ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಹೊಸ ಠಾಣೆ: ಗೃಹ ಸಚಿವ ಬೊಮ್ಮಾಯಿ

By Kannadaprabha NewsFirst Published Oct 23, 2020, 8:15 AM IST
Highlights

ಗೋವಿಂದಪುರದಲ್ಲಿ ಮತ್ತೊಂದು ಪೊಲೀಸ್‌ ಸ್ಟೇಷನ್‌| ಈ 3 ಠಾಣೆಗಳನ್ನೊಳಗೊಂಡ ಎಸಿಪಿ ಮಟ್ಟದ ಉಪವಿಭಾಗ ರಚನೆ| ನಗರ ಪೊಲೀಸ್‌ ವ್ಯವಸ್ಥೆ ಪುನಾರಚನೆಗೆ ಸರ್ಕಾರ ನಿರ್ಧಾರ| ಈ ಸಲುವಾಗಿ ಆಯುಕ್ತ ಕಮಲ್‌ ಪಂತ್‌ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿದ್ದು, ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮ: ಬೊಮ್ಮಾಯಿ| 

ಬೆಂಗಳೂರು(ಅ.23): ಇತ್ತೀಚೆಗೆ ಗಲಭೆಗೆ ತುತ್ತಾಗಿದ್ದ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಪ್ರದೇಶಕ್ಕೆ ಹೊಸದಾಗಿ ಎಸಿಪಿ ಮಟ್ಟದ ಉಪವಿಭಾಗ ಹಾಗೂ ಠಾಣೆ ಸ್ಥಾಪನೆಗೆ ಸರ್ಕಾರ ಆದೇಶಿಸಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ಚಿತ್ರಕಲಾ ಪರಿಷತ್‌ನಲ್ಲಿ ಪೊಲೀಸ್‌ ಸಂಸ್ಮರಣಾ ದಿನಾಚರಣೆ ನಿಮಿತ್ತ ಗುರುವಾರ ಆಯೋಜಿಸಲಾಗಿದ್ದ ಕೊರೋನಾ ಹೋರಾಟದಲ್ಲಿ ಮಡಿದ ಪೊಲೀಸರ ಭಾವಚಿತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದರು.

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಠಾಣೆಗಳ ಸರಹದ್ದಿನ ಕೆಲ ಪ್ರದೇಶಗಳನ್ನು ಬೇರ್ಪಡಿಸಿ ಗೋವಿಂದಪುರದಲ್ಲಿ ಹೊಸ ಠಾಣೆಯನ್ನು ಸ್ಥಾಪಿಸಲಾಗುತ್ತದೆ. ಈ ಮೂರು ಠಾಣೆಗಳನ್ನೊಳಗೊಂಡ ಎಸಿಪಿ ಮಟ್ಟದ ಉಪ ವಿಭಾಗ ರಚಿಸಲಾಗಿದೆ. ಇದರಿಂದ ಆ ಭಾಗದಲ್ಲಿ ಅಪರಾಧ ಕೃತ್ಯಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಈಗಾಗಲೇ ಅಗತ್ಯ ಸಿಬ್ಬಂದಿ ನಿಯೋಜನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕೆಲವೇ ದಿನಗಳಲ್ಲಿ ಹೊಸ ಠಾಣೆ ಮತ್ತು ಉಪ ವಿಭಾಗ ಕಾರ್ಯಾರಂಭಿಸಲಿದೆ ಎಂದು ಹೇಳಿದರು.

ಕೇಂದ್ರದ ಬಳಿ 11,432 ಕೋಟಿ ಜಿಎಸ್‌ಟಿ ಬಾಕಿ ಕೇಳಿದ ಬೊಮ್ಮಾಯಿ

ಆಯುಕ್ತರ ಮಟ್ಟದ ಸಮಿತಿ:

ನಗರ ಪೊಲೀಸ್‌ ವ್ಯವಸ್ಥೆ ಪುನಾರಚನೆಗೆ ಸರ್ಕಾರ ನಿರ್ಧರಿಸಿದೆ. ಈ ಸಲುವಾಗಿ ಆಯುಕ್ತ ಕಮಲ್‌ ಪಂತ್‌ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿದ್ದು, ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಪ್ರತಿ ಠಾಣೆಗಳ ವಿಸ್ತಾರ, ಅಲ್ಲಿರುವ ಜನಸಂಖ್ಯೆ, ಅದಕ್ಕೆ ತಕ್ಕಂತೆ ಪೊಲೀಸ್‌ ಬಲ ಹಾಗೂ ಮೂಲಭೂತ ಸೌಲಭ್ಯಗಳ ಸೇರಿದಂತೆ ಇತರೆ ಅಂಶಗಳನ್ನಾಧರಿಸಿ ಠಾಣೆಗಳ ಪುರ್ನಚನೆ ಮಾಡಲಾಗುತ್ತದೆ. ನಗರದಲ್ಲಿ ಡ್ರಗ್ಸ್‌ ದಂಧೆ, ರೌಡಿಸಂ ಹೀಗೆ ಪ್ರತಿಯೊಂದ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಿಸಿಬಿಗೆ ಮತ್ತಷ್ಟು ಬಲ

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಹಾಗೂ ಡ್ರಗ್ಸ್‌ ಪ್ರಕರಣಗಳ ಸೇರಿದಂತೆ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳ ತನಿಖೆ ನಡೆಸುವ ಸಿಸಿಬಿ ಬಲರ್ವಧನೆಗೆ ಸಹ ಸರ್ಕಾರ ಪ್ರಾಮುಖ್ಯತೆ ನೀಡಿದೆ. ಈ ಸಂಬಂಧ ಸಿಸಿಬಿಗೆ ಹೊಸದಾಗಿ ಓರ್ವ ಎಸಿಪಿ, ಮೂವರು ಇನ್ಸ್‌ಪೆಕ್ಟರ್‌ಗಳು, ಆರು ಸಬ್‌ ಇನ್ಸ್‌ಪೆಕ್ಟರ್‌ಗಳನ್ನು ನೇಮಿಸಲು ಆದೇಶಿಸಲಾಗಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.

ರಾಜರಾಜೇಶ್ವರಿ ನಗರದ ಕ್ಷೇತ್ರ ಉಪ ಚುನಾವಣೆ ಶಾಂತಯುತವಾಗಿ ನಡೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ. ತಂಟೆ-ತಕಾರರು ತೆಗೆದು ಗದ್ದಲ ಸೃಷ್ಟಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹೆಚ್ಚಿನ ಪೊಲೀಸ್‌ ನಿಯೋಜನೆಗೆ ಸಹ ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ. 
 

click me!