ದಿನ ಬೆಳಗಾದ್ರೆ ಸಾಕು ಶಾಲೆಗೆ ತೆರಳುವ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವೆಗೂ ಆ ಅರ್ಧಂಬರ್ಧ ನಿರ್ಮಿಸಲಾದ ಕಾಲು ಸಂಕದ ಅಡಿಯಲ್ಲೇ ಸಾಗಬೇಕು.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣನ್ಯೂಸ್, ಕಾರವಾರ
ಕಾರವಾರ (ಮೇ.20): ದಿನ ಬೆಳಗಾದ್ರೆ ಸಾಕು ಶಾಲೆಗೆ ತೆರಳುವ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವೆಗೂ ಆ ಅರ್ಧಂಬರ್ಧ ನಿರ್ಮಿಸಲಾದ ಕಾಲು ಸಂಕದ ಅಡಿಯಲ್ಲೇ ಸಾಗಬೇಕು. ಮಳೆಗಾಲದ ಸಂದರ್ಭದಲ್ಲಂತೂ ಇಲ್ಲಿ ಹೊಳೆಯ ನೀರು ಹರಿಯುವುದರಿಂದ ಜನರು ಕಾಲು ಸಂಕದ ಮೇಲೆ ಅಡಿಕೆ ಮರದ ಸೇತುವೆ ಮಾಡಿ ಜೀವ ಕೈಯಲ್ಲಿ ಹಿಡಿದುಕೊಂಡು ಸರ್ಕಸ್ ಮಾಡಬೇಕು. ಶಾಲೆಯ ಮಕ್ಕಳು ಕೂಡಾ ಇದರ ಮೇಲೆ ಕೈ-ಕೈ ಹಿಡಿದುಕೊಂಡು ಸಾಗೋದು ನೋಡಿದ್ರೆ ಎಂತವರ ಕರುಳು ಕೂಡಾ ಚುರುಕ್ ಅನ್ನಿಸದಿರದು. ಮಳೆಗಾಲದ ವೇಳೆ ಇಲ್ಲಿ ನಿರ್ಮಿಸಲಾಗುವ ಅಡಿಕೆ ಮರದ ಸೇತುವೆಯಿಂದ ಯಾರಾದ್ರೂ ಕೆಳಕ್ಕೆ ಬಿದ್ದಲ್ಲಿ ನೀರಿನೊಂದಿಗೆ ಹರಿದು ಹೋಗಿ ಪಕ್ಕದ ದೊಡ್ಡ ಹೊಳೆಯಲ್ಲಿ ಕೊಚ್ಚಿ ಹೋಗೋದಂತೂ ಗ್ಯಾರಂಟಿ. ಅಷ್ಟಕ್ಕೂ ಈ ಗಂಭೀರ ಸಮಸ್ಯೆ ಇರೋದಾದ್ರೂ ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ನೇತೃತ್ವದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ 2016ರಿಂದ 2018ರವರೆಗೆ ಮೂರು ಬಾರಿ ತಲಾ 5 ಲಕ್ಷ ರೂ.ನಂತೆ ಹೊನ್ನಾವರ ಪಟ್ಟಣದಿಂದ ಸುಮಾರು 3-4ಕಿ.ಮೀ. ದೂರದಲ್ಲಿರುವ ಸಾಲ್ಕೋಡು ಭಾಗದಲ್ಲಿ ಕಾಲು ಸಂಕ ನಿರ್ಮಾಣದ ಕಾಮಗಾರಿ ನಡೆದಿತ್ತು. ಆದರೆ, ಮೂರು ಬಾರಿ ಕಾಮಗಾರಿ ನಡೆಸಿದ್ರೂ ಅಂದಿನಿಂದ ಇಂದಿನವರೆಗೂ ಕಾಲುಸಂಕ ಮಾತ್ರ ನಿರ್ಮಾಣವಾಗಿಯೇ ಇಲ್ಲ. ಬೇಸಿಗೆಗಾಲದಲ್ಲಿ ಜನರು ಕಾಲು ಸಂಕಕ್ಕಾಗಿ ನಿರ್ಮಾಣ ಮಾಡಲಾಗಿರುವ ಪಿಲ್ಲರ್‌ಗಳ ಬಳಿಯಿಂದ ಸಾಗಿ, ಬಳಿಕ ಅರ್ಧಂಬರ್ಧ ನಿರ್ಮಾಣ ಮಾಡಲಾಗಿರುವ ಕಾಲುಸಂಕದ ಅಡಿಯಿಂದ ನಡೆದುಕೊಂಡು ಸಾಗ್ತಾರೆ.
