Bagalkote: ಹಾವಿನ ರೂಪದಲ್ಲಿ ಮೃತಗಂಡ ಮನೆಗೆ ಬಂದನೆಂದು ಹಾವಿನೊಂದಿಗೆ 4 ದಿನ ಕಳೆದ ಅಜ್ಜಿ!

Published : Jun 06, 2022, 11:57 PM IST
Bagalkote: ಹಾವಿನ ರೂಪದಲ್ಲಿ ಮೃತಗಂಡ ಮನೆಗೆ ಬಂದನೆಂದು ಹಾವಿನೊಂದಿಗೆ 4 ದಿನ ಕಳೆದ ಅಜ್ಜಿ!

ಸಾರಾಂಶ

* 4 ದಿನಗಳಾದರೂ ಅಜ್ಜಿ ಶಾರವ್ವಗೆ ತೊಂದರೆ ನೀಡದೇ ಹಾಸಿಗೆ ಬಳಿ ಇರುವ ಹಾವು. * ಹಾವಿಗೆ ಯಾರೂ ಏನು ಮಾಡಕೂಡದೆಂದು ಕಟ್ಟಪ್ಪಣೆ ಹಾಕಿರೋ ಅಜ್ಜಿ. * ಅಜ್ಜಿ ಮನೆಯಲ್ಲಿರೋ ಹಾವು ನೋಡಲು ಮುಗಿಬೀಳುತ್ತಿರೋ ಜನತೆ.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಜೂ.06): ಮೃತ ಪಟ್ಟ ತನ್ನ ಪತಿರಾಯ ಹಾವಿನ ರೂಪದಲ್ಲಿ‌ ಮನೆಗೆ ಬಂದಿದ್ದಾನೆ ಎಂದು ನಂಬಿದ ಅಜ್ಜಿಯೊಬ್ಬರು ಕಳೆದ ನಾಲ್ಕು ದಿನಗಳಿಂದ ಹಾವಿನ ಜೊತೆಗೆ ಇರುವ ಮೂಲಕ ಅಚ್ಚರಿ ಮೂಡಿಸಿರೋ ಘಟನೆ ‌‌ನಡೆದಿದೆ. ಹೌದು! ಇಂತಹವೊಂದು ಘಟನೆ ನಡೆದಿರುವುದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ. ಶಾರವ್ವ ಕಂಬಾರ ಎಂಬ ಅಜ್ಜಿಯ ಮನೆಯಲ್ಲಿಯೇ ಈಗ ಹಾವು ಇದ್ದು, ಅವಳ ನಂಬಿಕೆ ಬಗ್ಗೆ ಸ್ಥಳೀಯ ಜನರು ಆಗಮಿಸಿ, ವಿಸ್ಮಯದಂತೆ ನೋಡಲು ಮುಗಿ ಬೀಳುತ್ತಿದ್ದಾರೆ. ಇನ್ನು ಶಾರವ್ವಾ ಕಂಬಾರ ಎಂಬ ಅಜ್ಜಿ ಬಡವಳಾಗಿದ್ದು, ಈ ಅಜ್ಜಿಯ ಮನೆಯಲ್ಲಿ ನಾಲ್ಕು ದಿನಗಳ‌ ಹಿಂದೆ ನಾಗರ ಹಾವು ಬಂದಿದೆ. ಅದನ್ನು ಹೊರಗೆ ಹಾಕಲು ಎಷ್ಟೇ ಪ್ರಯತ್ನ ಪಟ್ಟರು ಅದು ಹೋಗಲಿಲ್ಲವಂತೆ, ಇದರಿಂದ ಅಜ್ಜಿಯು ಆತಂಕಗೊಳ್ಳದೆ, ತನ್ನ ಪತಿ ಹಾವಿನ ರೂಪದಲ್ಲಿ ಬಂದಿರುವುದಾಗಿ ನಂಬಿದ್ದಾಳೆ‌. 

