Bengaluru Rains: ಸಿಎಂ ಮುಂದೆ ಮಳೆ ಸಂತ್ರಸ್ತರ ಗೋಳಾಟ: ಜನರ ಆಕ್ರೋಶ

By Girish Goudar  |  First Published May 20, 2022, 4:54 AM IST

*   ಪ್ರತಿ ಮಳೆಗೂ ತುಂಬಿ ಹರಿಯುವ ರಾಜಕಾಲುವೆ
*  ಮನೆಗಳಿಗೆ ನೀರು ಹಾಳಾದ ರಸ್ತೆಗಳು
*  ಮನೆಯಲ್ಲಿಟ್ಟ ವಸ್ತುಗಳ ನಾಶ
 


ಬೆಂಗಳೂರು(ಮೇ.20):  ಮಳೆಯಿಂದ ಹಾನಿಗೊಳಗಾದ ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ಮತ್ತು ಪೂರ್ವ ವಲಯಗಳ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡು ಪಾಲಿಕೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಗೃಹಕಚೇರಿ ಕೃಷ್ಣಾದಿಂದ ನಗರ ಪ್ರದಕ್ಷಿಣೆ ಆರಂಭಿಸಿದ ಮುಖ್ಯಮಂತ್ರಿಗಳು ಬಿಬಿಎಂಪಿ ಪಶ್ಚಿಮ ವಲಯದ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ಜೆ.ಸಿ.ನಗರ ವಾರ್ಡ್‌ಗೆ ಭೇಟಿ ನೀಡಿ ಮಳೆ ಹಾನಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜೆ.ಸಿ.ನಗರದ ನಿವಾಸಿಗಳು ರಾಜಕಾಲುವೆ ಉಕ್ಕಿ ಹರಿದಿದ್ದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ಕೇವಲ ಒಂದೆರಡು ಗಂಟೆ ಸುರಿದ ಮಳೆಗೆ ರಾಜಕಾಲುವೆ ತುಂಬಿ ಮನೆಗಳಿಗೆ ನೀರು ಹರಿಯುತ್ತಿದೆ. ಇದರಿಂದ ರಸ್ತೆಗಳು ಹಾಳಾಗಿವೆ. ಮನೆಗಳಲ್ಲಿಟ್ಟವಸ್ತುಗಳು ಹಾನಿಗೊಳಗಾಗಿವೆ. ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

Bengaluru Rains: ಶತಮಾನದ ದಾಖಲೆ ಮಳೆಗೆ ಬೆಂಗ್ಳೂರಲ್ಲಿ ತತ್ತರ

ಅದೇ ರೀತಿ ಎಚ್‌ಬಿಆರ್‌ ಲೇಔಟ್‌ 5ನೇ ಬ್ಲಾಕ್‌ನಲ್ಲಿ ಪ್ರತಿ ವರ್ಷ ಮಳೆ ಸುರಿದಾಗಲೂ ರಾಜಕಾಲುವೆ ನೀರು ಮನೆಗಳಿಗೆ ನುಗ್ಗುತ್ತಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಿ, ಶಾಶ್ವತ ಪರಿಹಾರ ಒದಗಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಪ್ರತಿ ಬಾರಿ ನೀರು ನುಗ್ಗಿದಾಗಲೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬರುವುದಿಲ್ಲ ಎಂದು ಮಹಿಳೆಯರು ಕಣ್ಣೀರಿಟ್ಟು ಅಳಲು ತೋಡಿಕೊಂಡರು.

ಅಧಿಕಾರಿಗಳ ವಿರುದ್ಧ ಸಿಎಂ ಗರಂ

ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂಆದರು. ಕೂಡಲೇ ರಾಜಕಾಲುವೆಗಳ ಹೂಳು ತೆಗೆಸಿ ಮಳೆ ನೀರು ಹೊರ ಹರಿಯದಂತೆ ಕ್ರಮಕೈಗೊಳ್ಳಬೇಕು. ಪ್ರವಾಹಕ್ಕೆ ತುತ್ತಾದವರನ್ನು ಗುರುತಿಸಿ ತಲಾ .25 ಸಾವಿರ ಪರಿಹಾರ ನೀಡಬೇಕು. ಹಾನಿಗೊಳಗಾದವರಿಗೆ ಒಂದು ವಾರದ ವರೆಗೆ ಊಟ, ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಸೂಚಿಸಿದರು.

ಈ ವೇಳೆ ಮಹಾಲಕ್ಷ್ಮಿಪುರದ ಕುರುಬರಹಳ್ಳಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿ ಎರಡು ದಿನಗಳಾದರೂ ಮನೆಗಳಲ್ಲಿ ಕೊಳಚೆ ವಾಸನೆ ತುಂಬಿಕೊಂಡು ನಾರುತ್ತಿತ್ತು. ಕೆಲವು ವಸ್ತುಗಳು ನೀರಿನಿಂದ ಹಾನಿಗೊಳಗಾಗಿದ್ದು, ಮನೆಯಿಂದ ಹೊರ ಹಾಕಲಾಗಿದ್ದ ದೃಶ್ಯ ಕಂಡುಬಂತು.

Bengaluru Rains: ಬೆಂಗ್ಳೂರಲ್ಲಿ ಮುಂದುವರಿದ ಮಳೆ: ಧರೆಗುರುಳಿದ ಮರಗಳು..!

ಲಗ್ಗೆರೆಯ ರಾಜಕಾಲುವೆ ವೀಕ್ಷಣೆ ಮಾಡಿ, ನಾಗವಾರ ಮೆಟ್ರೋ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿದರು. ಮಳೆಯಿಂದಾಗಿ ಕಾಮಗಾರಿಯಲ್ಲಿ ಹಿನ್ನೆಡೆಯಾಗಿರುವ ಬಗ್ಗೆ ಮಾಜಿ ಸಚಿವ ಕೆ.ಜೆ.ಜಾಜ್‌ರ್‍ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮೆಟ್ರೋ ಕಾಮಗಾರಿ ಕುರಿತು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಯವರು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿ, ಸರ್ಕಾರದಿಂದ ಅಗತ್ಯ ನೆರವು ಕೊಡುವ ಭರವಸೆ ನೀಡಿದರು.

ಎಸ್‌ಟಿಪಿ ಘಟಕ ಉನ್ನತೀಕರಣ

ಹೆಬ್ಬಾಳದ ಎಸ್‌ಟಿಪಿ ಘಟಕಕ್ಕೆ(ಕೊಳಚೆ ಸಂಸ್ಕರಣಾ ಘಟಕ) ಭೇಟಿ ನೀಡಿದ ಮುಖ್ಯಮಂತ್ರಿಯವರಿಗೆ ಶಾಸಕ ಬೈರತಿ ಸುರೇಶ್‌ ಅವರು ಎಸ್‌ಟಿಪಿ ಘಟಕದ ಸಾಮರ್ಥ್ಯದ ಕುರಿತು ಮಾಹಿತಿ ನೀಡಿದರು. ಸುಮಾರು 100 ಎಂಎಲ್‌ಡಿ ಸಾಮರ್ಥ್ಯದ ಘಟಕ ಇದಾಗಿದ್ದು ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಹರಿಸಲಾಗುತ್ತಿದೆ. ಕೊಳಚೆ ನೀರು ಕೆರೆಗೆ ಸೇರದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಎಸ್‌ಟಿಪಿ ಘಟಕವನ್ನು 100ರಿಂದ 160 ಎಂಎಲ್‌ಡಿಗೆ ಹೆಚ್ಚಿಸುವಂತೆ ಸೂಚಿಸಿದರು. ಮಳೆ ನೀರು ಗಾಲುವೆಗಳು ಮತ್ತು ರಾಜಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಬೇಕು. ಶೀಘ್ರವೇ ಸಮರ್ಪಕವಾಗಿ ರಾಜಕಾಲುವೆಗಳನ್ನು ಪೂರ್ಣಗೊಳಿಸಿ, ಹೆಬ್ಬಾಳ ವ್ಯಾಲಿ, ಕೋರಮಂಗಲ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ಮೂಲಕ ಹರಿದು ಹೊರ ಹೋಗುವಂತೆ ಕ್ರಮಕೈಗೊಳ್ಳಬೇಕು. ಅದಕ್ಕಾಗಿ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದ್ದು, ಸದ್ಬಳಕೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
 

click me!