Karnataka Politics : ವಿಶ್ವನಾಥ್‌ ಮರಳಿ ಕಾಂಗ್ರೆಸ್‌ ಸೇರ್ಪಡೆ ಸಾಧ್ಯತೆ

By Kannadaprabha News  |  First Published Dec 6, 2022, 7:24 AM IST

ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎ.ಎಚ್‌. ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದು ಸದ್ಯದಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ.


ಬೆಂಗಳೂರು (ಡಿ.06): ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎ.ಎಚ್‌. ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದು ಸದ್ಯದಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಸೋಮವಾರ ದೆಹಲಿಯಲ್ಲಿ(AICC)  ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಅವರು ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದಾರೆ. ವಿಶ್ವನಾಥ್‌ (Vishwanath)  ಪುತ್ರ ಪೂರ್ವಜ್‌ ವಿಶ್ವನಾಥ್‌ ಈಗಾಗಲೇ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವುದರಿಂದ ಸದ್ಯದಲ್ಲೇ ವಿಶ್ವನಾಥ್‌ ಕೂಡ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos

undefined

ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ವಿಶ್ವನಾಥ್‌ ಕಳೆದ ವಿಧಾನಸಭೆ ವೇಳೆ ಜೆಡಿಎಸ್‌ ಪಕ್ಷ ಸೇರಿ ರಾಜ್ಯಾಧ್ಯಕ್ಷರೂ ಆಗಿದ್ದರು. ಜತೆಗೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಆಪರೇಷನ್‌ ಕಮಲದ ವೇಳೆ ಬಿಜೆಪಿಗೆ ಹಾರಿದ್ದ ಅವರು ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಬಳಿಕ ಪರಿಷತ್‌ ಸದಸ್ಯರಾಗಿದ್ದ ಅವರಿಗೆ ಬಿಜೆಪಿ ಕೊಟ್ಟಮಾತಿನಂತೆ ಸಚಿವ ಸ್ಥಾನ ನೀಡಿಲ್ಲ ಎಂಬ ಅಸಮಾಧಾನವಿದೆ. ಪಠ್ಯ ಪರಿಷ್ಕರಣೆ ವಿಚಾರ, ಹಿಜಾಬ್‌ ವಿಚಾರ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿಗೆ ವಿರುದ್ಧವಾದ ಹೇಳಿಕೆ ನೀಡುತ್ತಿದ್ದ ವಿಶ್ವನಾಥ್‌ ಇತ್ತೀಚೆಗೆ ಬಿಜೆಪಿ ಜತೆ ಅಂತರ ಕಾಯ್ದುಕೊಂಡಿದ್ದರು.

ಇನ್ನು ವಿಶ್ವನಾಥ್‌ ಪುತ್ರ ಪೂರ್ವಜ್‌ ವಿಶ್ವನಾಥ್‌ ನಂಜನಗೂಡು ತಾಲೂಕು ತಗಡೂರಿನಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಪಕ್ಷ ಸೇರುವ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿದ್ದರಾಮಯ್ಯ ಕೈ ಬಲಪಡಿಸಲು ಸದ್ಯದಲ್ಲೇ ಕಾಂಗ್ರೆಸ್‌ ಸೇರಲಿದ್ದಾರೆ. ಇದಕ್ಕೆ ತಂದೆಯೂ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರ ಖರ್ಗೆ ಭೇಟಿ ಮಹತ್ವ ಪಡೆದುಕೊಂಡಿದೆ.

ನಾನು ಕಾಂಗ್ರೆಸ್ ಸೇರುವುದು ಖಚಿತ

ಕೋಲಾರ: (ಡಿ. 05): ತಾವು ಕಾಂಗ್ರೆಸ್‌ ಪಕ್ಷಕ್ಕೆ ಸೇರುವುದು ನಿಶ್ಚಿತ, ಈಗಾಗಲೇ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಅವಕಾಶ ಸಿಕ್ಕರೆ 2023ರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವೆ ಎಂದು ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ (Congress)  ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar)  ಅವರನ್ನು ಭೇಟಿ ಮಾಡಿ ವಿಚಾರ ತಿಳಿಸಿದ್ದೇನೆ ಎಂದರು.

ತಾವು ಕಾಂಗ್ರೆಸ್‌ ಸೇರುವುದಕ್ಕೆ ಪಕ್ಷದ ಸ್ಥಳಿಯ ಮುಖಂಡರು ವಿರೋಧಿಸುತ್ತಿರುವ ಕುರಿತು ಹೆಚ್ಚಿಗೆ ಮಾತನಾಡಲು ಇಷ್ಟಪಡುವುದಿಲ್ಲ. ಈಗಾಗಲೇ ಈ ವಿಚಾರದಲ್ಲಿ ರಾಜ್ಯ ನಾಯಕರೊಂದಿಗೆ ಮಾತನಾಡಿದ್ದೇನೆ ಎಂದರು.

