ಸರ್ಕಾರ ಬಡ ಜನರ ಅನುಕೂಲಕ್ಕಾಗಿ ವಿವಿಧ ರೀಇಯ ಯೋಜನೆಗಳನ್ನು ಜಾರಿ ಮಾಡುತ್ತದೆ. ವಸತಿ ಯೋಜನೆಗೂ ಸಾಕಷ್ಟು ಅನುದಾನ ಹಂಚಿಕೆ ಮಾಡುತ್ತದೆ. ಆದರೆ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಅನುದಾನವೇ ಇಲ್ಲವಾಗಿದೆ ಇಲ್ಲಿ.
ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಜ.28): ಜಿಲ್ಲೆಯಲ್ಲಿ ಬಡವರಿಗೆ ಸ್ವಂತ ಸೂರು ಕಲ್ಪಿಸುವ ಮಹತ್ವಾಕಾಂಕ್ಷಿ ವಸತಿ ಯೋಜನೆಗಳಿಗೆ ಗರ ಬಡಿದಿದ್ದು, ಚುನಾಯಿತ ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿ ಕೊರತೆ, ಅಧಿಕಾರಿಗಳ ಅಸಡ್ಡೆ, ಸಮಯಕ್ಕೆ ಸರಿಯಾಗಿ ಅನುದಾನ ಬಾರದೇ ಕಳೆದ 5 ವರ್ಷದಲ್ಲಿ ಜಿಲ್ಲೆಗೆ ಮಂಜೂರಾಗಿರುವ ಬರೋಬ್ಬರಿ 18,500 ಮನೆಗಳು ಅಪೂರ್ಣವಾಗಿ ಜಿಲ್ಲೆಯಲ್ಲಿ ವಸತಿ ಯೋಜನೆಗಳು ಹಳ್ಳ ಹಿಡಿಯುವಂತಾಗಿದೆ.
ಜಿಲ್ಲೆಯ ಜಿಲ್ಲಾ ಪಂಚಾಯತ್ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ 2015-16ನೇ ಸಾಲಿನಿಂದ 2019-20ನೇ ಸಾಲಿನವರೆಗೂ ವಿವಿಧ ವಸತಿ ಯೋಜನೆಗಳಲ್ಲಿ ಜಿಲ್ಲೆಗೆ ಒಟ್ಟು 1,8500 ಮನೆಗಳು ಮಂಜೂರಾಗಿದ್ದರೂ ಅವು ಯಾವುವು ಇನ್ನೂ ಪೂರ್ಣಗೊಳ್ಳದೇ ವಿವಿಧ ಹಂತಗಳಲ್ಲಿಯೇ ನೆನೆಗುದಿಗೆ ಬಿದ್ದಿರುವುದು ಬಡವರಿಗೆ ಶಾಶ್ವತ ಸೂರು ಸಿಗುವ ಕನಸು ಕನಸಾಗಿಯೆ ಉಳಿದುಕೊಂಡಿದೆ.
ರಾಜ್ಯ ಸರ್ಕಾರದಿಂದ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ ! ಮನೆಗೆ ಹಣ .
ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಶಾಶ್ವತ ನೀರಾವರಿ ಇಲ್ಲದೇ, ದುಡಿಯುವ ಕೈಗಳಿಗೆ ಕೆಲಸ ನೀಡುವ ಕೈಗಾರಿಕೆಗಳಿಂದಲೂ ವಂಚಿತವಾಗಿರುವ ಜಿಲ್ಲೆ ಕೃಷಿಯನ್ನು ಅವಲಂಬಿಸಿದೆ. ಲಕ್ಷಾಂತರ ಕುಟುಂಬಗಳು ಜಿಲ್ಲೆಯಲ್ಲಿ ರೇಷ್ಮೆ, ಹೈನುಗಾರಿಕೆ ನಂಬಿಯೇ ಜೀವನ ನಡೆಸುವಂತಾಗಿದೆ. ಜಿಪಂ ನಡೆಸಿರುವ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ 21 ಸಾವಿರಕ್ಕೂ ಅಧಿಕ ಮಂದಿಗೆ ಕನಸಿನ ಮನೆ ನಿರ್ಮಿಸಿಕೊಳ್ಳಲು ಸ್ವಂತ ನಿವೇಶನ ಇಲ್ಲ. ಆದರೆ ನಿವೇಶನ ಇದ್ದೂ ಜಿಲ್ಲೆಯ ವಿವಿಧ ವಸತಿ ಯೋಜನೆಗಳಡಿಯಲ್ಲಿ ಕಳೆದ ಐದು ವರ್ಷದಲ್ಲಿ ಒಟ್ಟು 18,500 ಮನೆಗಳು ಮಂಜೂರಾದರೂ ಅಧಿಕಾರಿಗಳ ಅಸಡ್ಡೆ, ವಸತಿ ಯೋಜನೆಗಳನ್ನು ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳದ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಬಿಡುಗಡೆಗೊಳ್ಳದ ಪರಿಣಾಮ ವಸತಿ ಯೋಜನೆಗಳು ಪ್ರಗತಿ ಕಾಣದೇ ಹಿನ್ನಡೆ ಸಾಧಿಸಿದೆ.
