ರೋಣ: ಅನಾಥಾಶ್ರಮಕ್ಕೂ ಸಂಕಷ್ಟ ತಂದೊಡ್ಡಿದ ಕೊರೋನಾ..!

By Kannadaprabha NewsFirst Published May 13, 2021, 11:35 AM IST
Highlights

* ಅನಾಥರು, ನಿರ್ಗತಿಕರು, ಮಾನಸಿಕ ಅಸ್ವಸ್ಥತರಿಗೆ ಆಶ್ರಯ ತಾಣ
* ಮನೆ ಬಾಡಿಗೆ, ತುತ್ತು ಅನ್ನಕ್ಕೂ ಪರಿತಪಿಸುತ್ತಿರುವ ತಾಯಿಯ ಬಳಗ
* ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿರುವ ‘ತಾಯಿಯ ಬಳಗ ಅನಾಥಾಶ್ರಮ

ಪಿ.ಎಸ್‌. ಪಾಟೀಲ

ರೋಣ(ಮೇ.13): ಅನಾಥರು, ನಿರ್ಗತಿಕರು, ಬಂಧು- ಬಳಗದಿಂದ ದೂರವಾದವರು, ಮಾನಸಿಕ ಅಸ್ವಸ್ಥತರಿಗೆ ಆಶ್ರಯ ತಾಣವಾಗಿರುವ ಪಟ್ಟಣದ ಶಿವಪೇಟಿ 7ನೇ ಕ್ರಾಸ್‌ನಲ್ಲಿರುವ ‘ತಾಯಿಯ ಬಳಗ ಅನಾಥಾಶ್ರಮ’ ಲಾಕ್‌ಡೌನ್‌ ಹೊಡತಕ್ಕೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಮನೆ ಬಾಡಿಗೆ ಕಟ್ಟಲು, ತುತ್ತು ಅನ್ನಕ್ಕೂ ಪರಿತಪಿಸುವಂತಾಗಿದೆ.

70 ವರ್ಷ ಮೆಲ್ಪಟ್ಟ ಮೂವರು ವೃದ್ದರು, ಇಬ್ಬರು ಅಜ್ಜಿ, ಐವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಒಟ್ಟು 12 ಜನರಿದ್ದಾರೆ. ಯಾರಲ್ಲೂ ಅನಾಥ ಪ್ರಜ್ಞೆ ಕಾಡಬಾರದು, ನಾಗರಿಕ ಸಮಾಜದಿಂದ ಯಾರೊಬ್ಬರು ವಂಚಿತರಾಗಬಾರದು, ಅವರಿಗೆ ಪ್ರೀತಿ, ಮಮತೆ, ವಾತ್ಸಲ್ಯ ಸಿಗುವಂತಾಗಬೇಕು ಎಂಬ ಉದ್ದೇಶದೊಂದಿಗೆ ಪಟ್ಟಣದ ಶಿವಪೇಟಿ 7ನೇ ಕ್ರಾಸ್‌ನ ರೋಣಮ್ಮದೇವಿ ದೇಗುಲ ಹತ್ತಿರ (ಮುಗಳಿ ರಸ್ತೆ) ಕಳೆದ 4 ತಿಂಗಳಿನಿಂದ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ‘ಪ್ರಿಯಾಂಕ ಮಹಿಳಾ ವಿವಿಧೋದ್ದೇಶ ಸಂಸ್ಥೆ’ಯ ತಾಯಿಯ ಬಳಗ ಅನಾಥಾಶ್ರಮ ಕಳೆದೊಂದು ವಾರದಿಂದ ನಾನಾ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ.

ರೇಷನ್‌ ಸಂಪೂರ್ಣ ಖಾಲಿ:

ಆಶ್ರಮದಲ್ಲಿ 12 ಜನ ನಿರ್ಗತಿಕರು, ಇಬ್ಬರು ಅಡುಗೆ ಸಹಾಯಕರು, ಇಬ್ಬರು ಸೇವಾ ಪ್ರತಿನಿಧಿ ಸೇರಿ ಒಟ್ಟು 16 ಜನರಿದ್ದಾರೆ. ಈಗಾಗಲೇ ಆಶ್ರಮದಲ್ಲಿ ಗೋದಿ ಹಿಟ್ಟು, ಜೋಳದ ಹಿಟ್ಟು, ಕಾಯಿಪಲ್ಯೆ ಸೇರಿದಂತೆ ಅಗತ್ಯ ದವಸ ಧಾನ್ಯ ಖಾಲಿಯಾಗಿದೆ. ಕಳೆದೊಂದು ವಾರದಿಂದ ಅಕ್ಕಿ ಅನ್ನ, ಗಂಜಿ ಸಾರು ಮಾತ್ರ ಸೇವಿಸಲಾಗುತ್ತಿದೆ. ಏನಾದರೂ ಮಾಡಿ, ಉತ್ತಮ ಆಹಾರ ಕೊಟ್ಟರಾಯ್ತೆಂದು ಸಂಯೋಜಕಿ ಅಶ್ವಿನಿ ಅವರು ನಾನಾ ರೀತಿಯಲ್ಲಿ ಪರಿತಪಿಸುತ್ತಿದ್ದು, ಈಗಾಗಲೇ ಅನೇಕರಲ್ಲಿ ಸಾಲ ಕೊಡುವಂತೆ ಕೇಳಿದ್ದಾರೆ. ಸೆಕ್ಯೂರಿಟಿಗೆ ಬೇಕಿದ್ದಲ್ಲಿ ನಮ್ಮ ಸಂಸ್ಥೆಯ ಚೆಕ್‌ ಕೊಡುತ್ತೇವೆ ಎಂದು ಅಂಗಲಾಚುತ್ತಿದ್ದರೂ ಯಾರೊಬ್ಬರು ಸಹಾಯಕ್ಕೆ ಬರುತ್ತಿಲ್ಲ.