ಪತಿಯ ರೂಪದಲ್ಲಿನ ಹಾವಿಗೆ ತೊಂದರೆ ಮಾಡದಂತೆ ಅಜ್ಜಿ ಎಚ್ಚರಿಕೆ: ಅಜ್ಜಿ ಶಾರವ್ವಳ ಪತಿ ಮೋನೇಶ್ ಕಂಬಾರ ಎಂಬುವರು ಹಲವು ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಓರ್ವ ಬೇರೆ ಊರಿನಲ್ಲಿದ್ದರೆ, ಇನ್ನೊಬ್ಬಾತ ಬೇರೆ ಮನೆಯಲ್ಲಿ ಇರುತ್ತಾನೆ‌. ಇವುಗಳ ಮಧ್ಯೆ ತನ್ನ ಮನೆಯಲ್ಲಿ ಪತಿ ಮೌನೇಶ್ ತೀರಿ ಹೋದ ಬಳಿಕ  ಶಾರವ್ವ ಒಬ್ಬಳೇ ಮನೆಯಲ್ಲಿದ್ದು, ಜೀವನ ನಡೆಸುತ್ತಿದ್ದಳು. ಹೀಗಿರುವಾಗ ಕಳೆದ 4 ದಿನಗಳ ಹಿಂದೆ ಏಕಾಏಕಿ ಹಾವು ಮನೆಯಲ್ಲಿ ಕಂಡಾಗ ಅಜ್ಜಿ ಅಚ್ಚರಿಗೊಂಡಿದ್ದಾಳೆ. ಎಷ್ಟೇ ಪ್ರಯತ್ನಪಟ್ಟು ಹೊರಕಳಿಸಲು ಮುಂದಾದರೂ ಅದು ಹೋಗದೇ ಇದ್ದಾಗ, 

Bagalkote: ಎಂಎಲ್‌ಸಿ ಚುನಾವಣೆಗೆ ಸಕಲ ಸಿದ್ಧತೆ: ಡಿಸಿ ಸುನೀಲ್‌ ಕುಮಾರ್

ಮೇಲಾಗಿ ಅಜ್ಜಿಗೂ ಸಹ ಹಾವು ಯಾವುದೇ ತೊಂದರೆ ಕೊಡದೇ ಇದ್ದಾಗ ತನ್ನ ಪತಿ ಮೌನೇಶನೇ ಈ ಹಾವಿನ ರೂಪದಲ್ಲಿ ಬಂದು ನನ್ನ ಹತ್ತಿರ ಇದ್ದಾರೆ ಎಂದು ಅದನ್ನ 4 ದಿನಗಳಿಂದ ಅವರ ಚಾಪೆ ಮೇಲೆ ಇರಿಸಿ, ಅದನ್ನು ಜೋಪಾನ ಮಾಡುತ್ತಿದ್ದಾರೆ ಈ ಅಜ್ಜಿ. ಇನ್ನು  ಇದರಿಂದ ಅಜ್ಜಿಯ ನಂಬಿಕೆ ಹಾಗೂ  ನಾಗರ ಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿ ಬಿದ್ದಿದ್ದಾರೆ. ನಾಲ್ಕು ದಿನಗಳಿಂದ ಆ ಹಾವಿಗೆ ಊಟ ಹಾಲು ಏನು ಇಲ್ಲದೆ ಆ ಅಜ್ಜಿ ಮನೆಯಲ್ಲಿಯೇ ಅಸ್ವಸ್ಥಗೊಂಡು ಸುಸ್ತಾಗಿ ಬಿದ್ದಿದೆ. ಮೊದಲು ದಿನ ಕಂಡಾಗ  ದಪ್ಪವಿತ್ತಂತೆ ಹಾವಿಗೆ,  ನನ್ನನು ಕಚ್ಚಿ ಸಾಯುವಂತೆ ಮಾಡು  ಎಂದು ಬೇಡಿಕೊಂಡಿದ್ದಳು ಎನ್ನಲಾಗಿದೆ. ಆದರೆ ಇನ್ನುವರೆಗೂ ಏನೂ ಮಾಡಿಲ್ಲ ಎಂದು ಅಜ್ಜಿಯು ಹೆಮ್ಮೆಯಿಂದ ಹೇಳಿಕೊಳ್ಳುವ ಮ‌ೂಲಕ ವಿಸ್ಮಯಕಾರಿ ಘಟನೆ ಎಂದು ಚರ್ಚೆಗೆ ಗ್ರಾಸವಾಗುತ್ತಿದೆ.

