್‌ಮಟ್ಟದಲ್ಲಿ ಕೆಲಸ ಮಾಡಿ

ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಗ್ರಾಮದ ಹಿರಿಯರು, ಮುಖಂಡರನ್ನು ಪಕ್ಷಕ್ಕೆ ಕರೆತರಬೇಕು. ಕೇಂದ್ರ ಸರ್ಕಾರದ ಅನೇಕ ಮಹತ್ವದ ಯೋಜನೆಗಳು ಹಾಗೂ ನರೇಂದ್ರ ಮೋದಿ ಅವರು ದೇಶಕ್ಕಾಗಿ ಶ್ರಮಿಸುವ ಪರಿ ಕುರಿತು ಜನರಿಗೆ ತಿಳಿಸಿ ಹೇಳಬೇಕು. ಪಕ್ಷದ ಯುವಮೋರ್ಚಾ, ಪರಿಶಿಷ್ಟ ಜಾತಿ, ಹಿಂದುಳಿದ, ಪರಿಶಿಷ್ಟ ಪಂಗಡ, ಮಹಿಳಾ ಮೋರ್ಚಾಗಳು ಮತ್ತಷ್ಟೂ ಸಕ್ರಿಯಗೊಳ್ಳಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಬಿಎಸ್‌ವೈ ಬಸವಣ್ಣ ಇದ್ದಂತೆ:

12 ನೇ ಶತಮಾನದಲ್ಲಿ  ಬಸವಣ್ಣನವರಂತೆ 21 ನೇ ಶತಮಾನದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬೆಳೆಯಬೇಕು. ನಾವೆಲ್ಲರೂ ಸೇರಿ ಅವರಿಗೆ ರಾಜಕೀಯ ಶಕ್ತಿ ತುಂಬುತ್ತೇವೆ ಎಂದು ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಹೇಳಿ
ದರು. ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ರೈತರು, ದೀನ ದಲಿತರ ಉದ್ಧಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರಿಗಾಗಿಯೇ ಬದುಕಿನುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಂತಹ ವ್ಯಕ್ತಿಗಳು ರಾಜಕೀಯವಾಗಿ ಬೆಳೆದರೆ ಇಡೀ ನಾಡಿಗೆ ಒಳಿತಾಗುತ್ತದೆ ಎಂದರು.

ನನಗೆ ಯಾವುದೇ ರಾಜಕೀಯ ಸ್ವಾರ್ಥವಿಲ್ಲ. ನನ್ನ ಕುಟುಂಬದವರು ರಾಜಕೀಯಕ್ಕೆ ಬರಬೇಕು ಎಂಬುದಿಲ್ಲ. ಈ ಕಾರಣಕ್ಕಾಗಿಯೇ ನಾನು ಕುಟುಂಬಸ್ಥರನ್ನು ದೂರ ಇಟ್ಟಿದ್ದೇನೆ. ಪಕ್ಷವನ್ನು ಬಲಪಡಿಸುವ ಶಕ್ತಿಯುಳ್ಳವರು ಯಾರೇ ಬಂದರೂ ನಾನು ಹಿಂದೆ ಸರಿಯಲು ಸಿದ್ಧನಿದ್ದೇನೆ. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಬಿಜೆಪಿ ಸ್ಥಾನಗಳನ್ನು ಗೆಲ್ಲಬೇಕು. ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾಗಿ ಮುಂದುವರಿಯಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದರು. 

click me!