ಅನಾಥ ಮಕ್ಕಳಿಗೆ ಹಿಂದುಳಿದ ವರ್ಗಗಳಲ್ಲಿಯೇ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ: ಜಯಪ್ರಕಾಶ ಹೆಗ್ಡೆ
ಗದಗ(ನ.16): ಜಾತಿ ಗೊತ್ತಿಲ್ಲದ 6000 ಅನಾಥ ಮಕ್ಕಳಿಗೆ ಸೂಕ್ತ ಜಾತಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸಂಪೂರ್ಣ ಅಧ್ಯಯನ ವರದಿ ಸಿದ್ಧವಾಗಿದ್ದು 15 ದಿನಗಳೊಳಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಅನಾಥ ಮಕ್ಕಳಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮಾಹಿತಿ ಪಡೆಯಲಾಗಿದ್ದು, ಯಾವ ಮಕ್ಕಳಿಗೆ ಜಾತಿ ಗೊತ್ತಿದೆ ಆ ಮಕ್ಕಳಿಗೆ ತಂದೆಯ ಜಾತಿಯಲ್ಲಿಯೇ ಮೀಸಲಾತಿ ಕಲ್ಪಿಸುವುದು. ತಂದೆ ತಾಯಿ ಗೊತ್ತಿಲ್ಲದೇ ಇರುವ, ಹುಟ್ಟಿದ ತಕ್ಷಣವೇ ಬಿಟ್ಟು ಹೋಗಿರುವ ಮಗುವನ್ನು ಬಾಲ ಮಂದಿರದಲ್ಲಿ ಪಾಲನೆ ಪೋಷಣೆ ಮಾಡಿ ಬೆಳೆಸಲಾಗುತ್ತದೆ, ಆದರೆ ಆ ಮಗುವಿಗೆ ಯಾವ ಜಾತಿಯಲ್ಲಿ ಮೀಸಲಾತಿ ಕಲ್ಪಿಸಬೇಕು ಎನ್ನುವ ಕುರಿತು ಆಯೋಗ ರಚನೆಯಾದ ದಿನದಿಂದಲೇ ಗಂಭೀರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಯೋಗದ ಎಲ್ಲಾ ಸದಸ್ಯರು ಅಧಿಕಾರಿಗಳು ಸಮಗ್ರವಾಗಿ ಅಧ್ಯಯನ ನಡೆಸಿದ್ದೇವೆ. ಅನಾಥ ಮಕ್ಕಳಿಗೆ ಹಿಂದುಳಿದ ವರ್ಗಗಳಲ್ಲಿಯೇ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಅಂತ ತಿಳಿಸಿದ್ದಾರೆ.
GADAG: ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ಗೊಂದಲ ಸೃಷ್ಟಿಸಿದ ಶಿಕ್ಷಣ ಇಲಾಖೆ!
ಈ ಕುರಿತು ಆಯೋಗ ಸಭೆ ನಡೆಸಿ, ಎಷ್ಟು ಪ್ರತಿಶತ ಎನ್ನುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುವುದು, ಸಮಗ್ರ ಅಧ್ಯಯನದ ವರದಿಯನ್ನು ಇನ್ನು 15 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಕ್ರಮ ತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಷಯ.. ಅನಾಥ ಮಕ್ಕಳಿಗೆ ಜಾತಿ ಮೀಸಲಾತಿ ಕಲ್ಪಿಸಬೇಕು, ಅವರಿಗೂ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕು, ಅವರದಲ್ಲದ ತಪ್ಪಿಗೆ ಅವರ್ಯಾಕೆ ಶಿಕ್ಷೆ ಅನುಭವಿಸಬೇಕು ಎನ್ನುವುದು ಆಯೋಗ ರಚನೆಯಾದ ದಿನದಿಂದಲೇ ಚಿಂತನೆ ಮಾಡಿ ಅಗತ್ಯ ಅಧ್ಯಯನ ವರದಿ ಸಿದ್ಧವಾಗಿದೆ, ಒಂದು ಮಹತ್ವದ ನಿರ್ಧಾರವನ್ನು ಸರ್ಕಾರಕ್ಕೆ ನೀಡುವ ಸಂತೃಪ್ತಿ ಇದೆ ಎಂದರು.
ಮನವಿ ಸಲ್ಲಿಸಲು ಬಂದವರಿಂದ ಗೊಂದಲ..!
ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಲು ಪಂಚಮಸಾಲಿ ಹಾಗೂ ಇನ್ನುಳಿದ ಈಗಾಗಲೇ 2A ಮೀಸಲಾತಿಯಲ್ಲಿರುವ ಸಮುದಾಯಗಳ ಮುಖಂಡರು ಒಮ್ಮೆಲೇ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ವೇಳೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅದರಲ್ಲಿಯೂ ಈಗಾಗಲೇ 2A ಮೀಸಲಾತಿ ಪಡೆಯುತ್ತಿರುವ ಸಣ್ಣ ಸಮುದಾಯಗಳ ಮುಖಂಡರು 1 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಮುಂದುವರಿದ ಸಮುದಾಯವನ್ನು 2ಎಕ್ಕೆ ಸರ್ಪೇಡೆ ಮಾಡಬಾರದು ಎಂದು ಹೇಳುತ್ತಿದ್ದಂತೆ ಅಲ್ಲಿಯೇ ಇದ್ದ ಪಂಚಮಸಾಲಿ ಸಮುದಾಯ ಮುಖಂಡರು ಕೆಂಡಾ ಮಂಡಲವಾದರು, ತಮಗೆ ಮೀಸಲಾತಿ ಬೇಕಾ ಅದನ್ನು ಪಡೆದುಕೊಳ್ಳಲಿ, ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಡಿ ಎಂದು ಪರೋಕ್ಷವಾಗಿ ಹೇಳಲು ಇವರ್ಯಾರು ಎಂದು ಕೆಲವಾರು ಮುಖಂಡರು ಮಾತನಾಡಲು ಪ್ರಾರಂಭಿಸಿದ ವೇಳೆ ಗೊಂದಲ ಸೃಷ್ಟಿಯಾಗಿತ್ತು. ನಂತರ ಪ್ರತ್ಯೇಕವಾಗಿಯೇ ಅರ್ಜಿ ಸಲ್ಲಿಸಿದರು.