ಹಾವು ಹೊಡಿಬೇಡಿ, ಏನು ತೊಂದರೆ ಕೊಡಬೇಡಿ: ಇನ್ನು ಮನೆಗೆ ಬಂದ ಹಾವು ಹೊಡಿಬೇಡಿ, ಕೈ ಮುಗಿಯುತ್ತೇನೆ ಎಂದು ಬಂದ ಜನರಿಗೆಲ್ಲಾ ಕೇಳಿಕೊಂಡಿದ್ದಾಳೆ. ಕೆಲವರು ಹಾವು ಹೊರಗೆ ಹಾಕೋಣ ಅಂದರೂ ಸಹ ಅಜ್ಜಿ ಒಪ್ಪಲಿಲ್ಲ. ಅದು ಯಾಕೆ ಕಚ್ಚಲಿಲ್ಲ ಅಂತ ಕೇಳಿದರೆ ಭಗವಂತನ ಅನುಮತಿ ಆಗೋವರೆಗೆ ಏನು ನಡೆಯಲ್ಲ ಎಂಬ ಆಧ್ಯಾತ್ಮಿಕ ಮಾತಗಳನ್ನಾಡುತ್ತ ಬಂದಿದ್ದಾಳೆ. ಈ ಮಧ್ಯೆ ನನ್ನ ಪತಿ ಮೌನೇಶ ಆಗಾಗ ಮನೆಯಲ್ಲಿ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ, ಆದರೆ ಈ ಬಾರಿ ಹಾವಿನ ರೂಪದಲ್ಲಿ ಮನೆಗೆ ಬಂದಿದ್ದಾನೆ. ಹೀಗಾಗಿ ಆ ಹಾವಿಗೆ ಏನು ಮಾಡಬೇಡಿ, ಅದು ನಮಗೂ ಸಹ ಏನೂ ಮಾಡಿಲ್ಲ ಎಂದರು.‌

ಅಜ್ಜಿ ಅಣತಿಯಂತೆ ನದಿ ತೀರಕ್ಕೆ ಹಾವು ಬಿಟ್ಟು ಬಂದ ಗ್ರಾಮಸ್ಥರು: ಕಳೆದ 4 ದಿನಗಳಿಂದ ಅಜ್ಜಿಯ ಮನೆಯಲ್ಲಿ ಪಕ್ಕ ಹಾವು ಹಿಡಿಯೋಕೆ ಅಜ್ಜಿ ಬಿಡದೇ ಹೋದಾಗ ಅಕ್ಕ ಪಕ್ಕದ ಮನೆ ಮಂದಿಯೆಲ್ಲಾ ಅಜ್ಜಿ ಶಾರವ್ವಳ ಮನೆಗೆ ತೆರಳಿ ಮನವೊಲಿಸಿದ್ದಾರೆ‌. ಆಗ ಅಜ್ಜಿ ಹಾವಿಗೆ ಏನು ತೊಂದರೆ ಕೊಡಬಾರದು, ಅದನ್ನು ನದಿಯ ತೀರಕ್ಕೆ ಕೊಂಡೊಯ್ದು ಬಿಟ್ಟು ಬರಬೇಕು ಎಂದು ಹೇಳಿದ್ದಾಳೆ. ಹೀಗಾಗಿ ಅಜ್ಜಿಯ ಅಣತಿಯಂತೆ ಚಾಪೆ ಸಹಿತ ಹಾವನ್ನು ಹೊರ ತಂದಾಗ ಚೀಲವೊಂದರಲ್ಲಿ ಹಾವನ್ನು ಹಾಕಿ ನಂತರ ನದಿಯ ಪಕ್ಕ ಬಿಟ್ಟು ಬಂದಿದ್ದಾರೆ.

ಬಿಜೆಪಿಯಲ್ಲಿನ ಭಿನ್ನಮತ ನಾನೇ ಶಮನಗೊಳಿಸುವೆ: ಲಕ್ಷ್ಮಣ ಸವದಿ

ಅಜ್ಜಿ ಮನೆಯ ಹಾವು ನೋಡಲು ಮುಗಿಬಿದ್ದ ಜನ: ಇತ್ತ ಅಜ್ಜಿಯ ಮನೆಯಲ್ಲಿ ಕಳೆದ 4 ದಿನಗಳಿಂದ ಹಾವು ಇದೆ ಎಂಬ ಸುದ್ದಿ ಕೇಳಿ ಬರುತ್ತಲೇ ಜನರು ಆಕೆಯ ಮನೆಗೆ ಹಾವು ನೋಡಲು ಮುಗಿಬಿದ್ದಿದ್ದರು. ಯಾರೇ ಬಂದರೂ ಸಹ ಅಜ್ಜಿ ಮಾತ್ರ ಇದು ನನ್ನ ಗಂಡನ ಸ್ವರೂಪ. ಹೀಗಾಗಿ ಮನೆಯಲ್ಲಿ ಇರಿಸಿಕೊಂಡಿದ್ದೇ ಅಂತ ಹೇಳುತ್ತಿದ್ದಳು. ಇದರಿಂದ ಹಾವೊಂದು ಈ ರೀತಿ ಏನು ತೊಂದರೆ ಮಾಡದೇ ಮನೆಯಲ್ಲಿಯೇ ಇದ್ದಂತಹ ವಿಷಯ ಕೇಳಿ ಜನರೆಲ್ಲಾ ನೋಡಲು ಮುಗಿಬಿದ್ದಿದ್ದರು.

PREV
Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!