Bengaluru Rains: ಶತಮಾನದ ದಾಖಲೆ ಮಳೆಗೆ ಬೆಂಗ್ಳೂರಲ್ಲಿ ತತ್ತರ
* ಎರಡೇ ತಾಸಿನಲ್ಲಿ 11.46 ಸೆಂ.ಮೀ. ವರ್ಷಧಾರೆ: ಬೆಂಗಳೂರು ತತ್ತರ
* ಸಾವಿರಾರು ಮನೆಗಳಿಗೆ ನೀರು
* ದ್ವೀಪದಂತಾದ ಹಲವು ಬಡಾವಣೆಗಳು
ಬೆಂಗಳೂರು(ಮೇ.19): ಬೆಂಗಳೂರು ನಗರದ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮಳೆ’ ಎಂಬ ದಾಖಲೆ ಮೆರೆದ ಮಂಗಳವಾರ ತಡರಾತ್ರಿಯ ರೌದ್ರ ವರ್ಷಧಾರೆ ಇಬ್ಬರು ಕಾರ್ಮಿಕರನ್ನು ಬಲಿ ಪಡೆದಿದೆ. ನಗರದಲ್ಲಿ ಬುಧವಾರ ಸುರಿದದ್ದು 113 ವರ್ಷದ ಮೇ ತಿಂಗಳಲ್ಲೇ ಕಂಡು ಕೇಳರಿಯದ ಮಳೆ ಹಾಗೂ 1909ರ ನಂತರ ಮೇ ತಿಂಗಳಲ್ಲಿ ಸುರಿದ 2ನೇ ಅತ್ಯಧಿಕ ವರ್ಷಧಾರೆ.
ಕೇವಲ 2 ತಾಸಿನಲ್ಲಿ ಮಂಗಳವಾರ ರಾತ್ರಿ 11.46 ಸೆಂ.ಮೀ. ಮಳೆಯಾಗಿದೆ. ವರುಣನ ಈ ರುದ್ರನರ್ತನಕ್ಕೆ ಸಾವಿರಾರು ಮನೆಗಳಿಗೆ ನೀರು ನುಗ್ಗಿ ದಿನಸಿ, ನಿತ್ಯ ಬಳಕೆಯ ವಸ್ತುಗಳು ಹಾಳಾಗಿದೆ. ತಗ್ಗು ಪ್ರದೇಶದ ಹಲವಾರು ಪ್ರದೇಶಗಳು ಅಕ್ಷರಶಃ ದ್ವೀಪಗಳಾಗಿ ಮಾರ್ಪಟ್ಟರೆ, ನೂರಾರು ವಾಹನಗಳು ನೀರಿನಲ್ಲಿ ಮುಳುಗಿವೆ. ತೊಂದರೆಗೆ ಒಳಗಾದ ಜನರು ರಾತ್ರಿ ಇಡೀ ನೀರು ಹೊರ ಹಾಕಲು ಪರದಾಡಿದ್ದಾರೆ. ಅನೇಕರು ಬೇರೆ ಕಡೆ ಆಶ್ರಯಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಫಿನಾಡಿನಲ್ಲಿ ಮಳೆ ಅಬ್ಬರ: ಮಲೆನಾಡು ಮಾತ್ರವಲ್ಲ, ಜಿಲ್ಲೆಯ ಬಯಲು ಸೀಮೆಯಲ್ಲೂ ಮಳೆ
ಮಳೆಯ ಅಬ್ಬರಕ್ಕೆ ತತ್ತರಿಸಿದ್ದ ಪ್ರದೇಶಗಳಿಗೆ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರು, ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ ಐದು ಲಕ್ಷ ರು. ಪರಿಹಾರ ಹಾಗೂ ತೊಂದರೆಗೆ ಒಳಗಾದ ಪ್ರತಿ ಕುಟುಂಬಕ್ಕೆ 25 ಸಾವಿರ ರು. ನೆರವು ಘೋಷಿಸಿದ್ದಾರೆ. ಅಲ್ಲದೆ, ರಾಜಕಾಲುವೆಯಲ್ಲಿ ಎಲ್ಲಿ ನೀರಿನ ಹರಿವಿಗೆ ಅಡ್ಡಿ ಇದೆಯೋ ಅಲ್ಲಿ, ನೀರು ಸರಾಗವಾಗಿ ನೀರು ಹರಿಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜತೆಗೆ ರಾಜಕಾಲುವೆ, ಕೆರೆ ಒತ್ತುವರಿ ಪ್ರದೇಶ ಗುರುತಿಸಲಾಗಿದ್ದು, ತೆರವು ಕಾರ್ಯಾಚರಣೆ ಚಾಲ್ತಿಯಲ್ಲಿದೆ ಎಂದಿದ್ದಾರೆ.
