ಬರದಿಂದ ತತ್ತರಿಸುತ್ತಿರುವ ರೈತರಿಗೆ ಮತ್ತೊಂದೆಡೆ ವಿದ್ಯುತ್ ಶಾಕ್

By Kannadaprabha News  |  First Published Nov 8, 2023, 9:49 AM IST

ರಾಜ್ಯದಲ್ಲಿ ಬರಗಾಲವಿದ್ದರೂ ಕೂಡ ಸರ್ಕಾರ ರೈತರಿಗೆ ವಿದ್ಯುತ್ ಶಾಕ್ ನೀಡುತ್ತಿದ್ದು, ರೈತರಿಗೆ ಕೇವಲ 3 ಗಂಟೆ ವಿದ್ಯುತ್ ನೀಡುತ್ತಿದೆ ಎಂದು ಶಾಸಕ ಹಾಗೂ ಬಿಜೆಪಿ ನಾಯಕ ಬಸವನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು.


  ಬೆಟ್ಟದಪುರ :  ರಾಜ್ಯದಲ್ಲಿ ಬರಗಾಲವಿದ್ದರೂ ಕೂಡ ಸರ್ಕಾರ ರೈತರಿಗೆ ವಿದ್ಯುತ್ ಶಾಕ್ ನೀಡುತ್ತಿದ್ದು, ರೈತರಿಗೆ ಕೇವಲ 3 ಗಂಟೆ ವಿದ್ಯುತ್ ನೀಡುತ್ತಿದೆ ಎಂದು ಶಾಸಕ ಹಾಗೂ ಬಿಜೆಪಿ ನಾಯಕ ಬಸವನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು.

ಬೆಟ್ಟದಪುರ ಕನ್ನಡ ಮಠದ ಆವರಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ತಂಡ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಬರ ಪರಿಹಾರ ವಿತರಿಸಿ, ಮನ್ನಾ ಮಾಡಬೇಕು ಆಗ್ರಹಿಸಿದರು.

Latest Videos

undefined

ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ ಎಂದು ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸದಾ ನಿಮ್ಮೊಂದಿಗೆ ನಾವು ಇರುತ್ತೇವೆ. ರಾಜ್ಯ ಸರ್ಕಾರ ಸಮರ್ಪಕವಾಗಿ ವಿದ್ಯುತ್ ಪೂರೈಸದೆ ಬೆಳೆಗಳಿಗೆ ಸರಿಯಾದ ನೀರು ಹಾಯಿಸಲು ಸಾಧ್ಯವಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಅಧ್ಯಯನ ನಡೆಸದೆ ಗ್ಯಾರಂಟಿ ಗುಂಗಿನಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕರ್ನಾಟಕದ ಜನತೆಗೆ ಉಚಿತ ವಿದ್ಯುತ್‌ ಯೂನಿಟ್‌ಗಳ ಮಿತಿ ಹೆಚ್ಚಿಸಿದ ಸರ್ಕಾರ! ಯಾರಿಗೆಲ್ಲಾ ಅನ್ವಯ ಗೊತ್ತಾ?

ತಾಲೂಕಿನಲ್ಲಿ ಇಷ್ಟೆಲ್ಲಾ ಬರದಿಂದ ಬೆಳೆಗಳು ನಾಶವಾಗಿದ್ದರೂ, ಸರ್ಕಾರದ ಯಾವ ಸಚಿವರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ, ಬರದ ಅಧ್ಯಯನ ಮಾಡದೆ ಅಂದಾಜಿನಲ್ಲಿ ಲೆಕ್ಕ ಕೊಡುತ್ತಿದ್ದಾರೆ. ಮುಂದಿನ ಅಧಿವೇಶದಲ್ಲಿ ನಮ್ಮ ಬಿಜೆಪಿಯ 66 ಶಾಸಕರು ಬರಗಾಲದ ಬಗ್ಗೆ ಚರ್ಚಿಸಿ, ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

2013 ರಿಂದ 18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಸುಮಾರು 2,550 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಸುಮಾರು 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ವಿಚಾರಿಸಿದರೆ ಸಚಿವ ಶಿವಾನಂದ ಪಾಟೀಲ್ 5 ಲಕ್ಷ ಪರಿಹಾರ ಕೊಡುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನು ನಿಂದಿಸುತ್ತಾ ಮುಖ್ಯಮಂತ್ರಿ ಗಾದಿಯ ಬಗ್ಗೆ ಚರ್ಚೆ ಮಾಡುತ್ತಾರೆ. ಇವರಿಗೆ ರಾಜ್ಯದ ಬರದ ಪರಿಸ್ಥಿತಿಯ ಬಗ್ಗೆ ಅರಿವೇ ಇಲ್ಲ. ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳುತ್ತಾರೆ ಹೊರತು ನೀಡಿರುವ ಗ್ಯಾರಂಟಿಯನ್ನು ಸಂಪೂರ್ಣಗೊಳಿಸಿಲ್ಲ ಎಂದು ಅವರು ಟೀಕಿಸಿದರು.

ಇದೇ ಸಂದರ್ಭದಲ್ಲಿ ಪಿರಿಯಾಪಟ್ಟಣ ತಾಲೂಕಿನ ಅಲ್ಪ ನಾಯಕನಹಳ್ಳಿಯಲ್ಲಿ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಮಂಜುನಾಥ್ ಅವರ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ 50 ಸಾವಿರ ಪರಿಹಾರ ನೀಡಿ ರೈತನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಮಾಜಿ ಸಂಸದ ಸಿ.ಎಚ್. ವಿಜಯಶಂಕರ್, ಮಾಜಿ ಸಚಿವ ಎನ್. ಮಹೇಶ್, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ನಿರಂಜನ್ ಕುಮಾರ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ತಾಲೂಕು ಅಧ್ಯಕ್ಷ ಎಂ.ಎಂ. ರಾಜೇಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್ ಕುಮಾರ್ ಇದ್ದರು.

click me!