ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಅಧಿಕಾರಿಗಳು ಸುಸ್ತೋ ಸುಸ್ತು !

By Kannadaprabha NewsFirst Published May 25, 2020, 1:04 PM IST
Highlights

ಕ್ವಾರಂಟೈನ್ ಕೇಂದ್ರಗಳಲ್ಲಿ ಹೊರಗೆ ಬಾರದೆ ಪಟ್ಟು ಹಿಡಿದಿದ್ದ ಸೋಂಕಿತರು| ಕುರಿಗಳಂತೆ ತುಂಬಿ ಹಾಕಿದ್ದೀರೆಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ವಲಸಿಗರು| ಪೊಲೀಸ್, ತಹಸೀಲ್ ಅಧಿಕಾರಿಗಳಿಂದ ಗಂಟೆಗಳ ಕಾಲ ಮನವೊಲೈಕೆ: ಅಂಬ್ಯುಲೆನ್ಸ್ ಹತ್ತಿದ ಸೋಂಕಿತರು|

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಮೇ.25): ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿನ ಕೆಲವರಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯಲೆನ್ಸ್‌ನಲ್ಲಿ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳೊಡನೆ ಸೋಂಕಿತರು ಹಾಗೂ ಅಲ್ಲಿದ್ದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ನಂತರ ಮನವೊಲೈಸಿ ಕರೆದೊಯ್ದ ಘಟನೆ ನಗರದ ಕನ್ಯಾಕೋಳೂರು ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಸ್ಥಾಪಿತವಾಗಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.

ಭಾನುವಾರ ಬೆಳಿಗ್ಗೆ 9 ರ ಸುಮಾರಿಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅಂಬುಲೆನ್ಸ್ ನೊಂದಿಗೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಾಗ, ಅಧಿಕಾರಿಗಳೊಂದಿಗೆ ಸೋಂಕಿತರು ವಾಗ್ವಾದಕ್ಕಿಳಿದು ಆಸ್ಪತ್ರೆಗೆ ತೆರಳಲು ನಿರಾಕರಿಸಿ, ಹಠ ಹಿಡಿದಿದ್ದರು. 

ಯಾದಗಿರಿ: ತಾಂಡಾ ನಿವಾಸಿಗಳಲ್ಲೇ ಕೊರೋನಾ ತಾಂಡವ..!

ನಮಗೆ ಇಲ್ಲಿ ಯಾವುದೇ ಸೌಲಭ್ಯ ನೀಡದೆ, ಕುರಿಗಳಂತೆ ತುಂಬಿದ್ದೀರಿ. ಸರಿಯಾಗು ಊಟ ಉಪಾಹಾರ ನೀಡದೆ ಸತಾಯಿಸಿದ್ದೀರಿ. ನಮ್ಮಲ್ಲಿ ಚಿಕ್ಕಚಿಕ್ಕ ಮಕ್ಕಳಿವೆ ಹಸಿವಿನಿಂದ ಗೋಳಾಡುವುದನ್ನು ನಾವು ನೋಡಲಾಗುವುದಿಲ್ಲ. ನಮಗೆ ಜ್ವರ ಮೈಕೈನೋವು ಬಂದರೆ ಯಾರೂ ಬಂದು ನೋಡುವುದಿಲ್ಲ ಎಂದು ಅಽಕಾರಿಗಳ ವಿರುದ್ಧ ಕಿಡಿ ಕಾರಿದ ಸೋಂಕಿತರು, ನಾವು ಸತ್ತರೂ ಇಲ್ಲೇ ಸಾಯುತ್ತೇವೆ. ಯಾವ ಆಸ್ಪತ್ರೆಗೆ ಬರುವುದಿಲ್ಲವೆಂದು ಹಠ ಹಿಡಿದಿದ್ದರು.
ಸುದ್ದಿ ತಿಳಿದು ಕೇಂದ್ರಕ್ಕೆ ಆಗಮಿಸಿದ ತಾಲೂಕ ದಂಡಾಧಿಕಾರಿ ಜಗನ್ನಾಥ್ ರೆಡ್ಡಿ ಪ್ರಯತ್ನಿಸಿದರೂ ಸೋಂಕಿತರು ತಮ್ಮ ಪಟ್ಟು ಸಡಿಲಿಸಲಿಲ್ಲ. ಮಧ್ಯಾಹ್ನದವರೆಗೆ ಮಾತುಕತೆ ಮೂಲಕ ಸಂಧಾನ ನಡೆಸಿದ ಇನ್ಸಪೆಕ್ಟರ್ ಹನುಮರೆಡ್ಡಪ್ಪ ಕೊನೆಗೂ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ದರು. ತಾಲೂಕು ಆರೋಗ್ಯ ಅಽಕಾರಿ ಡಾ ರಮೇಶ್ ಗುತ್ತೇದಾರ್, ಹಿರಿಯ ಆರೋಗ್ಯ ಸಹಾಯಕ ಸಂತೋಷ ಮುಲಜೆ, ಸಂಗಣ್ಣ ನುಚ್ಚಿನ್, ಮಲ್ಲಪ್ಪ ಕಾಂಬ್ಳೆ, ಶಿವರಾಜ್, ಭೀಮನಗೌಡ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು.

ಯಾವ ಕೇಂದ್ರದಲ್ಲೂ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗಿದೆ. ಸಮಾಧಾನದಿಂದ ಅವರ ಮನವೊಲಿಸಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಶಹಾಪುರ ತಹಸೀಲ್ದಾರ್‌ ಜಗನ್ನಾಥ ರೆಡ್ಡಿ ಅವರು ಹೇಳಿದ್ದಾರೆ.
ಆರಂಭದಲ್ಲಿ ಎಷ್ಟೇ ಮನವಿ ಮಾಡಿದರೂ ಅವರೆಲ್ಲರೂ ಒಪ್ಪಲು ಸಿದ್ಧವಿರಲಿಲ್ಲ. ಮಧ್ಯಾಹ್ನದವರೆಗೆ ನಡೆಸಿದ ಮಾತುಕತೆ ಯಿಂದಾಗಿ ಕೊನೆಗೂ ಆಸ್ಪತ್ರೆಗೆ ಬರಲು ಒಪ್ಪಿದರು. ಕೂಡಲೇ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳಿಸಲಾಯಿತು ಎಂದು ಶಹಾಪುರ ನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಹನುಮರೆಡ್ಡಪ್ಪ ಅವರು ಹೇಳಿದ್ದಾರೆ. 
 

click me!