Karwar: ಮೊಮ್ಮಗನನ್ನು ನೋಡಲು ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ
ಆದ್ರೆ, ಮಳೆಗಾಲ ಬಂತಂದ್ರೆ ಸಾಕು ಇಲ್ಲಿನ ನಿವಾಸಿಗಳಿಗೆ ದೊಡ್ಡ ಪರೀಕ್ಷೆಯೇ ಎದುರಾಗುತ್ತದೆ. ಕಾರಣ ಮಳೆಗಾಲದ ಸಂದರ್ಭ ಇಲ್ಲಿ ಹೊಳೆಯ ನೀರು ಹರಿಯುವುದರಿಂದ ಜನರು ಅಡಿಕೆ ಮರದ ಸೇತುವೆ ಮಾಡಿಕೊಂಡು ಒಂದೆಡೆಯಿಂದ ಇನ್ನೊಂದೆಡೆ ಸಾಗಬೇಕಾದ ಪರಿಸ್ಥಿತಿ. ಈ ಊರಿನ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಯಾವುದೇ ಕೆಲಸಕ್ಕೆ ತೆರಳುವ ಯುವಕರು, ಹಿರಿಯರು ಕೂಡಾ ತಮ್ಮ ಗ್ರಾಮದಿಂದ ಹೊರಕ್ಕೆ ಕಾಲಿಡಬೇಕಾದಲ್ಲಿ ಅಡಿಕೆ ಮರದ ಕಾಲುಸಂಕವನ್ನು ದಾಟಲೇಬೇಕು. ನಾಲ್ಕು ಅಡಿಕೆ ಮರವನ್ನು ಉದ್ದಲಾಗಿ ಹಾಕಿ ಮಾಡಲಾಗುವ ಈ ಕಾಲು ಸಂಕದಿಂದ ಸಾಕಷ್ಟು ಜನರು ಬಿದ್ದು ಮೂಳೆಯನ್ನೂ ಮುರಿದುಕೊಂಡಿದ್ದಾರೆ. ಒಂದು ವೇಳೆ ಧಾರಾಕಾರ ಮಳೆಬಂದು ಈ ಕಾಲುಸಂಕದಡಿ ನೀರಿನ ಪ್ರವಾಹ ಹೆಚ್ಚಾದರೆ ಮೇಲಿಂದ ಜಾರಿಬಿದ್ದ ವ್ಯಕ್ತಿ ಪಕ್ಕದಲ್ಲಿ ಹರಿಯೋ ಹೊಳೆಯಲ್ಲಿ ಮೃತದೇಹವಾಗಿ ಪತ್ತೆಯಾಗುವುದರಲ್ಲಿ ಸಂಶಯವೇ ಇಲ್ಲ.
