ಮುತ್ತಿಡಲು ಹೋದ ಸಿಎಂಗೆ ಹಾಯಲು ಬಂದ ಗೋವು: ಅಪಾಯದಿಂದ ಪಾರಾದ ಬೊಮ್ಮಾಯಿ..!

By Girish Goudar  |  First Published Apr 27, 2022, 9:07 AM IST

*  ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ನಡೆದ ಘಟನೆ
*  ಗೋವಿಗೆ ಪೂಜೆ ಸಲ್ಲಿಸಿ ಮುತ್ತಿಡಲು ಹೋದ ಸಿಎಂ ಬೊಮ್ಮಾಯಿ 
*  ಜಮಾವಣೆಗೊಂಡಿದ್ದ ಜನರನ್ನು ನೋಡಿ ಬೆದರಿ ಈ ರೀತಿ ಮಾಡಿದ ಗೋವು 
 


ತಾಳಿಕೋಟೆ(ಏ.27):  ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಗೋವಿಗೆ ಮುತ್ತಿಡಲು ಹೋದಾಗ ಅವರ ಮೇಲೆ ಏರಗಿ ಬಂದ ಘಟನೆ ವಿಜಯಪುರ(Vijayapura) ಜಿಲ್ಲೆಯ ತಾಳಿಕೋಟೆ(Talikoti) ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೊದಲು ಎತ್ತುಗಳಿಗೆ(Ox) ಮುತ್ತಿಟ್ಟು ಪೂಜೆ ಮಾಡಿ ನಂತರ ಗೋವಿನತ್ತ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದರು. ಈ ವೇಳೆ ಗೋವಿಗೆ ಪೂಜೆ ಸಲ್ಲಿಸಿ ಮುತ್ತಿಡಲು ಹೋದ ಸಿಎಂ ಬೊಮ್ಮಾಯಿ ಅವರ ಮೇಲೆ ಏರಗಿಬಂದ ಗೋವು ಜಿಗಿದಾಡಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಅಕ್ಕಪಕ್ಕದ ರೈತರು ಗೋವನ್ನು ಜಗ್ಗಿ ಹಿಡಿದರಲ್ಲದೇ ಸಿಎಂ ಬೊಮ್ಮಾಯಿ ಅವರಿಗೆ ಸ್ವಲ್ಪದರಲ್ಲಿಯೇ ಆಗುತ್ತಿದ್ದ ಅಪಾಯವನ್ನು ತಪ್ಪಿಸಿದರು.

Tap to resize

Latest Videos

ರೈತರ ಕನಸು ನನಸು ಮಾಡಿದ ಸಿಎಂ, ರೈತರಿಂದ ಬೊಮ್ಮಾಯಿಗೆ ಜೋಡೆತ್ತು ಗಿಫ್ಟ್

ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಜನರನ್ನು ನೋಡಿದ ಗೋವು ಬೆದರಿ ಈ ರೀತಿ ಮಾಡಿದೆ ಎಂಬ ಮಾತುಗಳು ಕೇಳಿ ಬಂದವು. ಘಟನಾ ನಂತರ ಸಿಎಂ ಬೊಮ್ಮಾಯಿ ಅವರನ್ನು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಅವರು ಕರೆದುಕೊಂಡರು ಹೋದರು. ಭಂಟನೂರ ಗ್ರಾಮದ ರೈತರು ಮುಖಂಡ ಸಂಗನಗೌಡ ಹೆಗರಡ್ಡಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೋ ದಾನವನ್ನು ಮಾಡಿದರು.

ಯುಕೆಪಿ 3ನೇ ಹಂತ ಅನುಷ್ಠಾನಕ್ಕೆ ಸರ್ಕಾರ ಕಟಿಬದ್ಧ

ಕೃಷ್ಣಾ ಮೇಲ್ದಂಡೆ ಯೋಜನೆಯ(Upper Krishna Project) 3ನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ- ಪೀರಾಪೂರ ಏತ ನೀರಾವರಿ ಯೋಜನೆಯ ಹಂತ-01 ಪೈಪ್‌ ವಿತರಣೆ ಜಾಲದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಸಂಬಂಧ ಕೋರ್ಟ್‌ನಲ್ಲಿ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ಇನ್ನು 2-3 ತಿಂಗಳಲ್ಲಿ ಈ ಸಂಬಂಧ ಆದೇಶ ಹೊರಬೀಳುವ ಸಾಧ್ಯತೆ ಇದೆ. ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆಗಳನ್ನು ಕೈಗೊಳ್ಳಲಾಗುವುದು. ಈ ಬಾರಿ ಬಜೆಟ್‌ನಲ್ಲಿ ಈ ಯೋಜನೆಗೆ 5,000 ಕೋಟಿ ತೆಗೆದಿಡಲಾಗಿದೆ. 3ನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಕಾನೂನಾತ್ಮಕ ಹೋರಾಟಕ್ಕೆ ಅಂತಿಮ ತೆರೆ ಬಿದ್ದರೆ 130 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಲು ಕೈಗೊಳ್ಳಬೇಕಾದ ಎಲ್ಲ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಆಲಮಟ್ಟಿಅಣೆಕಟ್ಟೆಎತ್ತರ 524.256 ಮೀಟರ್‌ಗೆ ಹೆಚ್ಚಿಸುವುದರಿಂದ ಮುಳುಗಡೆಯಾಗಲಿರುವ 20 ಹಳ್ಳಿಗಳ ಪುನರ್ವಸತಿ ಮತ್ತು ಪುನರ್‌ ನಿರ್ಮಾಣಕ್ಕೆ ಹಾಗೂ ಭೂಸ್ವಾಧೀನಕ್ಕೆ ಎಷ್ಟುಹಣದ ಅವಶ್ಯಕತೆ ಆಗುತ್ತದೆಯೋ ಅಷ್ಟೂಹಣವನ್ನು ರಾಜ್ಯ ಸರ್ಕಾರ ಒದಗಿಸಲು ಸಿದ್ಧವಿದೆ ಎಂದು ಹೇಳಿದರು.

