ರಾಜ್ಯ ಸರ್ಕಾರದಿಂದ ಆಡಳಿತ ಮಂಡಳಿ ರಚನೆಗೆ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹೀದ್ದೀನ್ ವಿರೋಧ, ಸಮಿತಿಯನ್ನು ವಿಸರ್ಜಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.20): ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠಕ್ಕೆ ಆಡಳಿತ ಮಂಡಳಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಿದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ ಕೇಳಿ ಬಂದಿದೆ. ಎಂಟು ಜನ ಸಮಿತಿಯಲ್ಲಿ ಎರಡು ಸಮುದಾಯಕ್ಕೆ ಸೇರಿದ ಜನರಿರಬೇಕಿತ್ತು. ಆದರೆ, ಒಂದೇ ಸಮುದಾಯಕ್ಕೆ ಸೇರಿದ ಏಳು ಜನರಿದ್ದಾರೆ. ಈ ಸಮಿತಿ ಮೇಲೆ ನಂಬಿಕೆ ಇಲ್ಲ. ಕೂಡಲೇ ಈ ಸಮಿತಿಯನ್ನ ಅನುರ್ಜೀತಗೊಳಿಸಬೇಕೆಂದು ಕೋಮು ಸೌಹಾರ್ದ ವೇದಿಕೆ ಆಗ್ರಹಿಸಿದೆ.
ಆಡಳಿತ ಮಂಡಳಿ ರಚನೆಗೆ ಕೋಮು ಸೌಹಾರ್ದ ವೇದಿಕೆ ವಿರೋಧ
ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿನುದ್ದಿನ್, ಸಮಿತಿಯಲ್ಲಿ ಏಳು ಮಂದಿ ಸದಸ್ಯರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಕಮಿಟಿಯನ್ನ ಕೂಡಲೇ ರದ್ದುಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸರ್ಕಾರ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಎಂಟು ಜನರ ಸದಸ್ಯರನ್ನೊಳಗೊಂಡ ಸಮಿತಿಯನ್ನ ರಚಿಸಿ ಆದೇಶಿಸಿದೆ. ಆದರೆ, ಮುಸ್ಲಿಂ ಸಮುದಾಯದ ಕೇವಲ ಒಬ್ಬರನ್ನ ಕಮಿಟಿ ಸದಸ್ಯರನ್ನಾಗಿ ನೇಮಿಸಿ, ಉಳಿದ 7 ಜನರನ್ನ ಒಂದೇ ಸಮುದಾಯಕ್ಕೆ ಸೇರಿದವರನ್ನ ನೇಮಿಸಿದೆ.
ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ, ಸರ್ಕಾರದಿಂದ ಮಹತ್ವದ ಆದೇಶ
ಈ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಾಲಿ ಕಮಿಟಿಯನ್ನ ಅನೂರ್ಜಿತಗೊಳಿಸಬೇಕು. ಎರಡು ಸಮುದಾಯಕ್ಕೆ ಸೇರಿದ ಸದಸ್ಯರನ್ನ ಸಮಾನ ರೀತಿ ಹಾಗೂ ಇಬ್ಬರು ಮಹಿಳೆಯನ್ನೊಳಗೊಂಡ ಪಾರದರ್ಶಕ ಸಮಿತಿಯನ್ನ ರಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕಮಿಟಿ 1989ರ ಧಾರ್ಮಿಕ ದತ್ತಿ ಆಯುಕ್ತರ ಆದೇಶಕ್ಕೆ ಪೂರಕವಾಗಿರಬೇಕು. ಇಲ್ಲವಾದಲ್ಲಿ ವೇದಿಕೆ ವತಿಯಿಂದ ಜನಪರ ಮತ್ತು ಕಾನೂನು ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.