ವಿಧಾನಸಭಾ ಚುನಾವಣೆಗೆ ಇನ್ನು ಮೂರು - ನಾಲ್ಕು ತಿಂಗಳುಗಳ ಕಾಲಾವಕಾಶವಿದ್ದು, ಈಗಾಗಲೇ ತಯಾರಿ ಆರಂಭಿಸಿರುವ ಪ್ರಮುಖ ರಾಜಕೀಯ ಪಕ್ಷಗಳಿಗೆ ಆಪರೇಷನ್ ಭೀತಿ ಕಾಡತೊಡಗಿದೆ.
-ಎಂ.ಅಫ್ರೋಜ್ ಖಾನ್
ರಾಮನಗರ (ಡಿ.06): ವಿಧಾನಸಭಾ ಚುನಾವಣೆಗೆ ಇನ್ನು ಮೂರು - ನಾಲ್ಕು ತಿಂಗಳುಗಳ ಕಾಲಾವಕಾಶವಿದ್ದು, ಈಗಾಗಲೇ ತಯಾರಿ ಆರಂಭಿಸಿರುವ ಪ್ರಮುಖ ರಾಜಕೀಯ ಪಕ್ಷಗಳಿಗೆ ಆಪರೇಷನ್ ಭೀತಿ ಕಾಡತೊಡಗಿದೆ.
ಗೂ (Election) ಮುನ್ನ ಪಕ್ಷವನ್ನು ತಳಮಟ್ಟ ಹಾಗೂ ನಾಯಕತ್ವ ಮಟ್ಟದಲ್ಲಿ ಬಲಪಡಿಸುವುದು(Congress) , ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಗುರಿ. ಹಾಗಾಗಿ ಅದು ಇತರೆ ಪಕ್ಷಗಳಲ್ಲಿನ ಜನ ಬೆಂಬಲವಿರುವ ಮುಖಂಡರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸಿವೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಪಾಲಿಗೆ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ತಾವು ಸ್ಪರ್ಧಿಸುವ ಕ್ಷೇತ್ರವಿರುವ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲಿಸಿಕೊಂಡು ತಮ್ಮ ಸಾಮಥ್ಯರ್ ಸಾಬೀತು ಪಡಿಸುವ ಸವಾಲಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಉಭಯ ಪಕ್ಷಗಳು ಸಾಂಪ್ರದಾಯಿಕ ಎದುರಾಳಿಗಳು. ಕೈ ಮತ್ತು ದಳದ ಕೋಟೆಯನ್ನು ಬೇಧಿಸಿ ಕಮಲ ಅರಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ಆರಂಭಿಸಿದೆ. ಇದಕ್ಕಾಗಿ ಜೆಡಿಎಸ್ - ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಮುಖಂಡರಿಗೆ ಗಾಳ ಹಾಕುತ್ತಿದೆ. ಇದಕ್ಕೆ ಪ್ರತಿಯಾಗಿ ಕೈ ದಳ ನಾಯಕರು ರಿವರ್ಸ್ ಆಪರೇಷನ್ನಲ್ಲಿ ಹಿಂದೆ ಬಿದ್ದಿಲ್ಲ.
ಕೈಯಿಂದ ಮುನಿದವರಿಗೆ ಗಾಳ:
ರಾಮನಗರ ಕ್ಷೇತ್ರ ದೇವೇಗೌಡರ ಕುಟುಂಬಕ್ಕೆ ರಾಜಕೀಯವಾಗಿ ಮರು ಜನ್ಮ ನೀಡಿದ ಅದೃಷ್ಟದ ಕ್ಷೇತ್ರ. ಈ ಮಣ್ಣಿನ ಗುಣ ತಮಗೆ ಅಧಿಕಾರ ಕೊಡಿಸುತ್ತದೆ ಎಂಬ ವಿಶ್ವಾಸದಿಂದಲೇ ಕುಮಾರಸ್ವಾಮಿರವರು ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರೀಕ್ಷೆಗೆ ಮುಂದಾಗುತ್ತಿದ್ದರು. ಆದರೆ, ಈ ಬಾರಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಫಿಕ್ಸ್ ಆಗಿದ್ದಾರೆ.
ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ತಾವೇ ಜೆಡಿಎಸ್ ಹುರಿಯಾಳೆಂದು ಹೇಳಿಕೊಂಡು ಕ್ಷೇತ್ರ ತುಂಬೆಲ್ಲ ಪ್ರವಾಸ ನಡೆಸುತ್ತಿದ್ದು, ಇವರಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಸಾಥ್ ನೀಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದರೆ ಜೆಡಿಎಸ್ ಪಕ್ಷ ಅನ್ಯ ಪಕ್ಷಗಳ ಮುಖಂಡರನ್ನು ಸೆಳೆಯಲು ಆರಂಭಿಸಿದೆ. ಕೈ ನಾಯಕರು ಕೂಡ ದಳಪತಿಗಳಿಂದ ಮುನಿದು ಮನೆ ಸೇರಿರುವ ಮುಖಂಡರಿಗೆ ಗಾಳ ಹಾಕಿದೆ. ಇನ್ನು ಪಕ್ಷ ಸಂಘಟನೆಗೆ ಸಮರ್ಥರೆನಿಸಿದ ಸೇನಾನಿಗಳನ್ನು ನೇಮಿಸಿಕೊಳ್ಳುವಲ್ಲಿ ಎಡವುತ್ತಲೇ ಇರುವ ಕಮಲ ಪಾಳಯ ಮೌನವಾಗಿದೆ.
