ಮುಂಗಾರು ಪ್ರವೇಶ ವಿಳಂಬವಾಗಿದೆ, ಆದರೂ ಪಶ್ಚಿಮ ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧವಾಗಿದೆ. ಕಡಲು ಪಾಲಾಗುತ್ತಿದ್ದ ನಾಲ್ಕು ಮಂದಿ ಪ್ರವಾಸಿಗರನ್ನು ರಕ್ಷಿಸಲಾಗಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ಜೂ.06): ಮುಂಗಾರು ಪ್ರವೇಶ ವಿಳಂಬವಾಗಿದೆ, ಆದರೂ ಪಶ್ಚಿಮ ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧವಾಗಿದೆ. ಕಡಲು ಪಾಲಾಗುತ್ತಿದ್ದ ನಾಲ್ಕು ಮಂದಿ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಇಷ್ಟಾದರೂ ಜನಸಂದಣಿ ಮುಂದುವರೆದಿದೆ. ಲೈಫ್ ಗಾರ್ಡ್‌ಗಳ ಸೂಚನೆಯನ್ನು ಧಿಕ್ಕರಿಸಿ ಪ್ರವಾಸಿಗರು ಕಡಲಿ ಗಿಳಿಯುತ್ತಿದ್ದಾರೆ. ವೀಕೆಂಡ್ ಬಂದರೆ ಸಾಕು ಸಾವಿರಾರು ಪ್ರವಾಸಿಗರು ಉಡುಪಿಯ ಮಲ್ಪೆ ಬೀಚ್‌ಗೆ ಬರುತ್ತಾರೆ. ಕಳೆದ ಶನಿವಾರ, ಭಾನುವಾರ ಕೂಡ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕಡಲ ತೀರಕ್ಕೆ ಬಂದಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಈ ನಡುವೆ ಕಳೆದ ಕೆಲ ಗಂಟೆಗಳಿಂದ ಕಡಲು ಪ್ರಕ್ಷುಬ್ಧವಾಗಿದೆ.
undefined
ನಾಲ್ವರು ಪ್ರವಾಸಿಗರ ರಕ್ಷಣೆ: ಮಲ್ಪೆ ಕಡಲಿನ ತೀರ ಪ್ರದೇಶ ಅಪಾಯಕಾರಿಯಾಗಿದೆ. ನೀರಿಗೆ ಇಳಿಯಬೇಡಿ ಎಂದರೂ ಪ್ರವಾಸಿಗರು ಕೇಳುತ್ತಿಲ್ಲ. ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಉತ್ತರ ಕರ್ನಾಟಕ ಮೂಲದ ಇಬ್ಬರನ್ನು ರವಿವಾರ ರಕ್ಷಿಸಲಾಗಿದೆ. ನಾಲ್ವರು ಪ್ರವಾಸಿಗರು ಜೊತೆಯಾಗಿ ಬಂದಿದ್ದು ನೀರಿನಲ್ಲಿ ಚೆಂಡಾಟ ಆಡುತ್ತಿದ್ದರು. ಜೀವ ರಕ್ಷಕರು ಎಚ್ಚರಿಕೆ ನೀಡಿದರೂ ಕೇಳದೆ ಆಟದಲ್ಲಿ ನಿರತರಾಗಿದ್ದರು. ಆಟವಾಡುತ್ತಾ ಮುಂದಕ್ಕೆ ಹೋದಾಗ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ.
