ರಸ್ತೆ ಮಧ್ಯೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ| ರಸ್ತೆಗುರುಳಿದ ಗಿಡ- ಮರಗಳು| ಕಾರವಾರ ತಾಲೂಕಿನ ಬಹುತೇಕ ಕಡೆ ಗುಡುಗು, ಮಿಂಚು ಸಹಿತ ಮಳೆ| ಯಲ್ಲಾಪುರ ತಾಲೂಕಿನ ಮಂಚಿಕೇರಿ ಭಾಗದಲ್ಲೂ ಸಂಜೆ ವೇಳೆ 1 ತಾಸಿಗೂ ಅಧಿಕ ಕಾಲ ಅರುಣನ ಅಬ್ಬರ|
ಮುಂಡಗೋಡ(ಮಾ.25): ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಪಟ್ಟಣದ ಬಹುತೇಕ ಭಾಗದಲ್ಲಿ ರಸ್ತೆ ಮಧ್ಯೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕೆಲವೆಡೆ ಗಿಡ- ಮರಗಳು ರಸ್ತೆಗುರುಳಿವೆ. ಪಟ್ಟಣದಲ್ಲಿ ಸಂಜೆ 5 ಗಂಟೆಯಿಂದ ವ್ಯತ್ಯಯವಾದ ವಿದ್ಯುತ್ ರಾತ್ರಿಯಾದರೂ ಬಂದಿರಲಿಲ್ಲ. ಇದರಿಂದ ಸಾರ್ವಜನಿಕರು ಕತ್ತಲಲ್ಲಿ ಕಾಲ ಕಳೆಯಬೇಕಾಯಿತು.
ಬೆಳೆ ಹಾನಿ:
ಮಾವಿನ ಮರಗಳು ಕಾಯಿ ಬಿಟ್ಟಿದ್ದು, ಇನ್ನೇನು ಕಟಾವಿಗೆ ಬರುತ್ತಿರುವ ಈ ವೇಳೆಯಲ್ಲಿ ಇದ್ದಕ್ಕಿದ್ದಂತೆ ಭಾರಿ ಮಳೆ ಸುರಿದಿದ್ದರಿಂದ ಕೆಲವೆಡೆ ಮಾವಿನ ಕಾಯಿ ಉದುರಿದ್ದು ಮಾವು ಬೆಳೆಗಾರರು ಕಂಗಾಲಾಗಿದ್ದು, ಬೇಸಿಗೆ ಬೆಳೆ ಬೆಳೆಯಲಾದ ಗೋವಿನ ಜೋಳ ಕಟಾವಿಗೆ ಬಂದಿದ್ದು, ಗದ್ದೆಯಲ್ಲಿ ನೀರು ನಿಂತ ಹರಿಣಾಮ ಹಾನಿ ಅನುಬವಿಸುವ ಆತಂಕ ಎದುರಾಗಿದೆ.
ಶಿರಸಿ: ಮತ್ತಿಘಟ್ಟದ ಕೆಳಗಿನ ಕೇರಿಯಲ್ಲಿ ದಿಢೀರ್ ಭೂಕುಸಿತ, ಆತಂಕದಲ್ಲಿ ಜನತೆ
ಜಾತ್ರೆಗಳಿಗೆ ತೊಂದರೆ:
ತಾಲೂಕಿನ ಮಳಗಿ, ಚವಡಳ್ಳಿ, ಇಂದೂರ, ಮಲವಳ್ಳಿ, ಕರಗಿನಕೊಪ್ಪ ಸೇರಿದಂತೆ ಬಹುತೇಕ ಕಡೆಗಳಲ್ಲಿ ಜಾತ್ರೆ ನಡೆಯುತ್ತಿದ್ದು, ಬುಧವಾರ ಸಂಜೆ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಗೆ ಜಾತ್ರೆಗಳಿಗೂ ಕೂಡ ತೊಂದರೆಯಾಗಿದೆ. ಒಟ್ಟಾರೆ ಈ ಮಳೆಯಿಂದಾಗಿ ತಾಲೂಕಿನ ಜನರಿಗೆ ಒಂದಿಲ್ಲ ಒಂದು ರೀತಿ ಸಮಸ್ಯೆಯಾಗಿದ್ದಂತೂ ಸುಳ್ಳಲ್ಲ.
ಕಾರವಾರ ತಾಲೂಕಿನ ಬಹುತೇಕ ಕಡೆ ರಾತ್ರಿ 8 ಗಂಟೆಯಿಂದ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. ಚರಂಡಿ ತುಂಬಿ ನಗರದ ಬಹುತೇಕ ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಕೆಲಸದಿಂದ ತೆರಳುವವರು, ಮಾರುಕಟ್ಟೆಗೆ ಆಗಮಿಸಿದ್ದವರು ಮಳೆಗೆ ಹಿಡಿಶಾಪ ಹಾಕಿದರು. 1 ಗಂಟೆಗೂ ಹೆಚ್ಚಿನ ಕಾಲ ಮಳೆಯಾಗಿದೆ.
ಯಲ್ಲಾಪುರ ತಾಲೂಕಿನ ಮಂಚಿಕೇರಿ ಭಾಗದಲ್ಲೂ ಸಂಜೆ ವೇಳೆ 1 ತಾಸಿಗೂ ಅಧಿಕ ಕಾಲ ಭಾರಿ ಮಳೆಯಾಗಿದೆ. ಶಿರಸಿಯ ಬಹುತೇಕ ಕಡೆ ಮೋಡ ಕವಿದ ವಾತಾವಣವಿತ್ತು. ಸೋಂದಾ ಭಾಗದಲ್ಲಿ ಭಾರಿ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯವಸ್ಥವಾಗಿತ್ತು. ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಕಳೆದ ಕೆಲವು ದಿನದ ಹಿಂದೆ ಸುರಿದ ಮಳೆಯಿಂದಾಗಿ ಬೆಳೆ ನಷ್ಟವಾಗಿತ್ತು. ಅಡಕೆ, ಬತ್ತ, ಕಬ್ಬಿನ ಬೆಳೆಗೆ ಹಾನಿಯಾಗಿತ್ತು. ಮಾವು ಬೆಳೆಗಾರರು ಕೂಡಾ ಆತಂಕದಲ್ಲಿದ್ದರು.