ಈರುಳ್ಳಿ ಬೆಲೆ ಕೇಳಿ ಕಂಗಾಲಾದ ಗ್ರಾಹಕ: ಇನ್ನೂ ಹೆಚ್ಚಾಗುವ ಸಾಧ್ಯತೆ

By Kannadaprabha News  |  First Published Oct 23, 2020, 9:42 AM IST

ಪೂರೈಕೆ ಕೊರತೆ, ಮಧ್ಯವರ್ತಿಗಳ ಹಾವಳಿಯಿಂದ ಬೆಲೆ ಏರಿಕೆ| ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳ ಸಾಧ್ಯತೆ| ಸಾಗಣೆ ವೆಚ್ಚ, ಕೂಲಿ ಎಲ್ಲ ಸೇರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಚಿಲ್ಲರೆ ವ್ಯಾಪಾರಿಗಳು| ಬೆಲೆ ಏರಿಕೆಯ ಖುಷಿಯಲ್ಲಿದ್ದ ರೈತರಿಗೆ ನಿರಾಸೆ| ಮಧ್ಯವರ್ತಿಗಳ ಪಾಲಾಗುತ್ತಿರುವ ಲಾಭ| 


ಬೆಂಗಳೂರು(ಅ.23): ಪೂರೈಕೆ ಕೊರತೆ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ದಿನ ನಿತ್ಯ ಅಡುಗೆಯಲ್ಲಿ ಬಳಸುವ ಈರುಳ್ಳಿ ಬೆಲೆ ಕೆ.ಜಿ.ಗೆ 100 ರು. ಗಡಿ ದಾಟಿದೆ. ಚೋದ್ಯವೆಂದರೆ, ಬೆಲೆ ದುಪ್ಪಟ್ಟಾಗಿದ್ದರೂ ರೈತರಿಗೆ ಮಾತ್ರ ಲಾಭ ಸಿಗುತ್ತಿಲ್ಲ!

ಕಳೆದ ಒಂದು ವಾರದಿಂದ ಸತತವಾಗಿ ಏರಿಕೆ ಕಾಣುತ್ತಿರುವ ಈರುಳ್ಳಿ ಬೆಲೆ ಗುರುವಾರ ಕೆ.ಜಿ.ಗೆ 120 ರು. ವರೆಗೆ ಬೆಲೆ ದಾಖಲಿಸಿಕೊಂಡಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 70 ರಿಂದ 75 ರು. ನಿಗದಿಯಾಗಿದೆ. ಪ್ರದೇಶವಾರು ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ ಪ್ರತಿ ಕೆ.ಜಿ. 40 ರು.ನಿಂದ 120 ರು.ವರೆಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Tap to resize

Latest Videos

ದಲ್ಲಾಳಿಗಳಿಗೆ ಬಂಪರ್‌:

ಚಿಲ್ಲರೆ ವ್ಯಾಪಾರಿಗಳು ಸಾಗಣೆ ವೆಚ್ಚ, ಕೂಲಿ ಎಲ್ಲ ಸೇರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಬೆಲೆ ಏರಿಕೆಯ ಖುಷಿಯಲ್ಲಿದ್ದ ರೈತರಿಗೆ ನಿರಾಸೆಯಾಗಿದ್ದರೆ, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಈ ಮಧ್ಯೆ ಸಂಪೂರ್ಣ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ

ಭಾರೀ ಮಳೆಗೆ ನೆಲಕಚ್ಚಿದ ಬೆಳೆ, ಗಗನಕ್ಕೇರಿದ ಈರುಳ್ಳಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು..!

‘ಜನರು ಕೊಳ್ಳುವ ಬೆಲೆ ನಮಗೆ ಎಪಿಎಂಸಿಯಲ್ಲಿ ಸಿಗುವುದಿಲ್ಲ. ಹೊರಗಡೆ ಕೆ.ಜಿ.ಗೆ 100 ರು. ಇದ್ದರೆ ನಮಗೆ 50-60 ರು. ಸಿಕ್ಕಿದರೆ ಹೆಚ್ಚು. ಶೇ.80 ರಷ್ಟು ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು’ ಎಂದು ರೈತರು ಮನವಿ ಮಾಡಿದ್ದಾರೆ.