ಅಂದಹಾಗೆ, ಈ ಕಾಲುಸಂಕ ಗಾಣಿಗೇರಿ, ಕವಲಕೇರಿ ಮುಂತಾದ ಕೆಲವು ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ಗ್ರಾಮದಲ್ಲಿ ಸುಮಾರು 50 ಮಂದಿ ಶಾಲಾ- ಕಾಲೇಜಿಗೆ ತೆರಳುವ ಮಕ್ಕಳಿದ್ದು, ಬೆಳಗ್ಗೆ ಹಾಗೂ ಸಂಜೆ ಅವರು ಇದೇ ಕಾಲುಸಂಕದ ಮೇಲೆ ನಡೆದಾಡಿಕೊಂಡು ತೆರಳಬೇಕಿದೆ. ಜೋರಾಗಿ ಮಳೆ ಬೀಳುವ ಸಂದರ್ಭದಲ್ಲಂತೂ ಪೋಷಕರೇ ಈ ಕಾಲುಸಂಕದ ಮೇಲಿನಿಂದ ಮಕ್ಕಳನ್ನು ದಾಟಿಸುತ್ತಾರಾದರೂ, ಪೋಷಕರಿಗೆ ಯಾವುದೇ ತುರ್ತು ಕೆಲಸದಲ್ಲಿ ಬೇಗ ತೆರಳಬೇಕೆಂದಿದ್ದರೆ ಅಂದು ಮಕ್ಕಳು ಶಾಲೆಗೆ ಚಕ್ಕರ್ ಹೊಡೆಯಬೇಕಾದ ಸ್ಥಿತಿ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಪಂಚಾಯತ್ ಕಚೇರಿ ಮುಂತಾದೆಡೆ ತೆರಳಲೂ ಇದರ ಮೇಲೆಯೇ ನಡೆದಾಡಬೇಕಿದ್ದು, ವೃದ್ಧರಂತೂ ಕಾಲುಸಂಕದ ಮೇಲೆ ನಡೆದಾಡಲು ಸಾಧ್ಯವಾಗದೇ ನೀರಿಗಿಳಿದು ನಡೆದುಕೊಂಡು ತೆರಳುತ್ತಾರೆ.
ಅಷ್ಟಕ್ಕೂ ಸಾಲ್ಕೋಡಿನ ಜನರು ಸುಮಾರು 50ವರ್ಷಗಳಿಂದ ಸೇತುವೆಯಿಲ್ಲದೇ ಪರದಾಡುತ್ತಿದ್ದರು. ಬಳಿಕ ಸುಮಾರು 7-8 ವರ್ಷಗಳಿಂದ ಹಿಂದೆ ಜಲಸಂಪನ್ಮೂಲ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕ ಕುಮಟಾ- ಹೊನ್ನಾವರ ಶಾಸಕ ದಿನಕರ ಶೆಟ್ಟಿ 1ಕೋಟಿ ರೂ. ವೆಚ್ಚದಲ್ಲಿ ಸಾಲ್ಕೋಡು ಹೊಳೆಗೆ ಸೇತುವೆ ಕಟ್ಟಿಸಿದ್ದರು. ಆದರೆ, ಸೇತುವೆಯ ಮುಂದುವರಿದ ಭಾಗದಲ್ಲಿ ಹೊಳೆಗೆ ನೀರು ಹರಿದುಬರುವ ಸ್ಥಳದಲ್ಲಿ ಸಣ್ಣ ಕಾಲು ಸಂಕ ನಿರ್ಮಾಣವನ್ನು ಅರ್ಧದಲ್ಲೇ ಕೈಬಿಟ್ಟು ಕೇವಲ ಪಿಚ್ಚಿಂಗ್ ಹಾಗೂ ಪಿಲ್ಲರ್ ಕಟ್ಟಿಡಲಾಗಿದೆ. ಪ್ರಸ್ತುತ ಈ ಸಣ್ಣ ಸೇತುವೆ ನಿರ್ಮಾಣ ಮಾಡಬೇಕಾದ ಪಕ್ಕದ ತಡೆಗೋಡೆಯೂ ಕುಸಿದು ಬಿದ್ದಿದೆ. ಸೂಕ್ತ ಸೇತುವೆಯಾಗದ್ದರಿಂದ ಕಳೆದ 7-8 ವರ್ಷಗಳಿಂದ ಪಂಚಾಯತ್ ಅನುದಾನದಲ್ಲೇ ಇಲ್ಲಿ ಅಡಿಕೆ ಮರದ ಕಾಲು ಸಂಕ ಮಾಡಿಸಲಾಗುತ್ತಿದ್ದು, ಪ್ರವಾಹ ಕಾಣಿಸಿಕೊಂಡ ಸಂದರ್ಭದಲ್ಲಿ ಈ ಕಾಲು ಸಂಕಗಳೂ ಕೊಚ್ಚಿಕೊಂಡು ಹೋಗುತ್ತವೆ.