ಮೂಲ ಸೌಕರ್ಯಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಮನೆ ತೀರಾ ಅಗತ್ಯ. ಆದರೆ ಜಿಲ್ಲೆಯಲ್ಲಿ ಕಳೆದ 2015 ಸಾಲಿನಲ್ಲಿ ಜಾರಿಯಲ್ಲಿದ್ದ ಅಶ್ರಯ ಯೋಜನೆ, ಬಸವ ಅಶ್ರಯ, ಅಂಬೇಡ್ಕರ್ ವಸತಿ ಯೋಜನೆ, ಇಂದಿರಾ ಆವಾಜ್ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆಗಳಲ್ಲಿ ಒಟ್ಟು ಜಿಲ್ಲೆಗೆ 18,500 ಮನೆಗಳು ನಿರ್ಮಾಣವಾಗಿವೆ. ಆದರೆ ಯಾವ ಮನೆ ಕೂಡ ಪೂರ್ಣವಾಗಿಲ್ಲ. ಬಹಳಷ್ಟುಮನೆಗಳು ಪಾಯ ಹಂತದಲ್ಲಿ ಮತ್ತೆ ಕೆಲವು ಗೋಡೆ ಹಂತದಲ್ಲಿ ಮತ್ತೆ ಕೆಲವು ಮೇಲ್ಛಾವಣಿ ಹಂತದಲ್ಲಿ ನೆನೆಗುದಿಗೆ ಬಿದ್ದಿವೆ.
ಚಳಿಗಾಲದ ಸಮರಕ್ಕೆ ಭಾರತೀಯ ಸೇನೆ ಸಜ್ಜು, ಚಳಿ ತಡೆವ ವಸತಿ ವ್ಯವಸ್ಥೆ!
ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ಸಾಕಷ್ಟುಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಜಿಲ್ಲೆಗೆ ಯಾವುದೇ ಯೋಜನೆಯಡಿ ಮನೆ ಮಂಜೂರು ಮಾಡಿಲ್ಲ ಎನ್ನುವ ಮಾತು ಅಧಿಕಾರಿಗಳಿಂದ ಕೇಳಿ ಬಂದಿದೆ. ವಸತಿ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟುತಂತ್ರಾಂಶ, ವಿಶೇಷ ಆ್ಯಪ್‌ಗಳ ಅಭಿವೃದ್ಧಿಯಾದರೂ ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಮಾಡುವ ತಪ್ಪಿಗೆ ವಸತಿ ಯೋಜನೆಗಳಲ್ಲಿ ಸಾಕಷ್ಟುಅಕ್ರಮಗಳನ್ನು ತಡೆಯುವುದು ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ.
ಜೊತೆಗೆ ಸರ್ಕಾರಗಳು ಕೂಡ ವಸತಿ ಯೋಜನೆಗಳಿಗೆ ಅನುದಾನ ಕೊಡುವುದು ವಿಳಂಬದ ಕಾರಣ ಮನೆ ಮಂಜೂರು ಮಾಡಿಸಿಕೊಂಡು ಫಲಾನುಭವಿಗಳು ಸಹ ಸರ್ಕಾರದ ಅನುದಾನಕ್ಕಾಗಿ ಚಾತಕಪಕ್ಷಿಗಳಂತೆ ಎದುರು ನೋಡುವಂತಾಗಿ ಜಿಲ್ಲೆಯಲ್ಲಿ ವಸತಿ ಯೋಜನೆಗಳು ಹಳ್ಳ ಹಿಡಿಯುವಂತಾಗಿದೆ. ಈ ಬಗ್ಗೆ ಅಧಿಕಾರಿಗಳ ಅಸಡ್ಡೆ ಜೊತೆಗೆ ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ, ವಸತಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ಕೊಡದ ಪರಿಣಾಮ ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ 18,500 ಮನೆಗಳು ಅಪೂರ್ಣವಾಗಿ ಇರುವುದು ಇಡೀ ಜಿಲ್ಲೆಯ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದರೆ ತಪ್ಪಗಲಾರದು.