ಯುಕೆಪಿ(UKP) ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ .55,000 ಕೋಟಿ ಅಗತ್ಯವಿದೆ. ಭಾರಿ ಮೊತ್ತದ ಹಣ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಮೂರನೇ ಹಂತದ ಯೋಜನೆ ಬೇಗನೆ ಪೂರ್ಣಗೊಂಡು ರೈತರ ಜಮೀನಿಗೆ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

ಈ ಹಿಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ(SM Krishna) ಅವರು ಯುಕೆಪಿ ಬಗ್ಗೆ ಹೇಳಿಕೆ ನೀಡಿ ನ್ಯಾಯಾಲಯದ ಕ್ಷಮೆ ಕೋರಿದ್ದರು. ಯುಕೆಪಿ ಬಗ್ಗೆ ಹೇಳಿಕೆ ನೀಡಬಾರದು. ನೀವು ಕೂಡ ನ್ಯಾಯಾಲಯದ ಕ್ಷಮೆ ಕೇಳುವ ಪ್ರಸಂಗ ಬರಬಹುದು ಎಂದು ಹೇಳಿದ್ದರು. ಆದರೆ ನನಗೆ ರಾಜ್ಯದ ಹಾಗೂ ರೈತರ ಹಿತ ಕಾಯುವುದು ಮುಖ್ಯ. ನಾನು ಕ್ಷಮೆ ಕೇಳುವವನಲ್ಲ. ಜೈಲಿಗೆ ಅಟ್ಟಿಗಲ್ಲಿಗೇರಿಸಿದರೂ ತಾವು ರೈತರ ಹಾಗೂ ರಾಜ್ಯದ ಹಿತಕ್ಕಾಗಿ ಎಲ್ಲದ್ದಕ್ಕೂ ಸಿದ್ಧ ಎಂದು ಹೇಳಿದ್ದೆ ಎಂದು ಸ್ಮರಿಸಿದರು.

ಟ್ರಬ್ಯೂನಲ್‌ ಆದೇಶ ಬರುವ ಮೊದಲೇ ತಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಅನುಮತಿ ಪಡೆಯದೇ ಮುಳವಾಡ, ಗುತ್ತಿ ಬಸವಣ್ಣ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಗಳ ಮೊದಲ ಹಂತಕ್ಕೆ ಅನುಮೋದನೆ ನೀಡಿ ಟೆಂಡರ್‌ ಕರೆದು ಅಡಿಗಲ್ಲು ಹಾಕಿದ್ದೆ. ಅದು ಇಂದು ಹೆಚ್ಚಿನ ಅನುಕೂಲವಾಗಿದೆ ಎಂದ ಅವರು, ರೈತರು ಯಾವುದೇ ಪಕ್ಷಗಳಿಗೆ ಸೇರಿಲ್ಲ. ಎಲ್ಲ ಪಕ್ಷಗಳು ರೈತರಿಗೆ ಸೇರಿವೆ. ನಮಗೆ ರೈತರು ಮುಖ್ಯ. ಅವರು ಯಾವ ಪಕ್ಷದಲ್ಲಿ ಇರುತ್ತಾರೆ ಎಂಬುವುದು ನನಗೆ ಮಹತ್ವ ಅಲ್ಲ ಎಂದು ಹೇಳಿದರು.

ಸೃಷ್ಟಿಕರ್ತ ಹಾಗೂ ಜನತಾ ಜನಾರ್ಧನನಿಗೆ ನಾನು ಹೆದರುತ್ತೇನೆ. ನಾನು ಆತ್ಮಸಾಕ್ಷಿಯಿಂದ ಜನರ ಸೇವೆ ಹಾಗೂ ನಾಡಿನ ಸಲುವಾಗಿ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಜನರು ಬಿಜೆಪಿಗೆ ಬರುವ ಚುನಾವಣೆಯಲ್ಲಿ ಮತ್ತೆ ಆಶೀರ್ವಾದ ಮಾಡಬೇಕು ಎಂದು ಸಿಎಂ ಮನವಿ ಮಾಡಿದರು.

Silicon City: ಬೆಂಗಳೂರನ್ನು ನಂ.1 ಸಿಲಿಕಾನ್‌ ಸಿಟಿ ಮಾಡಲು ಮೂಲ ಸೌಕರ್ಯ: ಸಿಎಂ

ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದಭÜರ್‍ದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಮತ್ತಿತರರು ಮಾತನಾಡಿದರು.

ಭಗೀರಥನಾಗುವ ಕನಸಿಲ್ಲ

ತಮಗೆ ಭಗೀರಥನಾಗುವ ಕನಸಿಲ್ಲ. ಪ್ರಚಾರವೂ ಬೇಕಿಲ್ಲ. ಆದರೆ, ರೈತರು ನಲುಗಬಾರದೆನ್ನುವುದು ತಮ್ಮ ಕಾಳಜಿಯಾಗಿದೆ. ಬರದ ನೆಲಕ್ಕೆ ಹಸಿರು ಸೀರೆ ಉಡಿಸಬೇಕೆಂಬುದು ತಮ್ಮ ಕನಸಾಗಿದೆ. ಈ ಕಾರಣ- ಕಾಳಜಿಯಿಂದಾಗಿ ಏತ ನೀರಾವರಿಯಂತಹ ನೀರಾವರಿ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
 

click me!