ಜೆಡಿಎಸ್ ಶಾಸಕ ಕಾಂಗ್ರೆಸ್ ಸೇರ್ಪಡೆ : ನಾವಿಕನಿಲ್ಲದ ನಾವೆಯಾದ ದಳ

By Kannadaprabha News  |  First Published Sep 22, 2021, 11:16 AM IST
  • ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್‌ ನಾವಿಕನಿಲ್ಲದ ನಾವೆಯಂತಾಗಿದೆ
  • ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತನ್ನದೇ ಶಕ್ತಿಯನ್ನು ಬೆಳಿಸಿಕೊಂಡು ಸುಧೀರ್ಘ ರಾಜಕಾರಣದ ಇತಿಹಾಸವನ್ನೇ ನಿರ್ಮಿಸಿತ್ತು
  •  ಶಾಸಕ ಶ್ರೀನಿವಾಸಗೌಡ ಪಕ್ಷ ತೊರೆಯುವ ನಿರ್ಧಾರ ಕೈಗೊಂಡ ಹಿನ್ನೆಲೆ ನಾಯಕತ್ಬ ಕೊರತೆ

ವರದಿ : ಸತ್ಯರಾಜ್‌ ಜೆ.

 ಕೋಲಾರ (ಸೆ.22):  ಜಿಲ್ಲೆಯಲ್ಲಿ ಜೆಡಿಎಸ್‌ ನಾವಿಕನಿಲ್ಲದ ನಾವೆಯಂತಾಗಿದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತನ್ನದೇ ಶಕ್ತಿಯನ್ನು ಬೆಳಿಸಿಕೊಂಡು ಸುಧೀರ್ಘ ರಾಜಕಾರಣದ ಇತಿಹಾಸವನ್ನೇ ನಿರ್ಮಿಸಿತ್ತು. ಆದರೆ ಜನತಾ ಪರಿವಾರ ತತ್ವ ಸಿದ್ಧಾಂತಗಳನ್ನು ರೂಢಿಸಿಕೊಂಡ ನಾಯಕರಲ್ಲಿ ಒಬ್ಬರಾಗಿದ್ದ ಶಾಸಕ ಶ್ರೀನಿವಾಸಗೌಡ ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಜನತಾ ಪರಿವಾರದ ಕೊನೆಯಕೊಂಡಿ ಕಳಚಿದಂತಾಗಿದೆ.

Latest Videos

undefined

ಜಿಲ್ಲೆಯಲ್ಲಿ ಜನತಾ ಪರಿವಾರದ ಮತಗಳಿವೆ. ಅದರೆ ಮತದಾರರನ್ನು ಒಗ್ಗೂಡಿಸುವ ನಾಯಕರಿಲ್ಲ. ಬೈರೇಗೌಡ ನಂತರ ಜಿಲ್ಲೆಯ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಶ್ರೀನಿವಾಸಗೌಡರ ಪ್ರಭಾವ ಇತ್ತು. ಆದರೆ ಇವರ ಬೆಳವಣಿಗೆಯನ್ನು ಸಹಿಸದ ಜೆಡಿಎಸ್‌ ನಾಯಕರೇ ಅವರನ್ನು ಮೂಲೆ ಗುಂಪು ಮಾಡುತ್ತಾ ಬಂದರು. ಇದರಿಂದಾಗಿಯೇ ಬೇಸತ್ತು ಶ್ರೀನಿವಾಸಗೌಡ ಪಕ್ಷದ ತ್ಯಜಿಸಿ ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ.