ರಾಜೀನಾಮೆ ದೊಡ್ಡ ವಿಷಯವಲ್ಲ

ನಾನು ಜೆಡಿಎಸ್‌ ಪಕ್ಷ ಬಿಡುವ ತೀರ್ಮಾನ ಮಾಡಿದ ಮೇಲೆ ರಾಜಿನಾಮೆ ಕೋಡೋದು ದೊಡ್ಡ ವಿಷಯ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜೆಡಿಎಸ್‌ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಚುನಾವಣೆಯಲ್ಲಿ ಗೆದ್ದಿಲ್ಲ, ರಾಜೀನಾಮೆ ಕೋಡು ಅನ್ನೋಕೆ ಅವರಾರ‍ಯರು. ಚುನಾವಣೆಯಲ್ಲಿ ಗೆದ್ದು ಹೇಳಿದ್ರೆ ನಾನು ಅವರ ಮಾತು ಕೇಳಬಹುದು. ನನಗೇನು ಜೆಡಿಎಸ್‌ ಅನಿವಾರ್ಯ ಅಲ್ಲ, ನಾನು ನಾನಾಗೇ ಜೆಡಿಎಸ್‌ ತೊರೆಯುತ್ತಿದ್ದೇನೆ ಎಂದು ಹೇಳಿದರು.

ಎಚ್ಡಿಕೆ ಕೊಳಚೆ ನೀರು ಎಂದಿದ್ದು ತಪ್ಪು

ಎಚ್‌.ಡಿ. ಕುಮಾರಸ್ವಾಮಿ ಕೆ.ಸಿ ವ್ಯಾಲಿ ನೀರಿನ ಬಗ್ಗೆ ಹಗುರವಾಗಿ ಮಾತನಾಡಿದರು, ಅದು ನನಗೆ ನೋವಾಯಿತು. ಕೆಸಿ ವ್ಯಾಲಿ ನೀರಿನಿಂದ ಜಿಲ್ಲೆಯ ರೈತರು ಬದುಕುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಹಾಗೆ ಮಾತನಾಡಬಹುದೇ ಎಂದರು.

ದೇವೇಗೌಡರ ಬಗ್ಗೆ ಗೌರವ ಇದೆ

ಎಚ್‌.ಡಿ.ದೇವೇಗೌಡರು ದೊಡ್ಡವರು ಅವರ ಬಗ್ಗೆ ಅಪಾರ ಗೌರವವಿದೆ. ಅವರು ಮಾಜಿ ಪ್ರಧಾನಿಗಳು ಅವರ ಬಗ್ಗೆ ಮಾತನಾಡುವಷ್ಟುದೊಡ್ಡವನು ನಾನಲ್ಲ ಎಂದರು.

ನನ್ನ ಸಿದ್ದರಾಮಯ್ಯ  ನಡುವೆ ಬಿರುಕಿಲ್ಲ

ಕಲಬುರಗಿ : ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಯಾವುದೇ ಬಿರುಕಿಲ್ಲ. ಸುಖಾಸುಮ್ಮನೆ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂದು ಮಾಧ್ಯಮದವರು ಬಿಂಬಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಕಲಬುರಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮಿಬ್ಬರ ಮಧ್ಯೆ ಬಿರುಕಿದೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯಲ್ಲಿ ಸದಾನಂದ ಗೌಡ, ಯತ್ನಾಳ್‌ ಹಾಗೂ ವಿಜಯೇಂದ್ರ ಮಧ್ಯೆ ಬಿರುಕಿಲ್ವಾ?. ಮೊದಲು ತಮ್ಮಲ್ಲಿರುವ ಬಿರುಕುಗಳನ್ನು ಬಿಜೆಪಿಯವರು ಮುಚ್ಚಿಕೊಳ್ಳಲಿ ಎಂದರು.

ಬಿಜೆಪಿಗೆ ಭಯ ಶುರುವಾಗಿದೆ:ಕಾರ್ಯಕರ್ತರೆಲ್ಲರೂ ಕಾಂಗ್ರೆಸ್‌ ಸೇರುತ್ತಿದ್ದಾರೆ. ಬಿಜೆಪಿಗೆ ಸರತಿಯಲ್ಲಿ ರೌಡಿಗಳು ಸೇರ್ಕೋತಿದ್ದಾರೆ. ಬಿಜೆಪಿಯವರು ಜನರ ಭಾವನೆಗಳ ಜೊತೆಗೆ ಆಟ ಆಡುತ್ತಿದ್ದಾರೆ. ಆದರೆ, ನಾವು ಜನರ ಬದುಕು ಕಟ್ಟುವ ಮಾತನ್ನಾಡುತ್ತಿದ್ದೇವೆ. ಹೀಗಾಗಿ, ಜನ ಈ ಬಾರಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ಗೆ ಪಟ್ಟಕಟ್ಟುವ ಸಂಕಲ್ಪ ಮಾಡಿದ್ದಾರೆ. ಇದನ್ನು ಕಂಡು ಬಿಜೆಪಿಗೆ ಈಗಲೇ ಭಯ ಶುರುವಾಗಿದೆ. ಅನೇಕರು ಕಾಂಗ್ರೆಸ್‌ಗೆ ಬರುವ ಆತುರದಲ್ಲಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರ ಹೆಸರುಗಳನ್ನು ನಾನು ಈಗಲೇ ಹೇಳುವುದಿಲ್ಲ ಎಂದರು.

click me!