ಜಾಧವ ನಗರದಲ್ಲಿ ಪ್ರತ್ಯಕ್ಷಗೊಂಡ ಚಿರತೆಯು ಗಾಲ್ಫ್ ಮೈದಾನದ ದಟ್ಟ ಅರಣ್ಯ ಪ್ರದೇಶಕ್ಕೆ ನುಸುಳಿ 16 ದಿನ ಕಳೆದಿದೆ.
ಬೆಳಗಾವಿ(ಆ.20): ನಗರದಲ್ಲಿ ಚಿರತೆ ಕಾಣಿಸಿಕೊಂಡು ಇಂದಿಗೆ ಬರೋಬ್ಬರಿ 16 ದಿನ ಕಳೆದರೂ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅರಣ್ಯ ಹಾಗೂ ಪೊಲೀಸ್ ಇಲಾಖೆಯು ಜಂಟಿಯಾಗಿ ಆಪರೇಷನ್ ಚೀತಾ ಕಾರ್ಯಾಚರಣೆ ಕೈಗೊಂಡಿದೆ. ಜಾಧವ ನಗರದಲ್ಲಿ ಪ್ರತ್ಯಕ್ಷಗೊಂಡ ಚಿರತೆಯು ಗಾಲ್ಫ್ ಮೈದಾನದ ದಟ್ಟ ಅರಣ್ಯ ಪ್ರದೇಶಕ್ಕೆ ನುಸುಳಿ 16 ದಿನ ಕಳೆದಿದೆ. ಗಾಲ್ಪ್ ಮೈದಾನದಲ್ಲೇ ಚಿರತೆ ಇರುವ ಸುಳಿವು ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿತ್ತು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಚಿರತೆ ಶೋಧ ಕಾರ್ಯಾಚರಣೆ ಕೈಗೊಂಡರೂ ಚಿರತೆ ಮಾತ್ರ ಸಿಗಲಿಲ್ಲ. ಬಳಿಕ ಚಿರತೆ ಪದೇ ಪದೆ ಸಾರ್ವಜನಿಕರಿಗೆ ಕಾಣಿಸಿಕೊಂಡಿದೆ. ಆದರೆ, ಈ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮಳೆ, ಗಾಲ್ಫ್ ಮೈದಾನ ಸುಮಾರು 250 ಎಕರೆ ಪ್ರದೇಶದಷ್ಟಿರುವ ಕಾರಣ ಅರಣ್ಯ ಇಲಾಖೆಯು ಚಿರತೆ ಹೋರಹೋಗಿದೆ ಎಂದು ಸ್ವಯಂ ನಿರ್ಧರಿಸಿ, ಗಂಭೀರ ಕಾರ್ಯಾಚರಣೆ ನಡೆಸುವ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಶುಕ್ರವಾರ ಕ್ಲಬ್ ರಸ್ತೆಯ ವನಿತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎದುರು ಚಿರತೆ ಓಡಾಡಿರುವುದು ಕಂಡುಬಂದಿದೆ. ಚಿರತೆ ಇರುವುದನ್ನು ನೋಡಿದ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಕಂಡು ವಿದ್ಯಾರ್ಥಿಗಳೆಲ್ಲರೂ ಭಯಭೀತಗೊಂಡಿದ್ದರು. ಬಳಿಕ ಅಲ್ಲಿಂದ ಚಿರತೆ ಕಾಲ್ಕಿತ್ತಿದೆ. ಚಿರತೆ ಓಡಾಡುತ್ತಿರುವ ಹಿನ್ನೆಲೆಯಲ್ಲಿ ವನಿತಾ ವಿದ್ಯಾಲಯದ ಗೇಟ್‌ನ್ನು ಬಂದ್ ಮಾಡಲಾಗಿತ್ತು. ಮಧ್ಯಾಹ್ನ ಶಾಲೆ ಬಿಟ್ಟಬಳಿಕ ಪೊಲೀಸರು ಮಕ್ಕಳನ್ನು ಬೇಗನೆ ಕರೆದುಕೊಂಡುಹೋಗುವಂತೆ ಸೂಚನೆ ನೀಡಿದರು. ಮಕ್ಕಳು ಭಯಭೀತಿಯಿಂದಲೇ ಮನೆಯತ್ತ ತೆರಳಿದರು.