ಕೈ ಸೇರಲು ಮುಂದಾದ ಶಾಸಕ : ಉಚ್ಛಾಟಿತರಾದವರು ಬರುವ ಅಗತ್ಯವಿಲ್ಲವೆಂದು ವಿರೋಧ

ಕಾಂಗ್ರೆಸ್‌ ವಿರೋಧಿ ನೆಲ: ಕೋಲಾರ ಜಿಲ್ಲೆ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕಾಂಗ್ರೆಸ್‌ ವಿರುದ್ಧ ಹೋರಾಟದಲ್ಲಿ ಮುಂದಿತ್ತು. ಆಗ ಮುಂಚೂಣಿಗೆ ಬಂದಿದ್ದು ಎಡಪಕ್ಷಗಳು, ಮತ್ತು ಜನತಾಪರಿವಾರ. ಕಾಂಗ್ರೆಸ್‌ ವಿರುದ್ಧದ ಈ ಹೋರಾಟ, ರೈತ ಮತ್ತು ಕಾರ್ಮಿಕ ಚಳವಳಿಗಳ ಮೂಲಕ ಎಡಪಕ್ಷಗಳು ಮುಂಚೂಣಿಗೆ ಬಂದವು. ಹಾಗೆ ಹುಟ್ಟಿದ ಎಡಪಂಥಿ ಪಕ್ಷಗಳಲ್ಲಿ ಹಲವಾರು ನಾಯಕರು ಬೆಳೆದರು.

ಜನತಾಪರಿವಾರಕ್ಕೆ ಬಲ :  ದಿನಕಳೆದಂತೆ ಕಾಂಗ್ರೆಸ್‌ ಅನ್ನು ಎದುರಿಸಲು ಎಡಪಕ್ಷದಲ್ಲಿ ಸಾಮರ್ಥ್ಯ ಕುಂದುತ್ತಿರುವಾಗ ಜನತಾ ಪರವಾರ ಹುಟ್ಟಿಕೊಂಡಿತು.

ಅವಿಭಜಿತ ಜಿಲ್ಲೆಯ ಜನತಾ ಪರವಾರ ಬಹಳ ಬಲಿಷ್ಠವಾಗಿ ಬೆಳೆಯಿತು. ಕಾಂಗ್ರೆಸ್‌ಗೆ ಪ್ರತಿರೋಧ ಒಡ್ಡುತ್ತಲೇ ತನ್ನ ಬೇರುಗಳನ್ನು ಗ್ರಾಮ ಮಟ್ಟದಲ್ಲೂ ಬೆಳೆಸಿಕೊಂಡಿತು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿ ನಸೀರ್‌ ಸಾಬ್‌ ಅವರು ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಪಂಚಾಯಿತಿಗಳು ಅಸ್ಥಿತ್ವಕ್ಕೆ ಬಂದಾಗ ಜನತಾ ಪರಿವಾರ ಇನ್ನೂ ಗಟ್ಟಿಯಾಯಿತು.

ಆಗ ಜಿಲ್ಲೆಯಲ್ಲಿ ಜನತಾ ಪರಿವಾರವನ್ನು ಬೆಳೆಸಿದವರಲ್ಲಿ ನಾಯಕರಲ್ಲಿ ಸಿ.ಬೈರೇಗೌಡ, ಚಿಂತಾಮಣಿಯ ಕೃಷ್ಣಾರೆಡ್ಡಿ, ಶಿಡ್ಲಘಟ್ಟದ ಮುನಿಶಾಮಿ, ರಮೇಶ್‌ ಕುಮಾರ್‌, ಚಿಕ್ಕಬಳ್ಳಾಪುರದ ಸಿ.ವೆಂಕಟರಾಯಪ್ಪ, ಜ್ಯೋತಿರೆಡ್ಡಿ, ವಿ.ಆರ್‌.ಸುದರ್ಶನ್‌, ಶ್ರೀನಿವಾಸಗೌಡ, ಮಾಲೂರಿನ ದ್ಯಾವೀರಪ್ಪ, ಬಿ.ಎಂ.ಕೃಷ್ಣಪ್ಪ ಪ್ರಮುಖರು.

ಕುಟುಂಬ ಪರಿವಾರವಾಗಿ ಬದಲಾವಣೆ :  ರಾಜ್ಯದಲ್ಲಿ ಜನತಾ ಪರಿವಾರವು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ಪರಿವಾರವಾಗಿ ಪರಿವರ್ತನೆಗೊಂಡ ನಂತರ ಸಿ.ಬೈರೇಗೌಡರು ಅಲ್ಲಿಂದ ಹೊರಬಿದ್ದು ಸಂಯುಕ್ತ ಜನತಾದಳದ ನಾಯಕರಾದರು. ಇವರ ಗರಡಿಯಲ್ಲೇ ಪಳಗಿದ ಶ್ರೀನಿವಾಸಗೌಡರು ಎಡಪಂಥೀಯ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಜನತಾ ಪರಿವಾರದಲ್ಲಿ ಶಾಸಕರಾಗಿ ಆಯ್ಕೆಯಾದರು. ಬೈರೇಗೌಡರ ನಂತರ ಜೆಡಿಎಸ್‌ ಒಳಬೇಗುದಿಯಲ್ಲಿ ಬೆಂದು ಹೋಗಿದ್ದ ಶ್ರೀನಿವಾಸಗೌಡರು ಎಸ್‌ಎಂ ಕೃಷ್ಣ ಅವರ ಕಾಲದಲ್ಲಿಯೇ ಕಾಂಗ್ರೆಸ್‌ಗೆ ಹೋಗಿದ್ದರು. ಅಲ್ಲಿ ಕೆ.ಎಚ್‌.ಮುನಿಯಪ್ಪ ಜತೆ ಮನಸ್ಥಾಪದಿಂದಾಗಿ ಮರಳಿ ಜೆಡಿಎಸ್‌ಗೆ ಬಂದಿದ್ದರು.

ಪ್ರಗತಿ ಪರ ಆಲೋಚನೆಗಳೊಂದಿಗೆ ಮಾಜಿ ಸಿಎಂ ದೇವರಾಜ ಅರಸು ಅವರ ಆಪ್ತವಲಯದಲ್ಲಿ ಗುರ್ತಿಸಿಕೊಂಡಿದ್ದ ರಮೇಶ್‌ ಕುಮಾರ್‌ ನಂತರ ಜನತಾ ಪರಿವಾರವನ್ನು ಅಪ್ಪಿಕೊಂಡರು. ಆದರೆ ಅಲ್ಲಿ ಉಂಟಾದ ಉಸಿರುಗಟ್ಟಿದ ವಾತಾವರಣದಿಂದ ಬೇಸತ್ತು ಹೊರ ಬಂದು ಕಾಂಗ್ರೆಸ್‌ ಸೇರಿದರು.

ಈಗ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾಗಿರುವ ಜಿ.ಕೆ.ವೆಂಟಶಿವಾರೆಡ್ಡಿ ಸಹ ಅನಿವಾರ‍್ಯ ಕಾರಣಕ್ಕೆ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ಗೆ ಬಂದರಾದರೂ ಅವರಿಗೆ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಪಕ್ಷದ ಕಾರ್ಯಕರ್ತರೇ ಹೇಳುತ್ತಾರೆ.

ಒಂದು ಕಾಲದಲ್ಲಿ ಜಾತ್ಯತೀತ ತತ್ವಗಳ ಅಡಿಯಲ್ಲಿ ಕಾಂಗ್ರೆಸ್‌ಗೆ ಸರಿಸಮನಾಗಿ ಜೆಡಿಎಸ್‌ಗೆ ಮತ ನೀಡಿ ಬೆಂಬಲಿಸುತ್ತಿದ್ದವರೆಲ್ಲ ಇತ್ತೀಚೆಗೆ ಅಲ್ಲಿ ನಡೆಯುತ್ತಿರುವ ಜಾತೀಯತೆ ಮತ್ತು ಕುಟುಂಬ ರಾಜಕಾರಣಕ್ಕೆ ಬೇಸತ್ತು ದೂರ ಸರಿದಿದ್ದಾರೆ. ಶ್ರೀನಿವಾಸಗೌಡರಂತಹ ಹಿರಿಯ ಅನುಭವಿ ರಾಜಕಾರಣಿಗಳು ಜೆಡಿಎಸ್‌ನಿಂದ ದೂರ ಆಗಿರುವುದರಿಂದ ಜಿಲ್ಲೆಯಲ್ಲಿ ಜೆಡಿಎಸ್‌ನ ಮುಂದಿನ ಭವಿಷ್ಯ ಮಂಕು ಕವಿದಂತಾಗಿದೆ ಜಿಲ್ಲೆಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

click me!