ಆ. 15ರಂದು ವಿಜಯನಗರ ಜಿಲ್ಲೆ ಅಧಿಕೃತ ಉದ್ಘಾಟನೆ?

By Kannadaprabha News  |  First Published Jul 31, 2021, 1:03 PM IST

* ಎಸ್ಪಿ ಕಚೇರಿ ಸ್ಥಾಪಿಸುವಂತೆ ಎಡಿಜಿಪಿ ಬರೆದ ಪತ್ರದಲ್ಲಿ ಉಲ್ಲೇಖ
* ಕೊಟ್ಟ ಮಾತಿನಂತೆ ವಿಜಯನಗರ ಜಿಲ್ಲೆಯನ್ನು ಘೋಷಿಸಿದ ಬಿಎಸ್‌ವೈ 
*ವಿಜಯನಗರ ಜಿಲ್ಲೆ ಉದ್ಘಾಟನೆಗೆ ದಿನಾಂಕ ಬಹುತೇಕ ನಿಗದಿ


ಹೊಸಪೇಟೆ(ಜು.31): ರಾಜ್ಯದ 31ನೇ ಜಿಲ್ಲೆಯಾಗಿ ನೂತನ ಜಿಲ್ಲೆ ಘೋಷಿಸಿ ಐದು ತಿಂಗಳ ಬಳಿಕ ಜಿಲ್ಲೆ ಅಧಿಕೃತ ಉದ್ಘಾಟನೆಗೆ ಚಾಲನೆ ದೊರೆತಿದ್ದು, ಈ ಬಗ್ಗೆ ಸರ್ಕಾರಗಳ ಇಲಾಖಾ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಯುತ್ತಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಆಗಸ್ಟ್‌ 15ರಂದು ಜಿಲ್ಲೆ ಉದ್ಘಾಟನೆ ಇರುವುದರಿಂದ ವಿಜಯನಗರ ಜಿಲ್ಲೆಯಲ್ಲಿ ಎಸ್ಪಿ ಕಚೇರಿ ಸ್ಥಾಪಿಸುವಂತೆ ಎಡಿಜಿಪಿ ಡಾ. ಎಂ.ಎ. ಸಲೀಂ ಅವರು ಎಸ್ಪಿ ಸೈದುಲು ಅಡಾವತ್‌ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಜಿಲ್ಲೆ ಉದ್ಘಾಟನೆಗೆ ದಿನಾಂಕ ಬಹುತೇಕ ನಿಗದಿಯಾದಂತಾಗಿದೆ.

Latest Videos

undefined

ನೂತನ ವಿಜಯನಗರ ಜಿಲ್ಲೆಯನ್ನು ಫೆ. 8ರಂದು ಅಧಿಕೃತವಾಗಿ ಘೋಷಿಸಿದ ಸರ್ಕಾರ ಇಲ್ಲಿಯವರೆಗೆ ಜಿಲ್ಲಾಡಳಿತ ರಚನೆಗೆ ಸಂಬಂಧಿಸಿದಂತೆ ಗಡಿ ಗುರುತು, ಜಿಲ್ಲಾ ಮಟ್ಟದ ಕಚೇರಿಗಳು, ಮೂಲ ಸೌಕರ್ಯಗಳ ಒದಗಿಸುವ ನಿಟ್ಟಿನಲ್ಲಿ ಮನರೇಗಾ ಆಯುಕ್ತರಾದ ಅನಿರುದ್ಧ್‌ ಶ್ರವಣ್‌ ಅವರನ್ನು ವಿಶೇಷಾಧಿಕಾರಿಯನ್ನಾಗಿ ನೇಮಿಸಿದೆ. ಇವರು ಸಹ ಉಪವಿಭಾಗಾಧಿಕಾರಿ, ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ ಜಿಲ್ಲಾ ಮಟ್ಟದ ಕಚೇರಿಗಳ ಆರಂಭಕ್ಕೆ ಕಟ್ಟಡಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಿದ್ದಾರೆ.

'ಹಂಪಿಯಿಲ್ಲದೆ ಬಳ್ಳಾರಿ ಜಿಲ್ಲೆ ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯ?'

ಬಿಎಸ್‌ವೈ ಕೊಡುಗೆ:

ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಉಪಚುನಾವಣೆ ಸಂದರ್ಭದಲ್ಲಿ ಆನಂದ ಸಿಂಗ್‌ ಅವರಿಗೆ ಕೊಟ್ಟ ಮಾತಿನಂತೆ ವಿಜಯನಗರ ಜಿಲ್ಲೆಯನ್ನು ಘೋಷಿಸಿದರು. ಆದರೆ ಜಿಲ್ಲೆ ಉದ್ಘಾಟನೆಗೆ ಮುನ್ನವೇ ಅಧಿಕಾರದಿಂದ ಕೆಳಗಿಳಿದಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದು, ಶೀಘ್ರವೇ ಅಧಿಕೃತವಾಗಿ ವಿಜಯನಗರ ಜಿಲ್ಲೆ ಉದ್ಘಾಟನೆಯಾಗಲಿದೆಯೇ ಎಂಬ ಮಾತು ಮತ್ತೆ ಮುನ್ನೆಲೆಗೆ ಬಂದಿದೆ.

ಎಸ್ಪಿ ಕಚೇರಿ ಸ್ಥಾಪನೆಗೆ ಪತ್ರ:

ವಿಜಯನಗರ ಜಿಲ್ಲೆಯನ್ನು ಆ. 15ರಂದು ಉದ್ಘಾಟಿಸಲಾಗುತ್ತಿರುವುದರಿಂದ ಜಿಲ್ಲೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸ್ಥಾಪಿಸುವಂತೆ ಡೈರೆಕ್ಟ್ ಜನರಲ್‌ ಮತ್ತು ಇನ್ಸ್‌ಪೆಕ್ಟರ್‌ ಜನರಲ್‌ ಅಫ್‌ ಪೊಲೀಸರ ಪರವಾಗಿ ಎಡಿಜಿಪಿ ಡಾ. ಎಂ.ಎ. ಸಲೀಂ ಅವರು ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.
 

click me!