Belagavi: ಬ್ಯಾಂಡ್ ಬಾರಿಸಿದ್ರು, ಸಿಡಿಮದ್ದು ಹಾರಿಸಿದ್ರು, ಏರ್‌ಗನ್ ಫೈರ್ ಮಾಡಿದ್ರು ಚಿರತೆ ಸುಳಿವಿಲ್ಲ!
ಪದೇ ಪದೆ ಚಿರತೆ ಕಾಣಿಸಿಕೊಂಡರೂ ಗಂಭೀರಪಾಗಿ ಪರಿಗಣಿಸಿದ ಅರಣ್ಯ, ಪೊಲೀಸ್ ಇಲಾಖೆ ಶುಕ್ರವಾರ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆ ಶೋಧಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಕಡೆಯ ಚಿರತೆ ಫೋಟೋ ಹರಿದಾಡುತ್ತಿವೆ. ಚಿರತೆ ಇರುವುದು ದೃಢಪಟ್ಟಿರುವುದರಿಂದ ನಗರದ ಜನತೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
ನಗರದ ಬೆಳಗಾವಿಯ ಕ್ಲಬ್‌ನಲ್ಲಿ ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಪರೇಷನ್ ಚಿತಾ ಎಂಬ ಹೆಸರಿನಲ್ಲಿ ಜಂಟಿಯಾಗಿ ಗಾಲ್ಫ್ ಮೈದಾನ ಪ್ರದೇಶದ ಸುತ್ತಲೂ ಸಿಡಿಮದ್ದು ಸಿಡಿಸಿ ಚಿರತೆ ಶೋಧ ಕಾರ್ಯಾಚರಣೆ ನಡೆಸಿದರು. ಗಾಲ್ಫ್ ಮೈದಾನ ಪ್ರದೇಶದ ಮೂಲೆ ಮೂಲೆಯಲ್ಲಿ ಚಿರತೆಯ ಶೋಧ ಕಾರ್ಯಾಚರಣೆ ನಡೆಸಿದ ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೆಲ ಕಡೆಗಳಲ್ಲಿ ಚಿರತೆಯ ಹೆಜ್ಜೆಯ ಗುರುತುಗಳು ಪತ್ತೆಯಾದವು. ವಿನಃ ಚಿರತೆ ಮಾತ್ರ ಕಣ್ಣಿಗೆ ಬಿಳಲಿಲ್ಲ.
ಆಪರೇಷನ್ ಚಿತಾ ಕಾರ್ಯಾಚರಣೆಯಲ್ಲಿ 100ಜನ ಪೊಲೀಸ್ ಸಿಬ್ಬಂದಿ, 100 ಜನ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದರು. ಅಲ್ಲದೆ, ಇಬ್ಬರು ಅರವಳಿಕೆ ಮದ್ದು ಸಮೇತ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕೈಯಲ್ಲಿ ಕೊಯಿತಾ, ಬಡಿಗೆ, ಹೆಲ್ಮೆಟ್ ಸೇರಿದಂತೆ ರಕ್ಷಣಾ ವಸ್ತುಗಳ ಸಮೇತ ಕಾರ್ಯಾಚರಣೆ ನಡೆಸಿದರೂ ಚಿರತೆ ಮಾತ್ರ ಕಣ್ಣಿಗೆ ಬಿಳಲಿಲ್ಲ. ಆ.5 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಇಲ್ಲಿನ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದಲ್ಲಿ ಮರೆಯಾಗಿದ್ದ ಚಿರತೆ ಅರಣ್ಯ ಇಲಾಖೆ ಗಾಲ್ಫ್ ಮೈದಾನದಲ್ಲಿ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಳಿಕ ಅರಣ್ಯ ಇಲಾಖೆಯ ಜತೆಗೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದ ಚಿರತೆ ಕಳೆದ ಎರಡು ದಿನಗಳ ಹಿಂದೆಯಷ್ಟೆ ಸ್ಥಳೀಯರಲ್ಲಿ ಕಾಣಿಸಿಕೊಂಡು ಮತ್ತೆ ಆತಂಕ ಸೃಷ್ಟಿಮಾಡಿತ್ತು.
