ಗ್ರಾಮ ಸಭೆಗೆ ಲೋಕೋಪಯೋಗಿ, ಜಲಾನಯನ, ಆಹಾರ, ಕೃಷಿ, ಅಬಕಾರಿ ಸೇರಿದಂತೆ ಇತರ ಇಲಾಖಾಧಿಕಾರಿಗಳು ಗೈರಾಗಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿದ ಘಟನೆ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋಮವಾರಪೇಟೆ (ಜು.30) : ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆ ಅಧ್ಯಕ್ಷ ಶೇಖರ್ ಅಧ್ಯಕ್ಷತೆಯಲ್ಲಿ ಗುರುವಾರ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆ ಪ್ರಾರಂಭವಾಗುವುದಕ್ಕೆ ಮೊದಲು ಗ್ರಾಮ ಸಭೆಗೆ ಲೋಕೋಪಯೋಗಿ, ಜಲಾನಯನ, ಆಹಾರ, ಕೃಷಿ, ಅಬಕಾರಿ ಸೇರಿದಂತೆ ಇತರ ಇಲಾಖಾಧಿಕಾರಿಗಳು ಗೈರಾಗಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿದರು. ನಂತರ ಗ್ರಾಮಸ್ಥರ ಮನವೊಲಿಸಿ ಸಭೆ ಪ್ರಾರಂಭಿಸಲಾಯಿತು.
ಗ್ರಾಮಪಂಚಾಯಿತಿ(_Grama Panchayati) ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಮಂಡಳಿ ವಿಫಲವಾಗಿದೆ ಎಂದು ದೊಡ್ಡತೋಳೂರಿನ ಸುರೇಶ್ ಹಾಗೂ ಕೂತಿ ಗ್ರಾಮದ ದಿನೇಶ್ ಆರೋಪಿಸಿದರು.
undefined
ಸೋಮವಾರಪೇಟೆ: ಒಕ್ಕಲಿಗರ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮ
ಸೋಮವಾರಪೇಟೆ(Somavarapete)ಯಿಂದ ಕೂತಿ ಗ್ರಾಮದ ವರೆಗೆ ರಸ್ತೆ ಹಾಳಾಗಿದ್ದು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ರಸ್ತೆ ಆಗುವವರೆಗೂ ಗ್ರಾಮಸಭೆ ನಡೆಸಬಾರದು ಎಂದು ಒತ್ತಾಯಿಸಿದರು.
ಇಂದಿನ ಗ್ರಾಮಸಭೆಗೆ ಹಲವು ಇಲಾಖಾಧಿಕಾರಿಗಳು ಗೈರಾಗಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಮುಂದಿನ ಒಂದು ವಾರದೊಳಗೆ ಮತ್ತೊಮ್ಮೆ ಗ್ರಾಮಸಭೆ ಕರೆಯಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ಭಾಗವಾಗಿರುವ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೀಮೆಎಣ್ಣೆ ವಿತರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿಂದೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಸಂದರ್ಭ ಸೀಮೆಎಣ್ಣೆ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದರೂ ಈವರೆಗೆ ಈಡೇರಿಲ್ಲ ಎಂದರು.
8 ವರ್ಷವಾದ್ರೂ ಮುಗಿದಿಲ್ಲ ಕಾಮಗಾರಿ: ಸೋಮವಾರಪೇಟೆ ಹಾಕಿ ಕ್ರೀಡಾಂಗಣ ಈಗ ಪುಂಡರ ತಾಣ!
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ ಎಂದು ಗ್ರಾಮಸ್ಥ ಐ.ಎಚ್. ನಿಂಗಪ್ಪ ಆರೋಪಿಸಿದರು. ತೋಳೂರುಶೆಟ್ಟಳ್ಳಿಯ ರಾಜಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ರಸ್ತೆ ಸಮಸ್ಯೆ ಬಗೆಹರಿಯದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದರು.
ತೋಟಗಾರಿಕಾ ಇಲಾಖೆಯ ಹೇಮಂತ್ ಅವರು ಯಂತ್ರೋಪಕರಣ ಖರೀದಿ ಬಗ್ಗೆ ಸರಕಾರದಿಂದ ಲಭ್ಯವಿರುವ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು. ಮುಂದಿನ 2 ತಿಂಗಳಲ್ಲಿ ರೈತರಿಗೆ ಹೈಬ್ರೀಡ್ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದರು.
ತೋಳೂರುಶೆಟ್ಟಳ್ಳಿ (Toluru Shettahalli)ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಗ್ರಾ.ಪಂ.ಗೆ ಸ್ಥಳೀಯರು ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಬಸ್ ನಿಲ್ದಾಣವು ಸಂಜೆ ವೇಳೆ ಮದ್ಯಪಾನಿಗಳ ಅಡ್ಡೆಯಾಗುತ್ತಿದ್ದು, ಮಹಿಳೆಯರು ಸೇರಿದಂತೆ ಮಕ್ಕಳು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯಲ್ಲಿ ಮದ್ಯದ ಖಾಲಿ ಪೊಟ್ಟಣಗಳು ಕಂಡುಬರುತ್ತಿವೆ ಎಂದು ದಿನೇಶ್, ಸುರೇಶ್ ಸೇರಿದಂತೆ ಇತರರು ಆರೋಪಿಸಿದರು.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಕರಿಬಸವರಾಜು ಮಾತನಾಡಿ, ಫಾರಂ 57ರಡಿ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಮೋಹಿತ್, ನವೀನ್, ದಿವ್ಯ, ಆರತಿ, ಚಂದ್ರಶೇಖರ್, ನೋಡಲ್ ಅಧಿಕಾರಿ ಹೇಮಂತ್ ಮತ್ತಿತರರು ಇದ್ದರು.
ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆ ಅಧ್ಯಕ್ಷ ಶೇಖರ್ ಅಧ್ಯಕ್ಷತೆಯಲ್ಲಿ ಗುರುವಾರ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆಯಿತು.
ಸೋಮವಾರಪೇಟೆ ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದರು.