ಹಾಸಿಗೆ ನೀಡದ ಅಪೊಲೋ, ವಿಕ್ರಂ ಆಸ್ಪತ್ರೆ ಒಪಿಡಿ ಬಂದ್‌

By Kannadaprabha NewsFirst Published Jul 15, 2020, 7:40 AM IST
Highlights

ಕೋವಿಡ್‌ ಚಿಕಿತ್ಸೆಗೆ ಶೇಕಡ 50ರಷ್ಟುಹಾಸಿಗೆ ಮೀಸಲಿಟ್ಟು ಅದರಲ್ಲಿ ಅರ್ಧದಷ್ಟುಹಾಸಿಗೆಗಳಲ್ಲಿ ಸರ್ಕಾರ ಕಳುಹಿಸುವ ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂಬ ಆದೇಶ ಪಾಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕೊನೆಗೂ ಕಾನೂನು ಅಸ್ತ್ರ ಪ್ರಯೋಗಿಸಿದ್ದು, ನಗರದ ಎರಡು ಪ್ರತಿಷ್ಠಿತ ಆಸ್ಪತ್ರೆಗಳ ಒಪಿಡಿ ಬಂದ್‌ ಮಾಡಲು ಆದೇಶಿಸಿದೆ.

ಬೆಂಗಳೂರು(ಜು.15): ಕೋವಿಡ್‌ ಚಿಕಿತ್ಸೆಗೆ ಶೇಕಡ 50ರಷ್ಟುಹಾಸಿಗೆ ಮೀಸಲಿಟ್ಟು ಅದರಲ್ಲಿ ಅರ್ಧದಷ್ಟುಹಾಸಿಗೆಗಳಲ್ಲಿ ಸರ್ಕಾರ ಕಳುಹಿಸುವ ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂಬ ಆದೇಶ ಪಾಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕೊನೆಗೂ ಕಾನೂನು ಅಸ್ತ್ರ ಪ್ರಯೋಗಿಸಿದ್ದು, ನಗರದ ಎರಡು ಪ್ರತಿಷ್ಠಿತ ಆಸ್ಪತ್ರೆಗಳ ಒಪಿಡಿ ಬಂದ್‌ ಮಾಡಲು ಆದೇಶಿಸಿದೆ.

ಆದೇಶ ಪಾಲಿಸದ ಹಿನ್ನೆಲೆಯಲ್ಲಿ ನಗರದ ಜಯನಗರ ಅಪೊಲೋ ಸ್ಪೆಷಿಯಾಲಿಟಿ ಆಸ್ಪತ್ರೆ ಮತ್ತು ಮಿಲ್ಲ​ರ್‍ಸ್ ರಸ್ತೆಯ ವಿಕ್ರಂ ಆಸ್ಪತ್ರೆಗೆ ಸೋಮವಾರ ನೋಟಿಸ್‌ ನೀಡಿದ್ದ ಸರ್ಕಾರ, ನೋಟಿಸ್‌ಗೂ ಉತ್ತರ ನೀಡದ ಈ ಎರಡೂ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನನ್ನು (ಒಪಿಡಿ)ಯನ್ನು 48 ಗಂಟೆಗಳ ಕಾಲ ಬಂದ್‌ ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಮಂಗಳವಾರ ಆದೇಶ ಮಾಡಿದ್ದಾರೆ.

ನಮ್ಮ ಮೆಟ್ರೋ ಕಾಮಗಾರಿ ಮಾಡಿದ 80 ಗುತ್ತಿಗೆ ಕಾರ್ಮಿಕರಿಗೆ ಕೊರೋನಾ

ಶೇ.50ರಲ್ಲಿ ಅರ್ಧದಷ್ಟುಹಾಸಿಗೆಗಳನ್ನು ಸರ್ಕಾರ ಕಳುಹಿಸಿಕೊಡುವ ಸೋಂಕಿತರನ್ನು ದಾಖಲಿಸಿಕೊಂಡು ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಚಿಕಿತ್ಸೆ ನೀಡಬೇಕೆಂದು ಜೂನ್‌ 29ರಂದು ಆದೇಶ ಮಾಡಲಾಗಿದೆ. ಆದರೆ, ಈ ವರೆಗೂ ಬಹುತೇಕ ಖಾಸಗಿ ಆಸ್ಪತ್ರೆಗಳು ಈ ಆದೇಶವನ್ನೇ ಪಾಲಿಸದೆ ನಿರ್ಲಕ್ಷ್ಯ ವಹಿಸಿವೆ. ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿ ಪರವಾನಗಿ ರದ್ದುಪಡಿಸುವುದಾಗಿ ಸರ್ಕಾರ ಎಚ್ಚರಿಕೆಯನ್ನೂ ನೀಡಿದೆ.

ಸರ್ಕಾರದ ಆದೇಶ ಪಾಲಿಸದ ಅಪೊಲೋ ಮತ್ತು ವಿಕ್ರಂ ಆಸ್ಪತ್ರೆಗಳಿಗೆ ಸೋಮವಾರ ಜಿಲ್ಲಾಧಿಕಾರಿಗಳು ನೋಟಿಸ್‌ ಜಾರಿಗೊಳಿಸಿ ಮಂಗಳವಾರ ಸಂಜೆಯೊಳಗೆ ಸಮಜಾಯಿಷಿ ನೀಡಲು ಗಡುವು ನೀಡಿದ್ದರು. ಆದರೆ, ಆಸ್ಪತ್ರೆಗಳಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ 48 ಗಂಟೆಗಳ ಕಾಲ ಒಪಿಡಿ ಬಂದ್‌ ಮಾಡಲು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಅಪೊಲೋ ಆಸ್ಪತ್ರೆ ಸ್ಪಷ್ಟನೆ

ಜಯನಗರ ಶಾಖೆ ಅಪೊಲೋ ಸ್ಪೆಷಾಲಿಟಿ ಆಸ್ಪತ್ರೆ ಆಡಳಿತ ಮಂಡಳಿ ತಾವು ಸರ್ಕಾರದ ಯಾವುದೇ ಆದೇಶ ಉಲ್ಲಂಘಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಪೊಲೋ ಆಸ್ಪತ್ರೆ 100 ಹಾಸಿಗೆಯ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದೆ. ಆದರೆ, ಸಿಬ್ಬಂದಿ ಕೊರತೆಯಿಂದ ಸದ್ಯ 60 ಹಾಸಿಗೆಗೆ ಸೀಮಿತಗೊಳಿಸಲಾಗಿದೆ. ಅದರಲ್ಲಿ 60 ಹಾಸಿಗೆಗಳನ್ನೂ ಕೊರೋನಾ ರೋಗಿಗಳಿಗೆ ಮೀಸಲಿಡಲಾಗಿದೆ.

9 ದಿನ ಚಿಕಿತ್ಸೆಗೆ 9 ಲಕ್ಷ ಕೇಳಿದ ಖಾಸಗಿ ಆಸ್ಪತ್ರೆ..!

ಅಪೊಲೋ ಆಸ್ಪತ್ರೆಯನ್ನು ಕೋವಿಡ್‌ ಕೇರ್‌ ಆಸ್ಪತ್ರೆಯಾಗಿ ಘೋಷಿಸಿದ 24 ಗಂಟೆಯೊಳಗೇ ಪೂರ್ತಿ ಹಾಸಿಗೆಗಳು ಭರ್ತಿಯಾಗಿವೆ. ಬಿಬಿಎಂಪಿ 9 ಮಂದಿಗೆ ಸೂಚಿಸಿದೆ. ಅಲ್ಲದೆ ಐಎಲ್‌ಐ, ಸಾರಿ ಹಾಗೂ ಇತರೆ ಸಮಸ್ಯೆಯಿಂದ ಬಳಲುತ್ತಿದ್ದ 40 ಮಂದಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ಹಾಸಿಗೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮಾರ್ಗಸೂಚಿಯನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳು ಆಗಮಿಸಿ ಸತ್ಯ ಪರಿಶೋಧನೆ ಮಾಡಬಹುದು ಎಂದು ಅಪೊಲೋ ಆಸ್ಪತ್ರೆಗಳ ಘಟಕ ಮುಖ್ಯಸ್ಥ (ಜಯನಗರ) ಡಾ.ಗೋವಿಂದಯ್ಯ ಯತೀಶ್‌ ಸ್ಪಷ್ಟಪಡಿಸಿದ್ದಾರೆ.

click me!