ಅನ್ಯ ಪಕ್ಷದವರನ್ನು ಸೆಳೆಯಲು ಪೈಪೋಟಿ:
ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಮತ್ತು ಕಾಂಗ್ರೆಸ್ ನ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ರವರು ಅನ್ಯಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪೈಪೋಟಿಗೆ ಇಳಿದಿದ್ದಾರೆ. ಇವರಿಬ್ಬರ ಅಬ್ಬರದ ಎದುರು ಬಿಜೆಪಿ ನಾಯಕರು ಮಂಕಾಗಿದ್ದಾರೆ. ಮಂಜುನಾಥ್ ರವರು ಮನೆ ಮನೆಗೆ ಮಂಜಣ್ಣ ಹಾಗೂ ಬಾಲಕೃಷ್ಣರವರು ಜನಾಶೀರ್ವಾದ ಭೇಟಿಯ ಹೆಸರಿನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಇಬ್ಬರು ನಾಯಕರಿಗೂ ಅಭೂತ ಪೂರ್ವ ಸ್ವಾಗತ ದೊರಕುತ್ತಿದೆ. ಉಭಯ ನಾಯಕರು ಗ್ರಾಮದ ಪ್ರಮುಖರಿಗೆ ಹೂವಿನ ಹಾರ ಹಾಕಿ ಪಕ್ಷ ಸೇರ್ಪಡೆಗೆ ಆಹ್ವಾನ ನೀಡುತ್ತಿದ್ದಾರೆ. ಇನ್ನು ಆಡಳಿತರೂಢ ಬಿಜೆಪಿ ಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ.
ಪಕ್ಷಾಂತರದ ಗದ್ದಲವೇ ಇಲ್ಲ :
ಕನಕಪುರ ಕ್ಷೇತ್ರದ ಜತೆಗೆ ಜಿಲ್ಲೆಯ ಉಳಿದ ಮೂರು ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಗೆಲ್ಲಿಸಿ ಡಿ.ಕೆ.ಶಿವಕುಮಾರ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ. ಹೀಗಾಗಿ ಅವರಿಗೆ ತಮ್ಮ ಕ್ಷೇತ್ರಕ್ಕಿಂತ ಹೆಚ್ಚಾಗಿ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗಾಗಿ ರಣತಂತ್ರ ರೂಪಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಕಾರಣ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಪಕ್ಷದ ಪರವಾಗಿ ಪ್ರಚಾರ ರೂಪಿಸುವ ಹೊಣೆ ಹೆಗಲ ಮೇಲಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರ ಸಂಖ್ಯೆಯೇ ಹೆಚ್ಚಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ಹೆಸರು ಅಂತಿಮಗೊಳ್ಳದ ಕಾರಣ ಪಕ್ಷ ಸಂಘಟನೆಗೂ ಹಿನ್ನಡೆಯಾಗಿದೆ.
ಆಪರೇಷನ್ ಜೊತೆಗೆ ರಿವರ್ಸ್ ಆಪರೇಷನ್
ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಒಂದೆಡೆ ಅಪರೇಷನ್, ಮತ್ತೊಂದೆಡೆ ರಿವರ್ಸ್ ಆಪರೇಷನ್ ಹೆಚ್ಚಿದ್ದರೆ, ಮಗದೊಂದು ಕಡೆ ಮುಖಂಡರು - ಕಾರ್ಯಕರ್ತರನ್ನು ಹಿಡಿದಿಟ್ಡುಕೊಳ್ಳುವುದೇ ಪಕ್ಷಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಯೋಗೇಶ್ವರ್ ಕಳೆದ ಅರು ತಿಂಗಳಿನಿಂದ ಕ್ಷೇತ್ರದಲ್ಲೇ ಬೀಡು ಬಿಟ್ಟು ಬಿಜೆಪಿ ಸಂಘಟನೆ ಬಲಿಷ್ಠಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿರೋಧಿ ಪಾಳಯದವರನ್ನು ಸೆಳೆಯುವ ಮೂಲಕ ಆಪರೇಷನ್ ಕಮಲದಲ್ಲಿ ನಿರತರಾಗಿದ್ದಾರೆ.
ಯೋಗೇಶ್ವರ್ ರವರ ಸತತ ಆಪರೇಷನ್‌ನಿಂದ ಜೆಡಿಎಸ್ ಕೊಂಚ ಕಳೆಗುಂದಿತ್ತಾದರೂ, ಇದೀಗ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕ್ಷೇತ್ರ ಸಂಘಟನೆಯ ಹೊಣೆ ಹೊತ್ತ ಮೇಲೆ ಕಾರ್ಯಕರ್ತರಲ್ಲಿ ಕೊಂಚ ಹುರುಪು ಮೂಡಿದೆ. ಕೂಡ್ಲೂರು ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಜೆಡಿಎಸ್ ನಿಂದ ಆಪರೇಷನ್ ಕಾರ್ಯಾಚರಣೆ ಚುರುಕುಗೊಳ್ಳುವ ಸೂಚನೆ ನೀಡಿದೆ.
ಇನ್ನು ಕಾಂಗ್ರೆಸ್ ನಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸುವ ಕಾರ್ಯವಾಗಲಿ ಆಪರೇಷನ್ ಮಾತಾಗಲಿ ಕೇಳಿ ಬರುತ್ತಿಲ್ಲ. ಇರುವ ಕಾರ್ಯಕರ್ತರು ಕೈ ಬಿಟ್ಟು ಹೋಗದಂತೆ ಹಿಡಿದಿಟ್ಟುಕೊಳ್ಳುವ ಕಾರ್ಯದಲ್ಲಿ ಮಗ್ನವಾಗಿದೆ.