ಗುರುವಾರ ಬೆಂಗಳೂರು ಎಪಿಎಂಸಿಗೆ 44,718 ಬ್ಯಾಗ್‌ (ಒಂದು ಬ್ಯಾಗ್‌ 50 ಕೆ.ಜಿ.) ಈರುಳ್ಳಿ ಬಂದಿದೆ. ದಾಸನಪುರ ಮಾರುಕಟ್ಟೆಗೆ 2,936 ಬ್ಯಾಗ್‌ ಈರುಳ್ಳಿ ಬಂದಿದೆ. ಎಪಿಎಂಸಿಯಲ್ಲಿ ಅತ್ಯುತ್ತಮ ಈರುಳ್ಳಿ ಕ್ವಿಂಟಾಲ್‌ಗೆ 7000 ದಿಂದ 7500 ರು. ಬೆಲೆ ನಿಗದಿಯಾಗಿದೆ. ಮಧ್ಯಮ 6000-6500 ರು., ಸಾಧಾರಣ ಈರುಳ್ಳಿ ಕ್ವಿಂಟಾಲ್‌ಗೆ 2000-5000 ರು. ವರೆಗಿದೆ.

ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ನಾಶವಾಗಿದೆ. ಸದ್ಯ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳ ಗೋದಾಮಿನಲ್ಲಿ ದಾಸ್ತಾನಿರುವ ಈರುಳ್ಳಿ ಮಾತ್ರ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ ಮಾರುಕಟ್ಟೆಗೆ ಬರುತ್ತಿರುವ ಬೆಳೆಯೂ ಉತ್ತಮ ಸ್ಥಿತಿಯಲ್ಲಿಲ್ಲ. ಹೊಸ ಬೆಳೆ ಬರುವವರೆಗೆ ಬೆಲೆ ಏರಿಕೆ ಸಾಮಾನ್ಯ. ಅತಿ ಹೆಚ್ಚು ಮಳೆಯಾದರೆ ಇನ್ನಷ್ಟು ಬೆಲೆ ಏರಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಈಜಿಪ್ಟ್‌ ಈರುಳ್ಳಿ ಕೇಳುವವರಿಲ್ಲ!

ರಾಜ್ಯದಲ್ಲಿ ಈರುಳ್ಳಿ ಬೆಲೆ ಏರಿಕೆ ನಡುವೆ ಈಜಿಪ್ಟ್‌ ಈರುಳ್ಳಿ ಬಂದಿದೆ. ಆದರೆ, ಕೇಳುವವರಿಲ್ಲ. ಸದ್ಯ 25 ಟನ್‌ ಈರುಳ್ಳಿ ಬಂದಿದೆ. ಕ್ವಿಂಟಾಲ್‌ಗೆ 6000 ರು. ಬೆಲೆ ನಿಗದಿಯಾಗಿದೆ. ಮಾರುಕಟ್ಟೆಯಲ್ಲಿ ಈಜಿಪ್ಟ್‌ ಈರುಳ್ಳಿಗೆ ಬೇಡಿಕೆ ಕುದುರಿಲ್ಲ. ಸ್ಥಳೀಯವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಈರುಳ್ಳಿ ಮಾರಾಟವಾಗುತ್ತದೆ. ಆದರೆ, ಈಜಿಪ್ಟ್‌ ಈರುಳ್ಳಿಯಲ್ಲಿ ನೀರಿನಾಂಶ ಹೆಚ್ಚಿದ್ದು, ರುಚಿ ಕಡಿಮೆ. ಹೀಗಾಗಿ ಹೋಟೆಲ್‌ನವರು ಸಹ ಖರೀದಿಸಲು ಆಸಕ್ತಿ ತೋರುವುದಿಲ್ಲ. ಕೆಲವರು ಸ್ವಲ್ಪ ಮಟ್ಟಿಗೆ ಮಾತ್ರ ತರಿಸಿದ್ದಾರೆ. ಖರೀದಿಯಾಗಲಿಲ್ಲ ಅಂದರೆ ವಾಪಸ್‌ ಕಳಿಸುತ್ತಾರೆ ಎಂದು ಯಶವಂತಪುರ ಎಪಿಎಂಸಿ ಈರುಳ್ಳಿ ವ್ಯಾಪಾರಿ ರವಿಶಂಕರ್‌ ಹೇಳಿದರು.
 

click me!