ಕಳೆದ ಬಾರಿ ಇಲ್ಲಿನ ದುಸ್ಥಿತಿಯನ್ನು ವರದಿ ಮಾಡಿದ ಬಳಿಕ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಈ ಬಾರಿ ಹೊಸ ಸೇತುವೆ ನಿರ್ಮಾಣಕ್ಕೆ 60ಲಕ್ಷ ರೂ. ಅನುದಾನ ತರಿಸಿದ್ದಾರೆ. ಆದರೆ, ವಿಪರ್ಯಾಸವೆಂದರೆ ಈ ಹಿಂದೆ 15 ಲಕ್ಷ ರೂ. ವೆಚ್ಚದಲ್ಲಿ ಅರ್ಧಂಬರ್ಧ ನಿರ್ಮಾಣ ಮಾಡಲಾದ ಕಾಲು ಸಂಕವನ್ನು ಇದೀಗ ಮತ್ತೆ ಕೆಡವಿ ಹೊಸ ಅನುದಾನದಲ್ಲಿ ನೂತನ ಕಾಲು ಸಂಕ ನಿರ್ಮಾಣಗೊಳ್ಳಲಿದೆ. ಹಾಗಿದ್ರೆ, ಮೊದಲು 15 ಲಕ್ಷ ರೂ. ವೆಚ್ಚ ಮಾಡಿ ಅರ್ಧಂಬರ್ಧ ಕಾಲು ಸಂಕ ಯಾಕೆ ಮಾಡಿಸಬೇಕಿತ್ತು? ಇದೂ ಹಣ ಹೊಡಿಯೋ ಯೋಜನೆಯೇ ಅನ್ನೋ ಅನುಮಾನ ಎದುರಾಗಿದೆ. ಇನ್ನು ಶಾಸಕರು ತಂದಿರುವ 60 ಲಕ್ಷ ರೂ. ಅನುದಾನ ಕೇವಲ ಪಿಲ್ಲರ್ ನಿರ್ಮಾಣಕ್ಕೆ ಮಾತ್ರ ಸಾಧ್ಯವಾಗುತ್ತಿದ್ದು, ಸಂಪೂರ್ಣ ಸೇತುವೆಗೆ ಮತ್ತಷ್ಟು ಹಣ ಬೇಕಿದೆ. ಅಲ್ಲಿಯವರೆಗೆ ಈ ಬಾರಿಯೂ ಜನರ ಸ್ಥಿತಿ ಮಾತ್ರ ಹಿಂದಿನ ರೀತಿಯಲ್ಲೇ ಇರಲಿದೆ. ಈ ಕಾರಣದಿಂದ ಜಿಲ್ಲೆಯ ಸಂಸದರು ಹಾಗೂ ಶಾಸಕರ ವಿರುದ್ಧ ಜನರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
Uttara Kannada: ಹಣ ನುಂಗೋ ಅವೈಜ್ಞಾನಿಕ ಕಾಮಗಾರಿ: ಕಳಪೆ ಕಾಮಗಾರಿಯಿಂದ ಜನರಿಗೆ ನೆರೆಕಾಟ!
ಒಟ್ಟಿನಲ್ಲಿ ಹಲವು ವರ್ಷಗಳಿಂದ ಅಡಿಕೆ ಮರದ ಕಾಲುಸಂಕದೊಂದಿಗೇ ಜೀವನ ಸಾಗಿಸುತ್ತಿರುವ ಸಾಲ್ಕೋಡಿನ ಜನರು ಇದರಿಂದ ಮುಕ್ತಿ ನೀಡಲು ಆಗ್ರಹಿಸಿದ್ದಾರೆ. ಶೀಘ್ರದಲ್ಲಿ ಉತ್ತಮ ಸೇತುವೆ ಕಾರ್ಯ ಪೂರ್ಣಗೊಳಿಸಿ ವಾಹನಗಳು ಸಾಗುವಂತೆ ವ್ಯವಸ್ಥೆ ಮಾಡಿಕೊಡಲು ಒತ್ತಾಯಿಸಿದ್ದು, ಕೂಡಲೇ ಸಂಸದರು ಹಾಗೂ ಶಾಸಕರು ತಮ್ಮ ನಿಧಿಯ ಮೂಲಕ ಈ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.