* ವಿಮೆ ಪಾಲಸಿ ಹಣ ಪಾವತಿಸಲು ನಿರಾಕರಿಸಿದ್ದ ಜೀವ ವಿಮಾ ಕಂಪನಿ
* ಕನಿಷ್ಠ ಶೇ. 6ರ ಬಡ್ಡಿಯೊಂದಿಗೆ ವಿಮಾ ಹಣ ಪಾವತಿಸುವಂತೆ ಆದೇಶ
* ಪ್ರಕರಣದ ಪರಿಹಾರವಾಗಿ 5 ಸಾವಿರ ಪಾವತಿಸಲು ಆದೇಶ
ಹಾವೇರಿ(ಸೆ.22): ಹೃದಯಾಘಾತದಿಂದ ಮೃತರಾದ ವ್ಯಕ್ತಿಯ ಕುಟುಂಬದವರಿಗೆ ವಿಮೆ ಪಾಲಸಿ ಹಣ ಪಾವತಿಸಲು ನಿರಾಕರಿಸಿದ ಕೋಟಕ್ ಮಹಿಂದ್ರ ಜೀವ ವಿಮಾ ಕಂಪನಿಗೆ ಕರಾರು ಒಪ್ಪಂದದ ಪ್ರಕಾರ ಕನಿಷ್ಠ ಶೇ. 6ರ ಬಡ್ಡಿಯೊಂದಿಗೆ 30 ದಿನದೊಳಗಾಗಿ ಮೃತ ವ್ಯಕ್ತಿಯ ಕುಟುಂಬದವರಿಗೆ ವಿಮಾ ಹಣ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ರಾಣಿಬೆನ್ನೂರ ನಗರದ ಭರಮಗೌಡ ಶಂಕರಗೌಡ ಮರಿಗೌಡರ ಅವರು ಕೋಟಕ್ ಪ್ರೀಮಿಯರ್ ಎಂಡೋಮೆಂಟ್ ಪ್ಲ್ಯಾನ್ ಹೆಸರಿನಲ್ಲಿ 7,54,800 ಮೊತ್ತದ ಪಾಲಿಸಿ ಮಾಡಿಸಿದ್ದರು. ವಿಮಾ ಪಾಲಿಸಿದಾರ 02-12-2019ರಂದು ಮರಣ ಹೊಂದಿದ ಕಾರಣ ಮೃತರ ಪತ್ನಿ ಹಾಗೂ ಮೂರು ಮಕ್ಕಳು ತಮಗೆ ಬರಬೇಕಾದ ಪಾಲಸಿ ಹಣ ನೀಡಲು ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಮಾ ಕಂಪನಿ ಮೃತ ವ್ಯಕ್ತಿ ಪಾಲಿಸಿ ನೋಂದಣಿ ಸಂದರ್ಭದಲ್ಲಿ ತನ್ನ ಆರೋಗ್ಯ ಸಮಸ್ಯೆ ಕುರಿತು ಸತ್ಯ ಮರೆಮಾಚಿ ಪಾಲಿಸಿ ಮಾಡಿಸಿದ್ದರು ಎಂದು ನೆಪಹೇಳಿ ವಿಮಾ ಮೊತ್ತದ ಹಣ ನೀಡಲು ನಿರಾಕರಿಸಿತ್ತು. ಹೀಗಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಈ ಕುರಿತಂತೆ ಕುಟುಂಬದ ಸದಸ್ಯರು ದೂರು ದಾಖಲಿಸಿದ್ದರು.
ಜನ್‌ಧನ್ ಯೋಜನೆಗೆ 7 ವರ್ಷ: 43 ಕೋಟಿ ಖಾತೆ, 1.46 ಲಕ್ಷ ಕೋಟಿ ಠೇವಣಿ!
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಅಧ್ಯಕ್ಷರಾದ ಸುನಂದಾ ಹಾಗೂ ಸದಸ್ಯೆ ಮಹೇಶ್ವರಿ ಬಿ.ಎಸ್. ಅವರು ಮೃತರು ಹೃದಯಾಘಾತದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕರಾರು ಒಪ್ಪಂದದ ಪ್ರಕಾರ ಕನಿಷ್ಠ ಸಾವಿನ ಲಾಭವನ್ನು ಶೇ. 6ರ ಬಡ್ಡಿ ಸೇರಿಸಿ ನೀಡಲು ಹಾಗೂ ಮಾನಸಿಕ ವ್ಯಥೆಗೆ ಮತ್ತು ಪ್ರಕರಣದ ಪರಿಹಾರವಾಗಿ 5 ಸಾವಿರ ಪಾವತಿಸಲು ಆದೇಶ ಹೊರಡಿಸಿದ್ದಾರೆ.
ಆದೇಶವಾದ 30 ದಿನಗಳಲ್ಲಿ ಮೊತ್ತ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ. 9ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ನೋಂದಣಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ತಿಳಿಸಿದ್ದಾರೆ.