ವಿಜಯಪುರ: ಯುವತಿಗೆ ಮುತ್ತು ಕಟ್ಟುವ ಯತ್ನ ವದಂತಿ, ಅಧಿಕಾರಿಗಳಿಂದ ಪರಿಶೀಲನೆ

By Suvarna NewsFirst Published Dec 14, 2019, 12:30 PM IST
Highlights

ಯುವತಿಯೊಬ್ಬಳಿಗೆ ದೇವದಾಸಿಗೆ ಬಿಡಲು ಮುತ್ತು ಕಟ್ಟುವ ವದಂತಿ|  ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆದ ಘಟನೆ| ಕಾಖಂಡಕಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ ಐಸಿಪಿಎಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ|ಯುವತಿಗೆ 18 ವರ್ಷ ತುಂಬಿದ್ದರಿಂದ ಅಧಿಕಾರಿಗಳು ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ|

ವಿಜಯಪುರ[ಡಿ.14]:  ಪೋಷಕರು ಯುವತಿಯೊಬ್ಬಳಿಗೆ ದೇವದಾಸಿಗೆ ಬಿಡಲು ಮುತ್ತು ಕಟ್ಟುವ ತಯಾರಿಯಲ್ಲಿದ್ದ ವದಂತಿ ಹರಡಿದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಡಿ.೪ರಂದು ರಾತ್ರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಕಾಖಂಡಕಿ ಗ್ರಾಮದಲ್ಲಿ ಯುವತಿಯೊಬ್ಬಳಿಗೆ ಮುತ್ತು ಕಟ್ಟುವ ಯತ್ನ ನಡೆದಿದೆ ಎಂಬ ವದಂ ತಿ ಬಂದಿದೆ. ಇದರ ಆಧಾರದ ಮೇಲಿಂದ ಬೆಂಗಳೂರಿನ ಐಸಿಪಿಎಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಂದ ಈ ಕುರಿತು ಮಾಹಿತಿ ಪಡೆದುಕೊಂಡು, ಡಿ.5ರಂದು ಬೆಳ್ಳಂಬೆಳಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ನೇತೃತ್ವದ ತಂಡವೊಂದು ಕಾಖಂಡಕಿ ಗ್ರಾಮಕ್ಕೆ ತೆರಳಿದೆ. ಈ ವೇಳೆ ಯುವತಿಗೆ ಮುತ್ತು ಕಟ್ಟುವ ಯತ್ನ ಇರುವ ಹಿನ್ನೆಲೆಯಲ್ಲಿ ಆಕೆಯನ್ನು ಕರೆದುಕೊಂಡು ವಿಜಯಪುರಕ್ಕೆ ಕರೆ ತಂದಿದೆ. ನಂತರ ಈ ಯುವತಿಯನ್ನು ಹೆಣ್ಣು ಮಕ್ಕಳ ಬಾಲಮಂದಿರಕ್ಕೆ ಸೇರಿಸಲಾಯಿತು. ಆಮೇಲೆ ಯುವತಿಯನ್ನು ವಿಚಾರಣೆಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕರೆತರಲಾಯಿತು.

ವಿಜಯಪುರದಲ್ಲಿ ಅನಿಷ್ಟ ದೇವದಾಸಿ ಪದ್ಧತಿ ಇಂದಿಗೂ ಜೀವಂತ!

ಯುವತಿಯ ವಯೋಮಿತಿಯ ದಾಖಲೆಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ ಅವರು ಕಾಖಂಡಕಿ ಗ್ರಾಮಕ್ಕೆ ತೆರಳಿ ಶಾಲಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆಗ ಬಾಲಕಿಗೆ 18 ವರ್ಷಗಳು ತುಂಬಿದ ವಿಚಾರ ಗೊತ್ತಾಗಿದೆ. ಅಲ್ಲದೆ ತಂದೆ-ತಾಯಿ ಇಲ್ಲವೆಂದು ತಿಳಿದು ಬಂದಿದೆ. ನಂತರ ಮಕ್ಕಳ ಕಲ್ಯಾಣ ಸಮಿತಿ ಯಲ್ಲಿ ಈ ಯುವತಿಯನ್ನು ವಿಚಾರಣೆಗೆ ಒಳಪಡಿಸಲಾಯಿತು. ಆಗ ಕಾರ್ಯಕ್ರಮವೊಂದಕ್ಕಾಗಿ ಚಹ, ಚೂಡಾ ಕೂಟ (ಚಹಕೂಟ) ಏರ್ಪಡಿಸಲಾಗಿತ್ತು. ಮಾರನೇ ದಿನ ಮುತ್ತು ಕಟ್ಟುವ ತಯಾರಿಯಲ್ಲಿದ್ದರು ಎಂಬ ವಿಚಾರವೂ ತಿಳಿದುಬಂದಿದೆ. ಅಷ್ಟರಲ್ಲಿಯೇ ಅಧಿಕಾರಿಗಳು ಆಗಮಿಸಿ ಸಮಗ್ರವಾಗಿ ಪರಿಶೀಲನೆ ನಡೆಸಿದ್ದಾರೆ. ಆಗ ಯುವತಿಯನ್ನು ವಿಜಯಪುರಕ್ಕೆ ಕರೆತಂದು ವಿಚಾರಣೆಯನ್ನೂ ನಡೆಸಿದ್ದಾರೆ. ಆನಂತರ ಯುವತಿಗೆ 18 ವರ್ಷ ತುಂಬಿದ್ದರಿಂದಾಗಿ ಅಧಿಕಾರಿಗಳು ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಕಾಖಂಡಕಿ ಗ್ರಾಮದಲ್ಲಿ ಬಾಲಕಿಗೆ ಮುತ್ತು ಕಟ್ಟುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದಾಸಿ ಪುನರ್ವಸತಿ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸ್ಥಾನಿಕ ಚೌಕಾಸಿ ನಡೆಸಿ, ತಮ್ಮ ಪ್ರಾಥಮಿಕ ವರದಿಯಲ್ಲಿ ಮುತ್ತುವ ಕಟ್ಟುವ ಯತ್ನ ನಡೆದಿಲ್ಲ ಎಂದು ವರದಿ ಸಲ್ಲಿಸಿದ್ದಾರೆ. ಹಾಗಾಗಿ ಬಾಲಕಿಗೆ ಮುತ್ತು ಕಟ್ಟುವ ಯತ್ನ ನಡೆದಿಲ್ಲ. ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುವುದು. ಒಂದೊಮ್ಮೆ ತಪ್ಪು ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

click me!