ಚಿರತೆಯ ಕಾರಣಕ್ಕೆ ಜಿಲ್ಲಾಡಳಿತ ಶಾಲೆಗಳಿಗೆ ನೀಡಿದ್ದ ರಜೆಯನ್ನು ಹಿಂಪಡೆದ ಮರುದಿನವೇ ಚಿರತೆ ಪ್ರತ್ಯೇಕ್ಷವಾಗಿದ್ದು ನಗರದ ಜನತೆಯಲ್ಲಿ ಆತಂಕ ಉಂಟುಮಾಡಿತ್ತು. ಅಲ್ಲದೆ, ಚಿರತೆಯ ಕುರಿತು ನಗರದಲ್ಲಿ ಊಪಾಪೋಹಗಳು ಹೆಚ್ಚಾಗುತ್ತಿದ್ದವು. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂಡು ಚಿರತೆಯ ಫೋಟೋ ಹಾಕಿ ಬೆಳಗಾವಿ ನಗರದ ಚಿರತೆ ಎಂದು ಬಿಂಬಿಸಲಾಗುತ್ತಿತ್ತು. ಈ ಎಲ್ಲ ಊಹಾಪೋಹಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕೂಂಬಿಂಗ್ ನಡೆಸಿದರು.
ಚಿರತೆ ಭೀತಿಯಿಂದ 12 ಶಾಲೆಗಳಿಗೆ ರಜೆ: ಗ್ರಾಮಸ್ಥರಲ್ಲಿ ಭಯ
ಚಿರತೆ ಪ್ರತ್ಯೇಕ್ಷವಾಗಿರುವ ಕುರಿತು ನಗರದ ಜನರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬೇರೆ ಕಡೆಯ ಚಿರತೆಯ ಫೋಟೋ ವೈರಲ್ ಮಾಡುತ್ತಿದ್ದ ಪರಿಣಾಮ ಜನರಲ್ಲಿ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿದರೂ ಚಿರತೆಯ ಸುಳಿವು ಮಾತ್ರ ಸಿಕ್ಕಿಲ್ಲ. ಆದರೂ ನಿರಂತರವಾಗಿ ಗಾಲ್ಫ್ ದಾನದಲ್ಲಿ ಟ್ರ್ಯಾಪ್ ಕ್ಯಾಮರಾ ಹಾಗೂ ಚಿರತೆಗೆ ಇಟ್ಟ ಬೋನ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಅಂತ ಬೆಳಗಾವಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ ತಿಳಿಸಿದ್ದಾರೆ.
ಬೆಳಗಾವಿ ನಗರದ ಜನರ ಊಹಾಪೋಹಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಮತ್ತೊಮ್ಮೆ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿಲಾಯಿತು. 100 ಪೊಲೀಸ್ ಸಿಬ್ಬಂದಿಗಳೊಂದಿಗೆ ಏರ್‌ಗನ್ ಸೇರಿದಂತೆ ಸಿಡಿಮದ್ದು ಜತೆಗೆ ಕೂಂಬಿಂಗ್ ಮಾಡಲಾಯಿತು. ಚಿರತೆ ಸಿಗುವವರೆಗೂ ಕಾರ್ಯಾಚರಣೆ ನಿಲ್ಲುವುದಿಲ್ಲ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಅಂತ ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.