ಉಸಿರುಗಟ್ಟಿ ಇಬ್ಬರ ಸಾವು:
ಉಲ್ಲಾಳ ಕೆರೆ ಸಮೀಪ ಜಲಮಂಡಳಿಯ ಕಾವೇರಿ 5ನೇ ಹಂತದ ಯೋಜನೆಯ ಕೊಳವೆ ಅಳವಡಿಕೆ ಕಾಮಗಾರಿಯಲ್ಲಿ ತೊಡಗಿದ್ದ ಉತ್ತರ ಭಾರತ ಮೂಲದ ಕಾರ್ಮಿಕರು ಮಳೆಯಿಂದ ಹೊರಬರಲು ಆಗದೇ, ಭೂಮಿಯಡಿಯಲ್ಲೇ ಉಸಿರುಗಟ್ಟಿಮೃತಪಟ್ಟಿದ್ದಾರೆ.
ಈ ನಡುವೆ, ಸುಮಾರು 34 ಮರಗಳು ಉರುಳಿ ಬಿದ್ದಿವೆ, 250ಕ್ಕಿಂತ ಹೆಚ್ಚು ಕಡೆ ನೀರು ನುಗ್ಗಿದೆ. ಹಲವು ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಗರದ ತಗ್ಗುಪ್ರದೇಶದಲ್ಲಿರುವ ನೂರಾರು ಕಟ್ಟಡಗಳ ಬೇಸ್ ಮೆಂಟ್‌ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ನಿಲ್ಲಿಸಿದ ಕಾರು, ಬೈಕ್ ಸೇರಿದಂತೆ ಇತರೆ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.
ಅಹೋರಾತ್ರಿ ಪರಿಹಾರ ಕೆಲಸ:
ಈ ಮಳೆ ಅವಾಂತರ ನಿಭಾಯಿಸಲು ಒಟ್ಟು 200ಕ್ಕೂ ಅಧಿಕ ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ಅಹೋರಾತ್ರಿ ಕಾರ್ಯನಿರ್ವಹಿಸಿದರು. ವಲಯ ಹಾಗೂ ಕೇಂದ್ರ ಕಚೇರಿಯಲ್ಲಿ 30ಕ್ಕೂ ಅಧಿಕ ಸಿಬ್ಬಂದಿ ಸಹಾಯವಾಣಿ ಕೇಂದ್ರದಲ್ಲಿ ಸಾರ್ವಜನಿಕರ ದೂರು ಆಲಿಸಿದ್ದಾರೆ. ರಾಜಕಾಲುವೆಯಲ್ಲಿ 46 ಜೆಸಿಬಿ ಮತ್ತು ಹಿಟಾಚಿ ಯಂತ್ರಗಳು ಹೂಳು ತೆಗೆಯುವ ಕೆಲಸ ನಿರ್ವಹಿಸಿವೆ. ಪಾಲಿಕೆ ಅರಣ್ಯ ವಿಭಾಗದ 21 ಮರ ಕತ್ತರಿಸುವ ತಂಡಗಳು ಮರ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದವು. ಉಳಿದಂತೆ ಅಗ್ನಿ ಶಾಮಕ ದಳ, ಜಲಮಂಡಳಿ ಸೇರಿದಂತೆ ಇತರೆ ಇಲಾಖೆಯ ನೂರಾರು ಅಧಿಕಾರಿ ಸಿಬ್ಬಂದಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಬಿಬಿಎಂಪಿ, ಜಲಮಂಡಳಿ, ಅಗ್ನಿ ಶಾಮಕ ದಳ ಸೇರಿದಂತೆ ಇತರೆ ಇಲಾಖೆಯ ಸಿಬ್ಬಂದಿ ತಗ್ಗು ಪ್ರದೇಶ, ರಸ್ತೆ, ಜಂಕ್ಷನ್‌ಗಳಲ್ಲಿ ಶೇಖರಣೆಯಾಗಿದ್ದ ನೀರನ್ನು ಹೊರ ಹಾಕುವ ಕೆಲಸ ಮಾಡಿದರು. ಪೌರ ಕಾರ್ಮಿಕರು ರಸ್ತೆ ಹಾಗೂ ನೀರು ನುಗ್ಗಿದ ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ನೆರವಾದರು. ಬುಧವಾರ ಇಡೀ ದಿನ ಮನೆಯಿಂದ ನೀರು ಹೊರ ಹಾಕುವ, ಸ್ವಚ್ಛಗೊಳಿಸುವ ಕೆಲಸದಲ್ಲಿ ಜನರು ಹೈರಾಣಾದರು. ಈ ಮಧ್ಯೆ ಬಿಬಿಎಂಪಿ ಅಧಿಕಾರಿಗಳು ಮನೆಗಳಿಗೆ ನೀರು ನುಗ್ಗಿದ ಪ್ರದೇಶದಲ್ಲಿ ಹಾನಿ ಸಮೀಕ್ಷೆ ಆರಂಭಿಸಿದ್ದಾರೆ. ರಸ್ತೆ, ಜಂಕ್ಷನ್‌ಗಳಲ್ಲಿ ನೀರು ನಿಂತುಕೊಂಡ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಬುಧವಾರ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು.
Kalaburagi: ಬಿರುಗಾಳಿ ಮಳೆಗೆ ನೆಲಕ್ಕುರುಳಿದ ಬಾಳೆ: ಕಂಗಾಲಾದ ರೈತ
ಜನರ ಆಕ್ರೋಶ:
ಪ್ರತಿ ಮಳೆಯ ಸಂದರ್ಭದಲ್ಲೂ ಈ ರೀತಿ ತೊಂದರೆಯಾಗುತ್ತಿದ್ದರೂ ಪರಿಹರಿಸದ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮನೆಯಲ್ಲಿ ಇದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಕುಡಿಯಲು ನೀರು, ಆಹಾರವಿಲ್ಲದೇ ಪರದಾಡಬೇಕಾಯಿತು. ಕೆಲವು ಕಡೆ ಬಿಬಿಎಂಪಿಯಿಂದ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಬೇಸಿಗೆಯಲ್ಲೇ ಕೆರೆಗಳು ಕೋಡಿ, ಡ್ಯಾಂಗೆ ನೀರು
ಕಳೆದೊಂದು ವಾರದಿಂದ ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬೇಸಿಗೆ ಕಾಲದಲ್ಲೇ ಕೆರೆಕಟ್ಟೆಗಳಲ್ಲಿ ಉತ್ತಮ ನೀರು ಸಂಗ್ರಹವಾಗುತ್ತಿದೆ. ಎರಡು ಕೆರೆಗಳು 25-30 ವರ್ಷ ಬಳಿಕ ಕೋಡಿ ಬಿದ್ದಿದ್ದರೆ, ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿದೆ. ಯಗಚಿ ತುಂಬುವ ಹಂತದಲ್ಲಿದೆ. ಕೆಆರ್‌ಎಸ್, ತುಂಗಭದ್ರಾ ನದಿಯಲ್ಲೂ ದಾಖಲೆ ನೀರು ಶೇಖರಣೆಯಾಗಿದೆ.