Udupi; ನೀರಿಗೆ ಬಿದ್ದ ಬ್ರಹ್ಮಾವರ ತಹಶೀಲ್ದಾರ್, ಕ್ಷಿಪ್ರ ಕಾರ್ಯಾಚರಣೆಯಿಂದ ರಕ್ಷಣೆ
ತಕ್ಷಣವೇ ಕಾರ್ಯಪ್ರವೃತ್ತರಾದ ಲೈಫ್ ಗಾರ್ಡ್‌ಗಳು ನೀರಿಗೆ ಧುಮುಕಿ ಇಬ್ಬರನ್ನು ರಕ್ಷಿಸಿದ್ದಾರೆ. ಸೋಮವಾರ ಬೆಳಿಗ್ಗೆ ಮತ್ತೆ ಇದೇ ಘಟನೆ ಮರುಕಳಿಸಿದೆ. ಬಿಜಾಪುರ ಮೂಲದ ಪ್ರವಾಸಿಗರಾದ ಮೊಬಿನ್ ಸೋಫಿಯಾ ಎಂಬ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಇವರ ರಕ್ಷಣೆಯ ವೇಳೆ ಗಾರ್ಡ್‌ಗಳು ಕೂಡ ಅಸ್ವಸ್ಥರಾಗಿದ್ದಾರೆ. ಇಷ್ಟಾದರೂ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಇಬ್ಬರು ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಸುಳಿಯಾಕಾರದಲ್ಲಿ ಅಬ್ಬರಿಸುವ ಅಲೆಗಳು: ಕಳೆದ ಕೆಲ ಗಂಟೆಗಳಿಂದ ಕಡಲಿನ ಅಲೆಗಳು ಅಪಾಯಕಾರಿಯಾಗಿವೆ. ಸ್ಥಳೀಯ ಭಾಷೆಯಲ್ಲಿ ಇದನ್ನು ಮಾರಿ ನೀರು ಎಂದು ಕರೆಯುತ್ತಾರೆ. ಜೂನ್ ಜುಲೈ ಆಗಸ್ಟ್ ತಿಂಗಳಲ್ಲಿ ಕಡಲಿನ ವರ್ತನೆ ಇತರ ಕಾಲಕ್ಕಿಂತ ಬೇರೆಯಾಗಿರುತ್ತೆ. ತೀರ ಪ್ರದೇಶದಿಂದ 50 ಮೀಟರ್ ದೂರಕ್ಕೆ ಹೋದರೆ ನೀರಿನ ಸುಳಿಗಳು ಎದುರಾಗುತ್ತೆ. ಈ ಸುಳಿಗಳ ನಡುವಿಗೆ ಸಿಕ್ಕಿದರೆ ಮತ್ತೆ ದಡಕ್ಕೆ ಬರುವುದು ಕಷ್ಟ. ಎಳೆದುಕೊಂಡು ಹೋಗುವ ಈ ಸುಳಿಗಳು ಅಲೆಗಳ ನಡುವೆ ನಿಮ್ಮನ್ನು ಸಮುದ್ರದ ಒಳಗೆ ಕೊಂಡೊಯ್ಯುತ್ತವೆ. ಮಲ್ಪೆ ಸಮುದ್ರದ ಮೂರು ಭಾಗಗಳಲ್ಲಿ ಈ ರೀತಿಯ ಸುಳಿಗಳಿವೆ. ಈ ಬಗ್ಗೆ ಮಾಹಿತಿ ನೀಡಿದರೂ ಪ್ರವಾಸಿಗರು ಮಾತ್ರ ಕೇಳುತ್ತಿಲ್ಲ. ಬೇಡವೆಂದರೂ ನೀರಿಗಿಳಿದು ಆಟವಾಡುತ್ತಾರೆ.
Udupi ; ಉಚಿತ ಪುಸ್ತಕ ಹಂಚುವ ಅಸಾಮಾನ್ಯ ಕನ್ನಡಿಗ ಕೂ.ಗೋ ಅಜ್ಜ!
ಮಂಗಳವಾರ ಕಡಲಿಗೆ ಬೇಲಿ?: ಪ್ರವಾಸಿಗರ ವರ್ತನೆಯಿಂದ ರೋಸಿ ಹೋಗಿರುವ ಲೈಫ್ ಗಾರ್ಡ್‌ಗಳು ಮಂಗಳವಾರ ಕಡಲುತೀರ ಪ್ರದೇಶಕ್ಕೆ ಬಲೆಹಾಕಿ ತಡೆಗೋಡೆ ಕಟ್ಟಲು ತೀರ್ಮಾನಿಸಿದ್ದಾರೆ. ಈ ಬಲೆಯ ಜಾಲರಿಯನ್ನು ದಾಟಿ ಯಾರೂ ಕಡಲು ಪ್ರವೇಶಿಸಿದಂತೆ ಸೂಚನೆ ನೀಡಲಾಗುತ್ತದೆ. ಹಾಗಾಗಿ ಮಲ್ಪೆ ಬೀಚಿಗೆ ಬರುವ ಪ್ಲಾನ್ ಮಾಡಿಕೊಂಡಿದ್ದರೆ, ಪ್ರವಾಸ ಮುಂದೂಡುವುದು ಒಳ್ಳೆಯದು. ಮಾನ್ಸೂನ್ ಸ್ವಾಗತಕ್ಕೆ ಕಡಲು ಸಿದ್ಧವಾಗಿದೆ, ಅದೇ ಕಾರಣಕ್ಕೆ ಕ್ಷಣ ಕ್ಷಣಕ್ಕೂ ಅಲೆಗಳು ಅಬ್ವರಿಸುತ್ತಿವೆ.