ಲಕ್ಷ್ಮೇಶ್ವರ: ದಲಿತ ಶಾಸಕರ ಸ್ವಗ್ರಾಮದಲ್ಲಿ ಅಸ್ಪೃಶ್ಯತೆ ಜೀವಂತ..!

ಬಾಡಿಗೆ ಕಟ್ಟಲು ಪರದಾಟ:

ಆಶ್ರಮ ಖಾಸಗಿ ಕಟ್ಟಡವೊಂದರಲ್ಲಿದ್ದು, ತಿಂಗಳಿಗೆ 5 ಸಾವಿರಗಳ ಬಾಡಿಗೆ ಕಟ್ಟಬೇಕು. ಜೊತೆಗೆ ಪ್ರತಿ ತಿಂಗಳು .2 ರಿಂದ 3 ಸಾವಿರ ನೀಡಿ ಟ್ಯಾಂಕರ್‌ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ವೃದ್ಧರು, ಪುರುಷರು ಪ್ರತ್ಯೇಕವಾಗಿ ಇರಲು ವ್ಯವಸ್ಥೆಗೆ ಕಳೆದ 4 ತಿಂಗಳ ಹಿಂದೆ 1 ಲಕ್ಷಗಳ ಸಾಲ ಮಾಡಿ ಕಟ್ಟಡ ಆವರಣದಲ್ಲಿ ಪ್ರತ್ಯೇಕವಾಗಿ ತಗಡಿನ ಶೆಡ್‌ ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ ಮಕ್ಕಳು, ಮಹಿಳೆಯರಿಗೆ ಮನೆಯಲ್ಲಿಯೇ ಆಶ್ರಯ ಕಲ್ಪಿಸಲಾಗಿದೆ. ಇದೊಂದು ಆಶ್ರಮ, ನಾವು ಆಶ್ರಮದಲ್ಲಿದ್ದೇವೆ ಎಂಬ ಭಾವನೆ ಬಾರದಂತೆ, ಅಜ್ಜ, ಅಜ್ಜಿ, ಮಹಿಳೆ, ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಇಲ್ಲಿನ ಸಂಯೋಜಕರು ನೋಡಿಕೊಳ್ಳುತ್ತಿದ್ದಾರೆ. ವಯಸ್ಸಾದ ಕೆಲವರಿಗೆ ಆಗಾಗ್ಗೆ ಆರೋಗ್ಯದಲ್ಲಿ ಏರುಪೇರಾಗುತ್ತಿದೆ.

ಆಶ್ರಮ ಖಾಲಿ ಮಾಡುವಂತೆ ಒತ್ತಾಯ:

ಕಳೆದೊಂದು ತಿಂಗಳಿನಿಂದ ಕಟ್ಟಡ ಮಾಲಿಕ ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಕಂಡ ಕಂಡವರಲ್ಲಿ, ಬಾಡಿಗೆ ಮನೆ ಕೊಡಿಸಿ, ಅಥವಾ ಖಾಲಿ ಜಾಗೆಯನ್ನಾದರೂ ಕೊಡಿಸಿ, ತಗಡಿನ ಶೆಡ್‌ ಹಾಕಿಕೊಂಡಾದರೂ ಇರುತ್ತೇವೆ ಎಂದು ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.

ಈ ಅನಾಥರಿಗೆ ನೆರವಾಗುವವರು ಅಕೌಂಟ್‌ ನಂಬರ- 39932202171 ಐ.ಎಫ್‌.ಎಸ್‌.ಸಿ ಕೋಡ್‌ ಎಸ್‌ಬಿಐಎನ್‌ 0002264. (ಮೋ: 7619198616) ಸಂಪರ್ಕಿಸಬಹುದು.

ಹೊಲಿಗೆ ತರಬೇತಿ ಸ್ವ - ಉದ್ಯೋಗ ಮೂಲಕ ಬರುತ್ತಿದ್ದ ಆದಾಯದಲ್ಲಿ ಆಶ್ರಮ ನಡೆಸಿಕೊಂಡು ಬಂದಿದ್ದೇವೆ. ಆದರೆ, ಲಾಕ್‌ಡೌನ್‌ನಿಂದಾಗಿ ಸ್ವ- ಉದ್ಯೋಗ ಬಂದಾಗಿದೆ. ಸಧ್ಯ ಆಶ್ರಮದಲ್ಲಿದ್ದ ರೇಷನ್‌ ಖಾಲಿಯಾಗಿದೆ. ಕಟ್ಟಡ ಬಾಡಿಗೆ ಕಟ್ಟಲು ನಮ್ಮಲ್ಲಿ ಹಣವಿಲ್ಲ. ಮನೆ ಖಾಲಿ ಮಾಡುವಂತೆ ಮಾಲಿಕರು ಹೇಳಿದ್ದಾರೆ. ಸಾಲ ಕೇಳಿದರೂ ಯಾರು ಕೊಡುತ್ತಿಲ್ಲ. ನಮಗೆ ಇಂತಹ ಪರಸ್ಥಿತಿ ಯಾಕಾದರೂ ಬಂದಿದೆ ಎಂದು ನೋವಾಗುತ್ತಿದೆ ಎಂದು ರೋಣ ಪಟ್ಟಣದ ತಾಯಿಯ ಬಳಗ ಅನಾಥಾಶ್ರಮದ ಸಂಯೋಜಕಿ ಆಶ್ವಿನಿ ಎಂ.ಜಿ ತಿಳಿಸಿದ್ದಾರೆ.
 

click me!